ಪಂಚಾಯತ್‌ರಾಜ್ ವ್ಯವಸ್ಥೆಗೆ ರಾಜ್ಯ ಸರಕಾರದ ಕೊಡಲಿಯೇಟು: ರೋಶನಿ ಒಲಿವೆರಾ ಆರೋಪ

Update: 2022-10-06 14:14 GMT

ಉಡುಪಿ, ಅ.6: ರಾಜ್ಯ ಸರಕಾರ, ಮುಖ್ಯ ಕಾರ್ಯದರ್ಶಿಗಳ ಮೂಲಕ ಆದೇಶವೊಂದನ್ನು ಪಂಚಾಯತ್‌ಗಳಿಗೆ ರವಾನಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧ್ಯಕ್ಷರ ಹಾಗೂ ಪಂಚಾಯತ್ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿ ಗ್ರಾಮ ಸ್ವರಾಜ್ಯದ ಆಶಯಗಳಿಗೆ ಕೊಡಲಿಯೇಟು ನೀಡಿದೆ ಎಂದು ಕರ್ನಾಟಕ ರಾಜ್ಯದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಹ ಸಂಚಾಲಕಿ ಹಾಗೂ ಮೈಸೂರು ವಿಭಾಗದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಸ್ತುವಾರಿ ರೋಶನಿ ಒಲಿವೆರಾ ಆರೋಪಿಸಿದ್ದಾರೆ.

ಪಂಚಾಯತ್‌ ರಾಜ್ ವ್ಯವಸ್ಥೆಯಲ್ಲಿ ಇನ್ನು ಮುಂದಕ್ಕೆ ಬಿಲ್ ಪಾಸ್ ಮಾಡುವ ಅಥವಾ ಚೆಕ್ ಮೂಲಕ ಪಾವತಿಗೈಯುವ ವ್ಯವಸ್ಥೆಗೆ ಅಧ್ಯಕ್ಷರು ಸಹಿ ಮಾಡುವಂತಿಲ್ಲ. ಈ ಅಧಿಕಾರವನ್ನು ಪಿಡಿಓ ಮತ್ತು ಗ್ರಾಪಂನ ಲೆಕ್ಕ ಸಹಾಯಕ ರಿಗೆ ಜಂಟಿಯಾಗಿ ನೀಡಲಾಗಿದೆ. ನಿರಾಕ್ಷೇಪಣಾ ಪತ್ರ ಮುಂತಾದ ಆದೇಶ ಗಳನ್ನು ಪಂಚಾಯತ್ ಸಭೆಗಳಲ್ಲಿ ಮಂಡಿಸಿ ಯಾವುದೇ ಆಕ್ಷೇಪಣೆಗಳಿಲ್ಲದಿದ್ದಲ್ಲಿ ಮುಂದೆ ಆಯಾಯ ವ್ಯಕ್ತಿಗೆ ನೀಡುವ ಅಧಿಕಾರವನ್ನು ಕಳಚಿ ನೇರವಾಗಿ ಪಿಡಿಓ ಇವುಗಳನ್ನೆಲ್ಲಾ ನೀಡಬಹುದೆಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ ಎಂದು ರೋಶನಿ ಅವರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಪಂಚಾಯತ್‌ರಾಜ್ ಅಧಿನಿಯಮಗಳಿಗೆ ಮಾಡಿರುವ ತಿದ್ದುಪಡಿಯಿಂದ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗಲಿದೆ. ಪಂಚಾಯತ್ ಅಧ್ಯಕ್ಷರ ಹಾಗೂ ಸದಸ್ಯರ ಅಧಿಕಾರವನ್ನು ಕಸಿದುಕೊಳ್ಳಲು ಇಂಥ ಆದೇಶ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನಾವೆಲ್ಲರೂ ತಿಳಿಯಬೇಕಾಗಿದೆ. ಆದ್ದರಿಂದ ಈ ವ್ಯವಸ್ಥೆಯನ್ನು ಕೂಡಲೇ ತಿದ್ದುಪಡಿ ಮಾಡದಿದ್ದಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರನ್ನು ಸೇರಿಸಿಕೊಂಡು ಉಗ್ರವಾದ ಹೋರಾಟ ಮಾಡುವುದಾಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News