ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಶಂಕೆ: ಭಾರತದಲ್ಲಿ ಈ ಔಷಧ ಮಾರಾಟ ಇಲ್ಲ

Update: 2022-10-07 02:33 GMT

ಹೊಸದಿಲ್ಲಿ: ಪಶ್ಚಿಮ ಆಫ್ರಿಕಾ ದೇಶವಾದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೆಮ್ಮು ಹಾಗೂ ಶೀತದ ನಾಲ್ಕು ಔಷಧಿಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

ಮೇಡನ್ ಫಾರ್ಮಸ್ಯೂಟಿಕಲ್ಸ್ ಲಿಮಿಟೆಡ್ ಉತ್ಪಾದಿಸುವ ಪ್ರೊಮೆಥಝೈನ್ ಓರಲ್ ಸೊಲ್ಯೂಶನ್ ಬಿಪಿ (Promethazine Oral Solution BP), ಕೋಫೆಕ್ಸ್‌ನಲಿನ್ ಬೇಬಿ ಕಫ್ ಸಿರಪ್ (Kofexnalin Baby Cough Syrup), ಮೇಕೋಫ್ ಬೇಬಿ ಕಫ್ ಸಿರಪ್ (MaKoff Baby Cough Syrup) ಮತ್ತು ಮಾಗ್ರಿಪ್ ಎನ್ ಕೋಲ್ಡ್ ಸಿರಪ್‍ (MaGrip n Cold Syrup)ಗಳನ್ನು ರಫ್ತು ಮಾಡಲು ಮಾತ್ರ ಕಂಪನಿ ಅನುಮತಿ ಪಡೆದಿದೆ. ಕಂಪನಿ ಈ ಔಷಧಿಗಳನ್ನು ಉತ್ಪಾದಿಸಿ ಕೇವಲ ಗ್ಯಾಂಬಿಯಾಗೆ ಮಾತ್ರ ರಫ್ತು ಮಾಡುತ್ತಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸಚಿವಾಲಯ ಹೇಳಿದೆ.

"ದೇಶದಲ್ಲಿ ಇಂಥ ಉತ್ಪನ್ನಗಳನ್ನು ಬಳಕೆಗೆ ಬಿಡುಗಡೆ ಮಾಡುವ ಮುನ್ನ ಈ ಉತ್ಪನ್ನಗಳನ್ನು ಗುಣಮಟ್ಟದ ಮಾನದಂಡಗಳಲ್ಲಿ ಆಮದು ಮಾಡಿಕೊಳ್ಳುವ ದೇಶ ಪರೀಕ್ಷೆಗೆ ಒಳಪಡಿಸುವುದು ಮತ್ತು ದೃಢಪಡಿಸುವುದು ಸಾಮಾನ್ಯ ಕ್ರಮ" ಎಂದು ಹೇಳಿಕೆ ನೀಡಿದೆ.

"ಗ್ಯಾಂಬಿಯಾದಲ್ಲಿ ಮೃತಪಟ್ಟ 66 ಮಕ್ಕಳಲ್ಲಿ ಕಂಡುಬಂದ ತೀವ್ರ ಕಿಡ್ನಿ ಗಾಯಗಳಿಗೆ ಹಾಗೂ ಈ ನಾಲ್ಕು ಶೀತ ಮತ್ತು ಕೆಮ್ಮು ಔಷಧಿಗಳಿಗೆ ಸಂಬಂಧ ಇರುವ ಸಾಧ್ಯತೆ ಇದೆ" ಎಂದು ಡಬ್ಲ್ಯುಎಚ್‍ಓ ಮುಖ್ಯಸ್ಥ ಅಧನಾಮ್ ಗೇಬ್ರಿಯಾಸಸ್ ಹೇಳಿಕೆ ನೀಡಿದ್ದರು. ಇವುಗಳಲ್ಲಿ ಡೈಥಲೀನ್ ಗ್ಲೈಕಾನ್ ಮತ್ತು ಎಥೆಲಿನ್ ಗ್ಲೈಕಾಲ್‍ಗಳು ಸ್ವೀಕಾರಾರ್ಹವಲ್ಲದ ಪ್ರಮಾಣದಲ್ಲಿ ಇವೆ ಎಂದು ಡಬ್ಲ್ಯುಎಚ್‍ಓ ಹೇಳಿತ್ತು ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News