ಜಾರ್ಖಂಡ್ ರಾಜ್ಯದಲ್ಲಿ ಬಾಲ್ಯ ವಿವಾಹ ಅಧಿಕ : ಗೃಹ ಸಚಿವಾಲಯದ ಸಮೀಕ್ಷೆ
ರಾಂಚಿ, ಅ. 8: ಭಾರತದಿಂದ ಹಲವು ಅನಿಷ್ಟ ಪದ್ಧತಿಗಳು ತೊಲಗಿದರೂ ಬಾಲ್ಯ ವಿವಾಹ ಪದ್ಧತಿ ಸಂಪೂರ್ಣವಾಗಿ ನಿರ್ನಾಮಗೊಂಡಿಲ್ಲ. ಹಲವು ರಾಜ್ಯಗಳಲ್ಲಿ ಈಗಲೂ ಬಾಲ್ಯ ವಿವಾಹ ನಡೆಯುತ್ತಿದೆ. ಬಾಲ್ಯ ವಿವಾಹ ನಡೆಯುತ್ತಿರುವ ರಾಜ್ಯಗಳ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ್ದು, ಜಾರ್ಖಂಡ್ ಮೊದಲ ಸ್ಥಾನದಲ್ಲಿದೆ.
ನಂತರದ ಸ್ಥಾನದಲ್ಲಿ ಪಶ್ಚಿಮಬಂಗಾಳ ಇದೆ. ಜಾರ್ಖಂಡ್‌ನಲ್ಲಿ ಬಾಲ್ಯ ವಿವಾಹ ಅತ್ಯಧಿಕ ಶೇ. 5.8ರಷ್ಟು ನಡೆಯುತ್ತಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತರು ನಡೆಸಿದ ಸಮೀಕ್ಷೆಯಿಂದ ಬಹಿರಂಗವಾಗಿದೆ. ‘‘ರಾಷ್ಟ್ರೀಯ ಮಟ್ಟದಲ್ಲಿ 18 ವರ್ಷ ತಲುಪುದಕ್ಕಿಂತ ಮುನ್ನ ವಿವಾಹವಾಗುವ ಹೆಣ್ಣು ಮಕ್ಕಳ ಪ್ರಮಾಣ ಶೇ. 1.9. ಇದು ಕೇರಳದಲ್ಲಿ ಶೇ. 0.0 ಇದ್ದರೆ, ಜಾರ್ಖಂಡ್‌ನಲ್ಲಿ ಶೇ. 5.8 ಇದೆ’’ ಎಂದು ಸಮೀಕ್ಷೆ ಹೇಳಿದೆ.ಜಾರ್ಖಂಡ್‌ನ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಪದ್ಧತಿ ಹೆಚ್ಚಾಗಿದೆ. ಜಾರ್ಖಂಡ್‌ನ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ಶೇ. 7.3ರಷ್ಟಿದೆ. ನಗರದ ಪ್ರದೇಶದಲ್ಲಿ ಇದರ ಪ್ರಮಾಣ ಶೇ. 3ಕ್ಕೆ ಇಳಿದಿದೆ.
ಜಾರ್ಖಂಡ್ ಹಾಗೂ ಪಶ್ಚಿಮಬಂಗಾಳದಲ್ಲಿ ಅರ್ಧಕ್ಕಿಂತ ಹೆಚ್ಚು ಹೆಣ್ಣು ಮಕ್ಕಳನ್ನು 21 ವರ್ಷಕ್ಕಿಂತ ಮುನ್ನವೇ ವಿವಾಹ ಮಾಡಿ ಕೊಡಲಾಗುತ್ತಿದೆ. ಪಶ್ಚಿಮಬಂಗಾಳದಲ್ಲಿ ಶೇಕಡ 54.9 ಹೆಣ್ಣು ಮಕ್ಕಳು 21 ವರ್ಷಕ್ಕಿಂತ ಮೊದಲೇ ವಿವಾಹವಾಗಿದ್ದಾರೆ. ಜಾರ್ಖಂಡ್‌ನಲ್ಲಿ ಇದರ ಪ್ರಮಾಣ 54.6 ಇದೆ. ಈ ಸಮೀಕ್ಷೆಯನ್ನು 2020ರಲ್ಲಿ ನಡೆಸಲಾಗಿತ್ತು ಹಾಗೂ ಕಳೆದ ತಿಂಗಳ ಕೊನೆಯಲ್ಲಿ ಪ್ರಕಟಿಸಲಾಗಿತ್ತು. ಈ ನಡುವೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಪ್ರಕಾರ, ವಾಮಾಚಾರಕ್ಕೆ ಬಲಿಯಾಗುತ್ತಿರುವರ ಸಂಖ್ಯೆಯಲ್ಲಿ ಕೂಡ ಜಾರ್ಖಂಡ್ ಮೊದಲ ಸ್ಥಾನದಲ್ಲಿದೆ. ಜಾರ್ಖಂಡ್‌ನಲ್ಲಿ 2015ರಲ್ಲಿ 32, 2016ರಲ್ಲಿ 27, 2017ರಲ್ಲಿ 19, 2018ರಲ್ಲಿ 18, 2019 ಹಾಗೂ 2020ರಲ್ಲಿ ತಲಾ 15 ಮಂದಿ ವಾಮಾಚಾರದ ಆರೋಪಕ್ಕೆ ಬಲಿಯಾಗಿದ್ದಾರೆ ಎಂದು ವರದಿ ಹೇಳಿದೆ.