ಸಿಎನ್ ಜಿ, ಪೈಪ್ಡ್ ಅಡುಗೆ ಅನಿಲ ಬೆಲೆ ತಲಾ 3 ರೂ. ಏರಿಕೆ
ಹೊಸದಿಲ್ಲಿ: ಇನ್‌ಪುಟ್ ನೈಸರ್ಗಿಕ ಅನಿಲದ ಬೆಲೆಯಲ್ಲಿ ಏರಿಕೆಯಾಗುವುದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿನ ಸಿಎನ್‌ಜಿ ಹಾಗೂ ಅಡುಗೆ ಅನಿಲದ ಬೆಲೆಗಳನ್ನು ಇಂದು ತಲಾ 3 ರೂ. ಹೆಚ್ಚಿಸಲಾಗಿದೆ.
ಸಿಎನ್‌ಜಿ ಬೆಲೆಯಲ್ಲಿ ಪ್ರತಿ ಕೆಜಿಗೆ 3 ರೂ. ಹೆಚ್ಚಳವಾಗಿದೆ. ನಾಲ್ಕು ತಿಂಗಳ ಅವಧಿಯಲ್ಲಿ ದರದಲ್ಲಿ ಮೊದಲ ಹೆಚ್ಚಳವಾಗಿದೆ. ಆದರೆ ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ನಲ್ಲಿ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 3 ರೂ. ಹೆಚ್ಚಳವು ಎರಡು ತಿಂಗಳಲ್ಲಿ ಮೊದಲ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ CNG ಈಗ ಪ್ರತಿ ಕೆಜಿಗೆ 75.61 ರೂ. ನಿಂದ 78.61 ರೂ. ಗೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ರಾಜಧಾನಿ ಮತ್ತು ಪಕ್ಕದ ನಗರಗಳಿಗೆ CNG ಮತ್ತು ಪೈಪ್ಡ್ ಅಡುಗೆ ಅನಿಲವನ್ನು ಚಿಲ್ಲರೆ ಮಾರಾಟ ಮಾಡುವ ಸಂಸ್ಥೆ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯಲ್ಲಿ ತಿಳಿದುಬಂದಿದೆ.
ಮಾರ್ಚ್ 7 ರಿಂದ ಇದು 14 ನೇ ಬೆಲೆ ಏರಿಕೆಯಾಗಿದೆ. ಮೇ 21 ರಂದು ಕೊನೆಯ ಬಾರಿಗೆ ಪ್ರತಿ ಕೆಜಿಗೆ 2 ರೂ. ದರವನ್ನು ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ, ಈ ಅವಧಿಯಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 22.60 ರೂ. ರಷ್ಟು ಏರಿಕೆಯಾಗಿದೆ. ಪಿಟಿಐ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಎಪ್ರಿಲ್ 2021 ರಿಂದ ಸಿಎನ್‌ಜಿ ಬೆಲೆಗಳು ಪ್ರತಿ ಕೆಜಿಗೆ 35.21 ರೂ. ಅಥವಾ ಶೇಕಡಾ 80 ರಷ್ಟು ಹೆಚ್ಚಾಗಿದೆ.