×
Ad

11ರ ಬಾಲಕಿ ಮೇಲೆ ಶಾಲೆಯಲ್ಲೇ ಹಿರಿಯ ವಿದ್ಯಾರ್ಥಿಗಳಿಂದ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು

Update: 2022-10-07 08:41 IST

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಕೇಂದ್ರೀಯ ವಿದ್ಯಾಲಯದ ಶೌಚಾಲಯದಲ್ಲಿ ಹನ್ನೊಂದು ವರ್ಷದ ವಿದ್ಯಾರ್ಥಿನಿಯ ಮೇಲೆ ಇಬ್ಬರು ಹಿರಿಯ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆಪಾದಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೇಂದ್ರೀಯ ವಿದ್ಯಾಲಯ ಸಂಘಟನೆಯ ಪ್ರಾದೇಶಿಕ ಕಚೇರಿ ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದೆ. ಈ ಘಟನೆ ಕಳೆದ ಜುಲೈನಲ್ಲಿ ನಡೆದಿದೆ ಎನ್ನಲಾಗಿದ್ದು, ದೆಹಲಿ ಮಹಿಳಾ ಆಯೋಗ ಈ ವಿಚಾರವನ್ನು ಬೆಳಕಿಗೆ ತಂದ ಬಳಿಕ ಮಂಗಳವಾರ ಸಂತ್ರಸ್ತೆ ಬಾಲಕಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿ ಮಹಿಳಾ ಆಯೋಗ ಈ ಪ್ರಕರಣವನ್ನು ಗಂಭೀರ ವಿಚಾರ ಎಂದು ಪರಿಗಣಿಸಿದ್ದು, ಈ ಸಂಬಂಧ ದೆಹಲಿ ಪೊಲೀಸರು ಹಾಗು ಶಾಲೆಯ ಪ್ರಾಚಾರ್ಯರಿಗೆ ನೋಟಿಸ್ ನೀಡಿದೆ. ಈ ಪ್ರಕರಣವನ್ನು ಏಕೆ ಪೊಲೀಸರ ಗಮನಕ್ಕೆ ತಂದಿಲ್ಲ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಶಾಲೆಯ ಅಧಿಕಾರಿಗಳಿಗೆ ಸೂಚಿಸಿದೆ.

ಆದರೆ ಸಂತ್ರಸ್ತೆ ಅಥವಾ ಆಕೆಯ ಕುಟುಂಬದವರು ಶಾಲಾ ಪ್ರಾಚಾರ್ಯರಿಗೆ ಈ ವಿಷಯವನ್ನು ತಿಳಿಸಿಲ್ಲ. ಪೊಲೀಸ್ ತನಿಖೆ ನಡೆದ ಬಳಿಕವಷ್ಟೇ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಅಧಿಕಾರಿಗಳು ಸಬೂಬು ಹೇಳಿದ್ದಾರೆ. ಕೇಂದ್ರೀಯ ವಿದ್ಯಾಲಯ ಸಂಘಟನೆ, ಶಿಕ್ಷಣ ಸಚಿವಾಲಯದ ಅಧೀನದ ಸ್ವಾಯತ್ತ ಸಂಸ್ಥೆಯಾಗಿದ್ದು, ದೇಶದ 25 ಪ್ರದೇಶಗಳಲ್ಲಿ 1200ಕ್ಕೂ ಹೆಚ್ಚು ಕೇಂದ್ರೀಯ ವಿದ್ಯಾಲಯಗಳನ್ನು ನಿರ್ವಹಿಸುವ ಹೊಣೆ ಹೊಂದಿದೆ.

"ಶಾಲೆಯ ಒಳಗೆ ಹನ್ನೊಂದು ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಗಂಭೀರ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಈ ಪ್ರಕರಣವನ್ನು ಮುಚ್ಚಿಹಾಲಕು ಶಾಲೆಯ ಶಿಕ್ಷಕರು ಪ್ರಯತ್ನಿಸಿದ್ದಾರೆ ಎಂದು ಬಾಲಕಿ ಆಪಾದಿಸಿದ್ದಾಳೆ. ರಾಜಧಾನಿಯಲ್ಲಿ ಶಾಲೆಗಳು ಮಕ್ಕಳಿಗೆ ಅಸುರಕ್ಷಿತವಾಗಿರುವುದು ದುರದೃಷ್ಟಕರ" ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ ಹೇಳಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News