ಬೆಲೆಯೇರಿಕೆ ಬವಣೆ: ಎಲ್‌ಪಿಜಿ ಬಳಕೆಗೆ ಪಿಎಂಯುವೈ ಫಲಾನುಭವಿಗಳ ಹಿಂದೇಟು

Update: 2022-10-07 06:32 GMT

ಕೃಪೆ: thewire.in 

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ದತ್ತಾಂಶಗಳ ಪ್ರಕಾರ ದೇಶದ ಮೂರು ತೈಲ ಮಾರಾಟ ಕಂಪೆನಿಗಳಾದ (ಒಎಂಸಿ) ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆಗಳು 2021-22ನೇ ವಿತ್ತೀಯ ವರ್ಷದಲ್ಲಿ ಭಾರತದ 30.5 ಕೋಟಿ ಸಕ್ರಿಯ ಎಲ್‌ಪಿಜಿ ಚಂದಾದಾರರಿಗೆ ಒಟ್ಟು 179 ಕೋಟಿ ಸಿಲಿಂಡರ್‌ಗಳನ್ನು ಮಾರಾಟ ಮಾಡಿವೆ.

 ಈ ಪೈಕಿ 9 ಕೋಟಿ ಪ್ರಧಾನ ಮಂತ್ರಿ ಉಜ್ವಲ (ಪಿಎಂಯುವೈ) ಯೋಜನೆಯ ಫಲಾನುಭವಿಗಳು ವರ್ಷಕ್ಕೆ ಪ್ರತೀ ಗ್ರಾಹಕನಿಗೆ ಸರಾಸರಿ 3.5 ಸಿಲಿಂಡರ್‌ಗಳಂತೆ ಒಟ್ಟು 31 ಕೋಟಿ ಸಿಲಿಂಡರ್‌ಗಳನ್ನು ಮರುಪೂರಣ (ರೀಫಿಲ್)ಗೊಳಿಸಿದ್ದಾರೆ. ಇನ್ನೊಂದೆಡೆ 21.5 ಕೋಟಿ ಪಿಎಂಯುವೈಯೇತರ ಗ್ರಾಹಕರು, 148 ಕೋಟಿ ಸಿಲಿಂಡರ್‌ಗಳನ್ನು ಮರುಪೂರಣಗೊಳಿಸಿದ್ದು ಇದು ಪ್ರತೀ ಗ್ರಾಹಕನಿಗೆ ವರ್ಷಕ್ಕೆ ಸರಾಸರಿ ಏಳು ಸಿಲಿಂಡರ್‌ಗಳಷ್ಟಾಗಿವೆ.
ಒಟ್ಟಾರೆಯಾಗಿ 2022ನೇ ಹಣಕಾಸು ವರ್ಷದಲ್ಲಿ ಭಾರತದ ಶೇ.99 ಕುಟುಂಬಗಳು ಈಗ ಎಲ್‌ಪಿಜಿ ಸಂಪರ್ಕಗಳನ್ನು ಹೊಂದಿವೆಯೆಂದು ಪಿಎಂಯುವೈನ ಅಧಿಕೃತ ವೆಬ್‌ಸೈಟ್ ಹೇಳಿಕೊಂಡಿದೆ. ಆದರೆ ವಾಸ್ತವ ಚಿತ್ರಣ ಬೇರೆಯೇ ಇರುವ ಹಾಗೆ ಕಾಣುತ್ತಿದೆ.
 
 ಗ್ರಾಮೀಣ ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಕಟ್ಟಿಗೆ, ಕಲ್ಲಿದ್ದಲು ಹಾಗೂ ಸೆಗಣಿಯಂತಹ ಸಾಂಪ್ರದಾಯಿಕ ಅಡುಗೆ ಇಂಧನದ ಬದಲಿಗೆ, ಪರಿಶುದ್ಧವಾದ ಅಡುಗೆ ಇಂಧನ ದೊರೆಯುವಂತೆ ಮಾಡುವ ಉದ್ದೇಶದಿಂದ ಪಿಎಂಯುವೈ ಯೋಜನೆಯನ್ನು ಮೇ 2016ರೊಳಗೆ ಆರಂಭಿಸಲಾಯಿತು. ಆರ್‌ಟಿಐ ದತ್ತಾಂಶಗಳನ್ನು ಸಾಮಾನ್ಯರೀತಿಯಲ್ಲಿ ಲೆಕ್ಕಹಾಕಿದರೂ, ಎಲ್‌ಪಿಜಿಯನ್ನೇ ಬಳಸಿಕೊಂಡು ಎಲ್ಲರೂ ಅಡುಗೆಯನ್ನು ಮಾಡಲು ವರ್ಷಕ್ಕೆ ಏಳರಿಂದ ಎಂಟು ಸಿಲಿಂಡರ್‌ಗಳೇ ಬೇಕಾಗುತ್ತವೆ ಎಂದು ಇಂಧನ ನೀತಿಯ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆಸಿರುವ ಪುಣೆ ಮೂಲದ ಚಿಂತನ ಚಿಲುಮೆ (ಥಿಂಕ್‌ಟ್ಯಾಂಕ್)ಯ ಹಿರಿಯ ಸಂಶೋಧಕ ಅಶೋಕ್ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

‘‘ಆದರೆ ಉಜ್ವಲೇತರ ಗ್ರಾಹಕರಂತೆ ಉಜ್ವಲ ಫಲಾನುಭವಿಗಳು ಹಲವಾರು ಸಿಲಿಂಡರ್‌ಗಳನ್ನು ಖರೀದಿಸಲು ಶಕ್ತರಾಗಿಲ್ಲ ಅಥವಾ ಇಚ್ಛೆಯನ್ನು ಹೊಂದಿಲ್ಲವೆಂಬುದು ಆರ್‌ಟಿಐ ದತ್ತಾಂಶಗಳಿಂದ ತಿಳಿದುಬಂದಿದೆ’’ ಎಂದವರು ಹೇಳುತ್ತಾರೆ. ಎಲ್‌ಪಿಜಿ ಸಂಪರ್ಕಕ್ಕಾಗಿ ನೋಂದಾಯಿಸಿಕೊಂಡ ಹೊರತಾಗಿಯೂ ಒಂದೇ ಒಂದು ಸಿಲಿಂಡರ್ ಮರುಪೂರಣ ಮಾಡಿರದ ಹಲವಾರು ಮಂದಿಯಿದ್ದಾರೆ ಎಂದವರು ಹೇಳುತ್ತಾರೆ.

ಈ ಯೋಜನೆಯು ಜಾರಿಗೊಂಡಾಗಿನಿಂದ ಪಿಎಂಯುವೈ ಫಲಾನುಭವಿಗಳಲ್ಲಿ ಎಲ್‌ಪಿಜಿ ಖರೀದಿ ಪ್ರಮಾಣವು 2020-21ನೇ ಇಸವಿಯನ್ನು ಹೊರತುಪಡಿಸಿ ಉಳಿದ ವಿತ್ತೀಯ ವರ್ಷಗಳಲ್ಲಿ ಕಡಿಮೆ ಮಟ್ಟದಲ್ಲಿಯೇ ಉಳಿದುಕೊಂಡಿದೆ. 2021-22ರಲ್ಲಿ ಕೋವಿಡ್-19 ಪರಿಹಾರ ಪ್ಯಾಕೇಜ್‌ನ ಭಾಗವಾಗಿ ಕೇಂದ್ರ ಸರಕಾರವು ಪಿಎಂಯುವೈ ಫಲಾನುಭವಿಗಳಿಗೆ ಸಿಲಿಂಡರ್ ಮರುಪೂರಣದ ಉಚಿತ ಕೊಡುಗೆಯನ್ನು ನೀಡಿತ್ತು.

ಪಿಎಂಯುವೈ ಫಲಾನುಭವಿಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಖರೀದಿಯ ಮೇಲೆ ಪ್ರಭಾವ ಬೀರಿದ ಅಂಶಗಳು:
ಪಿಎಂಯುವೈ ಫಲಾನುಭವಿಗಳ ನಡುವೆ ಕಡಿಮೆ ಪ್ರಮಾಣದ ಎಲ್‌ಪಿಜಿ ಖರೀದಿಗೆ ಹಲವಾರು ಕಾರಣಗಳಿವೆ. ಅಧಿಕ ದರದಿಂದಾಗಿ ಸಿಲಿಂಡರ್‌ಗಳ ಮರುಪೂರಣವು ಭರಿಸಲು ಅಸಾಧ್ಯವಾಗುವಂತಾಗಿದೆ. ವಿತರಕರು ದೂರದ ಸ್ಥಳಗಳಲ್ಲಿದ್ದರೆ ಅಧಿಕ ಮೊತ್ತದ ಸಾರಿಗೆ ವೆಚ್ಚವನ್ನು ಕೂಡಾ ಅವರು ಭರಿಸಬೇಕಾಗುತ್ತದೆ, ಎಲ್‌ಪಿಜಿಯ ಪ್ರಯೋಜನಗಳ ಬಗ್ಗೆ ಅರಿವಿನ ಕೊರತೆ ಅಥವಾ ಕುಟುಂಬದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಶಕ್ತಿಯೂ ಮಹಿಳೆಗೆ ಇಲ್ಲದೆ ಇರುವುದೂ ಕಾರಣಗಳಾಗಿವೆ.

 ದಿಲ್ಲಿ ಮೂಲದ ಇಂಧನ ಮಂಡಳಿ, ಪರಿಸರ ಹಾಗೂ ಜಲ (ಸಿಇಇಡಬ್ಲು) ನಡೆಸಿದ ಸಮೀಕ್ಷೆ ಕೂಡಾ ಹೆಚ್ಚಿರುವ ಎಲ್‌ಪಿಜಿ ಲಭ್ಯತೆಯ ಹೊರತಾಗಿಯೂ, ಶೇ.38ರಷ್ಟು ಭಾರತೀಯ ಕುಟುಂಬಗಳು, ಅದರಲ್ಲೂ ಪ್ರಮುಖವಾಗಿ ಗ್ರಾಮಾಂತರ ಪ್ರದೇಶಗಳವರು ಎಲ್‌ಪಿಜಿ ಸಿಲಿಂಡರ್‌ಗಳ ಮರುಪೂರಣದ ಅಧಿಕ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಉಚಿತವಾಗಿ ದೊರೆಯುವ ಕಟ್ಟಿಗೆ, ಸೆಗಣಿಯ ಬೆರಣಿ ಮತ್ತಿತರ ಸಾಂಪ್ರದಾಯಿಕ ಇಂಧನಗಳನ್ನು ಅವಲಂಭಿಸಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ.

 2014ರಲ್ಲಿ ಎಲ್‌ಪಿಜಿಯ ಮರುಪೂರಣದ ದರವು 410 ರೂ. ಇದ್ದುದು, ಈಗ 1060 ರೂ.ಗೆ ತಲುಪಿದೆ. ಹೀಗಾಗಿ, ಸರಾಸರಿ ನಾಲ್ಕು ಮಂದಿ ಸದಸ್ಯರ ಒಂದು ಕುಟುಂಬಕ್ಕೆ ತಮ್ಮ ವಾರ್ಷಿಕ ಅಡುಗೆ ಇಂಧನದ ಆವಶ್ಯಕತೆಗಳನ್ನು ಈಡೇರಿಸಲು ವರ್ಷಕ್ಕೆ 7 ಸಾವಿರ ರೂ. ವೆಚ್ಚ ಬೀಳುತ್ತದೆ. ಕೋವಿಡ್-19 ಸಾಂಕ್ರಾಮಿಕದ ಕಾರಣ ಆರ್ಥಿಕ ಹಿಂಜರಿತದಿಂದಾಗಿ ವ್ಯಾಪಕವಾಗಿ ಬಾಧಿತವಾಗಿರುವ ಕೋಟ್ಯಂತರ ಬಡಕುಟುಂಬಗಳಿಗೆ ಇದೊಂದು ದೊಡ್ಡ ಹೊರೆಯಾಗಿದೆ.

ಕಳೆದ ಒಂದು ವರ್ಷದಲ್ಲಿ ಎಲ್‌ಪಿಜಿ ಮರುಪೂರಣದ ವೆಚ್ಚವು ಪ್ರತೀ ಸಿಲಿಂಡರ್‌ಗೆ 218 ರೂ. ಏರಿಕೆಯಾಗಿದೆ. ಎಲ್‌ಪಿಜಿ ಬೆಲೆ ಏರಿಕೆಯು ಮಧ್ಯಮ ವರ್ಗದವರ ಜೇಬಿಗೆ ಕತ್ತರಿಹಾಕಿದರೆ, ಬಡಕುಟುಂಬಗಳಿಗಿರುವ ಸಬ್ಸಿಡಿಯ ಪರಿಣಾಮವನ್ನು ಕೂಡಾ ದುರ್ಬಲಗೊಳಿಸಿದೆ.

ನೇರ ಪ್ರಯೋಜನ ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್)ಯಡಿ ಕೌಟುಂಬಿಕ ಆದಾಯದಲ್ಲಿ ಪಿಎಂಯುವೈ ಫಲಾನುಭವಿಗಳು ಮೊದಲಿಗೆ ಮರುಪೂರಣದ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ ಹಾಗೂ ಆನಂತರ ಸಬ್ಸಿಡಿ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಇದರಿಂದಾಗಿ ಎಲ್‌ಪಿಜಿ ಸಿಲಿಂಡರ್‌ನ ಮರುಪೂರಣದ ಪೂರ್ತಿ ಬೆಲೆಯನ್ನು ಪಾವತಿಸುವುದು ಅವರಿಗೆ ಒಂದು ದೊಡ್ಡ ಸವಾಲಾಗಿದೆ.
 ಇದರ ಹೊರತಾಗಿ, ತಮಗೆ ಇಂಧನ ಸಬ್ಸಿಡಿಗಳು ಸಕಾಲದಲ್ಲಿ ಲಭಿಸದೆ ಇರುವ ಬಗ್ಗೆ ಹಲವಾರು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಶೇ.13ರಷ್ಟು ಕುಟುಂಬಗಳಿಗೆ ತಮ್ಮ ಕೊನೆಯ ಎಲ್‌ಪಿಜಿ ಮರುಪೂರಣದ ಸಬ್ಸಿಡಿಯು ಸಕಾಲದಲ್ಲಿ ದೊರೆತಿಲ್ಲ ಹಾಗೂ ಶೇ. 23ರಷ್ಟು ಮಂದಿಗೆ ತಾವು ಸಬ್ಸಿಡಿ ಪಡೆದುಕೊಂಡಿದ್ದೇವೆಯೇ ಎಂಬುದೂ ತಿಳಿದಿಲ್ಲ.

ಮರುಪೂರಣಗೊಂಡ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯ ಕೊರತೆ ಅಥವಾ ವಿತರಣೆಯಲ್ಲಿ ವಿಳಂಬ ಕೂಡಾ ಜನರ ನಿಯಮಿತ ಎಲ್‌ಪಿಜಿ ಬಳಕೆಗೆ ಅಡ್ಡಗಾಲಾಗಿದೆ ಎಂದು ಸಮೀಕ್ಷೆ ಹೇಳಿದೆ.

ಹೆಚ್ಚು ಸಬ್ಸಿಡಿಗಳನ್ನು ಒದಗಿಸುವುದರಿಂದ ಎಲ್‌ಪಿಜಿ ಬಳಕೆಯ ಹೆಚ್ಚಳದಲ್ಲಿ ಉಂಟಾಗಿರುವ ಸವಾಲನ್ನು ನಿಭಾಯಿಸಲು ಇರುವ ಏಕೈಕ ದಾರಿಯಾಗಿದೆ ಎಂದು ಶ್ರೀನಿವಾಸ್ ‘ದಿ ವೈರ್’ ಸಂಸ್ಥೆಗೆ ತಿಳಿಸಿದ್ದಾರೆ. ಸರಕಾರವು ಅತ್ಯಂತ ಸುಧಾರಿತವಾದ ಸಬ್ಸಿಡಿ ವಿಧಾನವನ್ನು ಅಂಗೀಕರಿಸುವ ಅಗತ್ಯವಿದೆ. ಪ್ರಸಕ್ತ ಪಿಎಂಯುವೈ ಫಲಾನುಭವಿಗಳು ಇಡೀ ಸಿಲಿಂಡರ್ ವೆಚ್ಚವನ್ನು ಪಾವತಿಸುವ ಅಗತ್ಯವಿದೆ ಹಾಗೂ ಸಬ್ಸಿಡಿ ಪಾವತಿಗಾಗಿ ಅವರು ಕಾಯುವಂತಹ ಪರಿಸ್ಥಿತಿಯಿದೆ. ಇದರಿಂದಾಗಿ ಬಡ ಗ್ರಾಹಕರ ನಗದು ಹರಿವಿನ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತದೆ ಹಾಗೂ ಎಲ್‌ಪಿಜಿ ಮರುಪೂರಣವನ್ನು ಉತ್ತೇಜಿಸುವುದಿಲ್ಲ.

ಈ ವಿಷಯವನ್ನು ಬಗೆಹರಿಸಲು ಸರಕಾರವು ಒಎಂಸಿಗೆ ಮುಂಗಡ ಸಬ್ಸಿಡಿಯನ್ನು ಅವರ ಮಾರಾಟದ ಅಂದಾಜುಗಳನ್ನು ಆಧರಿಸಿ ಪಾವತಿ ಮಾಡಬಹುದಾಗಿದೆ. ಇದನ್ನು ತ್ರೈಮಾಸಿಕ ಆಧಾರದಲ್ಲಿ ನೀಡುವ ವ್ಯವಸ್ಥೆಯನ್ನು ರೂಪಿಸಬಹುದಾಗಿದೆ ಎಂದು ಶ್ರೀನಿವಾಸ್ ಅಭಿಪ್ರಾಯಿಸುತ್ತಾರೆ.
ಎಲ್‌ಪಿಜಿ ವಿತರಣಾ ಜಾಲವನ್ನು ಅಭಿವೃದ್ಧಿಪಡಿಸುವ ಹಾಗೂ ಸಾರ್ವಜನಿಕರಂಗದ ತೈಲ ಮಾರುಕಟ್ಟೆ ಕಂಪೆನಿಗಳು ಹಾಗೂ ವಿತರಕರ ಉತ್ತರದಾಯಿತ್ವವನ್ನು ಹೆಚ್ಚಿಸುವ ಅಗತ್ಯವಿದೆಯೆಂದು ಅವರು ಹೇಳುತ್ತಾರೆ.

ಗ್ರಾಮಾಂತರ ಪ್ರದೇಶಗಳಲ್ಲಿನ ಎಲ್‌ಪಿಜಿ ವಿತರಕರು ತಮ್ಮ ಆದಾಯವನ್ನು ಹೆಚ್ಚಿಸುವುದಕ್ಕಾಗಿ ಅದೇ ಆವರಣದಲ್ಲಿ ಉದ್ಯಮಗಳನ್ನು ನಡೆಸುವುದಕ್ಕೆ ಅನುಮತಿ ನೀಡಲಾಗಿದೆ ಎಂದವರು ಹೇಳುತ್ತಾರೆ.

ಎಲ್‌ಪಿಜಿ ಉದ್ಯಮ ವಲಯದಲ್ಲಿ ಸೇವಾ ಗುಣಮಟ್ಟ, ನ್ಯಾಯಬೆಲೆ ಹಾಗೂ ವಿತರಣೆಯನ್ನು ಖಾತರಿಪಡಿಸಲು ಸ್ವತಂತ್ರ ನಿಯಂತ್ರಣ ಸಂಸ್ಥೆಯ ಅಗತ್ಯವನ್ನು 2020ರಲ್ಲಿ ಪ್ರಯಾಸ್ ಸಂಸ್ಥೆಯು ತನ್ನ ಸಂಶೋಧನಾ ಪ್ರಬಂಧವೊಂದರಲ್ಲಿ ಕರೆ ನೀಡಿದೆ. ಭಾರತದಲ್ಲಿ ವಾಯುಮಾಲಿನ್ಯವು ಸಾವು ಅಥವಾ ಅನಾರೋಗ್ಯಕ್ಕೆ ಅತಿ ದೊಡ್ಡ ಕಾರಣಗಳಲ್ಲೊಂದಾಗಿರುವುದರಿಂದ ಎಲ್‌ಪಿಜಿ ಸಬ್ಸಿಡಿ ಯೋಜನೆಯನ್ನು ಮರುರೂಪಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಶ್ರೀನಿವಾಸ್ ತಿಳಿಸಿದರು.

Writer - ವಿವೇಕ್ ಗುಪ್ತಾ

contributor

Editor - ವಿವೇಕ್ ಗುಪ್ತಾ

contributor

Similar News