ಕಾಂಗ್ರೆಸ್ ನ ಹೊಸ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳಲು, ಸಂಘಟನೆ ನಡೆಸಲು ಸ್ವತಂತ್ರರು: ರಾಹುಲ್ ಗಾಂಧಿ

Update: 2022-10-08 11:33 GMT

 ಬೆಂಗಳೂರು: ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಯಾರೇ ಆಯ್ಕೆಯಾಗಲಿ, ಅವರು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ  ಸಂಘಟನೆಯನ್ನು ನಡೆಸಲು ಸ್ವತಂತ್ರರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  (Congress leader Rahul Gandhi) ಇಂದು ಪ್ರತಿಪಾದಿಸಿದ್ದಾರೆ.

ಕರ್ನಾಟಕದಲ್ಲಿ ತಮ್ಮ ಪಕ್ಷದ 'ಭಾರತ್ ಜೋಡೋ ಯಾತ್ರೆ'ಯ ವೇಳೆ  ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್  "ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಇಬ್ಬರೂ ನಾಮನಿರ್ದೇಶಿತರು ತಮ್ಮದೇ ಸ್ಥಾನವನ್ನು ಹೊಂದಿದ್ದಾರೆ ಮತ್ತು ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದಾರೆ. ಯಾರನ್ನಾದರೂ 'ರಿಮೋಟ್ ಕಂಟ್ರೋಲ್' ಎಂದು ಕರೆಯುವುದು ಇಬ್ಬರಿಗೂ ಅವಮಾನ ಮಾಡಿದ್ದಂತೆ'' ಎಂದರು.

22 ವರ್ಷಗಳ ಅಂತರದ ನಂತರ ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ  ಶಶಿ ತರೂರ್ ಇಬ್ಬರು ಅಭ್ಯರ್ಥಿಗಳು ಉನ್ನತ ಸ್ಥಾನಕ್ಕಾಗಿ  ಸ್ಪರ್ಧಿಸುತ್ತಿದ್ದಾರೆ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ.

ತಮ್ಮ ಪಕ್ಷದ ನಿಲುವನ್ನು ವಿವರಿಸಿದ ರಾಹುಲ್ ಗಾಂಧಿ, "ನಮ್ಮದು ಫ್ಯಾಸಿಸ್ಟ್ ಪಕ್ಷವಲ್ಲ. ನಾವು ಸಂವಾದವನ್ನು ನಂಬುವ ಪಕ್ಷ ಹಾಗೂ  ನಾವು ವಿಭಿನ್ನ ದೃಷ್ಟಿಕೋನಗಳನ್ನು ಸ್ವಾಗತಿಸುತ್ತೇವೆ. ಚುನಾವಣೆಗಳನ್ನು ಗೆಲ್ಲಲು ನಾವು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ನಮಗೆ ತಿಳಿದಿದೆ'' ಎಂದರು.

" ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ನಮ್ಮ ಸಂವಿಧಾನವು ಹೇಳುತ್ತದೆ.  ಇದರರ್ಥ ನಮ್ಮ ಎಲ್ಲಾ ಭಾಷೆಗಳು, ರಾಜ್ಯಗಳು ಹಾಗೂ ಸಂಪ್ರದಾಯಗಳಿಗೆ ಸಮಾನವಾದ ಸ್ಥಳವಿದೆ. ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದು ದೇಶ ವಿರೋಧಿ ಕೃತ್ಯವಾಗಿದೆ. ನಾವು ದ್ವೇಷ ಹಾಗೂ  ಹಿಂಸಾಚಾರವನ್ನು ಹರಡುವ ಯಾರೊಂದಿಗಾದರೂ ಹೋರಾಡುತ್ತೇವೆ”ಎಂದು ಅವರು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ರಣದೀಪ್ ಸುರ್ಜೆವಾಲಾ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News