ಗೋವಾ ರಾಜ್ಯದ ಎಲ್ಲ ವಿದ್ಯಾರ್ಥಿಗಳ ನೇತ್ರ ತಪಾಸಣೆ: ಪ್ರಮೋದ್ ಸಾವಂತ್
ಉಡುಪಿ, ಅ.8: ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಜೈಸ್ ಅಡ್ವಾನ್ಸ್ ಕ್ಯಾಟರಾಕ್ಟ್ ಸರ್ಜರಿ ಡಿಜಿಟಲ್ ಸಿಸ್ಟಮ್ ಇದರ ಉದ್ಘಾಟನೆಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶನಿವಾರ ನೆರವೇರಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾ ಸರಕಾರವು ಎಸ್‌ಎಲ್‌ಆರ್ ಫೌಂಡೇಶನ್ ಮತ್ತು ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ರಾಜ್ಯದ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳ ನೇತ್ರ ತಪಾಸಣೆ ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ನನ್ನ ಕ್ಷೇತ್ರದಿಂದ ಈ ಶಿಬಿರ ಆರಂಭಿಸಲಾಗುವುದು. ಗೋವಾ ರಾಜ್ಯದಲ್ಲಿ ಈಗಾಗಲೇ 8-10 ಶಿಬಿರಗಳನ್ನು ನಡೆಸಿ 30000 ಮಂದಿಯ ಕಣ್ಣಿನ ಪರೀಕ್ಷೆಯನ್ನು ಮಾಡಿ ಚಿಕಿತ್ಸೆಯನ್ನು ನೀಡ ಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಹೆ ಮಣಿಪಾಲದ ಸಹ ಕುಲಾಧಿಪತಿ ಎಚ್.ಎಸ್.ಬಲ್ಲಾಳ್, ಉತ್ತರ ಪ್ರದೇಶ ಹಾಗೂ ಉತ್ತರ ಖಂಡ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಾಧಿಪತಿ ತನ್ಮಯ್ ಗೋಸ್ವಾಮಿ, ಉಡುಪಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ನ್ಯಾಷನಲ್ ಅಕೌಂಟ್ ಮತ್ತು ಸ್ಟಾರ್ಟ್ಸ್ ಹಿರಿಯ ಸಲಹೆಗಾರ ರಾಮಚಂದ್ರ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಪ್ರಸಾದ್ ನೇತ್ರಾಲಯದ ನಿರ್ದೇಶಕ ಕೆ.ರಘುರಾಮ್ ರಾವ್ ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ಸ್ವಾಗತಿಸಿದರು. ಡಾ.ವಿಜಯೇಂದ್ರ ಕಾರ್ಯಕ್ರಮ ನಿರೂಪಿಸಿದರು.