×
Ad

ಕಫ್ ಸಿರಪ್ ಸೇವನೆಯಿಂದ ಗಾಂಬಿಯಾದಲ್ಲಿ 66 ಮಕ್ಕಳ ಸಾವು: ವಿವಾದದ ಸುಳಿಯಲ್ಲಿ ಭಾರತದ ಮೇಡನ್ ಫಾರ್ಮಾಸ್ಯೂಟಿಕಲ್ಸ್

Update: 2022-10-08 21:28 IST

ಹೊಸದಿಲ್ಲಿ,ಅ.8: ಭಾರತದಲ್ಲಿ ಉತ್ಪಾದಿಸಲಾದ ಮೇಡನ್ ಫಾರ್ಮಾಸ್ಯೂಟಿಕಲ್ಸ್ ಕಂಪೆನಿಯ ಕಫ್ ಸಿರಪ್ (ಕಫ ನಿವಾರಕ ದ್ರಾವಣ) ಸೇವಿಸಿ, ಆಫ್ರಿಕಾ ಖಂಡದ ರಾಷ್ಟ್ರವಾದ ಗಾಂಭೀಯಾ ದೇಶದಲ್ಲಿ 66 ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಆ ಕಂಪೆನಿಯು ವಿವಾದಕ್ಕೆ ಗ್ರಾಸವಾಗಿದೆ. ಭಾರತದಲ್ಲಿಯೂ ಈ ಕಂಪೆನಿಯು ಕಳಪೆ ಔಷಧಿಗಳ ಪೂರೈಕೆಯ ಹಲವು ಪ್ರಕರಣಗಳು ವರದಿಯಾಗಿರುವುದಾಗಿ ಸುದ್ದಿಜಾಲತಾಣ ತಿಳಿಸಿದೆ. ಮೇಡನ್ ಫಾರ್ಮಾಸ್ಯೂಟಿಕಲ್ಸ್ ಉತ್ಪಾದಿಸಿದ ಹಲವಾರು ಔಷಧಿಗಳು ದೇಶದ ನಾಲ್ಕು ರಾಜ್ಯಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಹೊಂದಿಲ್ಲವೆಂದು ಅದು ಹೇಳಿದೆ.

 2011ರಲ್ಲಿ ವಿಯೆಟ್ನಾಮ್ ಈ ಕಂಪೆನಿಯನ್ನು ನಿಷೇಧಿಸಿತ್ತು. ಗುಣಮಟ್ಟದ ಕೊರತೆಯ ಕಾರಣದಿಂದಾಗಿ ಈ ಕಂಪೆನಿಯ ಔಷಧಿಗಳನ್ನು ವಿಯೆಟ್ನಾಂ ಸರಕಾರ ಮಾರಾಟ ಹಾಗೂ ಬಳಕೆಗೆ ಅನರ್ಹಗೊಳಿಸಿದೆ ಎಂದು ಸಾರ್ವಜನಿಕ ಆರೋಗ್ಯ ಕಾರ್ಯಕರ್ತ ದಿನೇಶ್ ಠಾಕೂರ್ ಎನ್ಡಿಟಿವಿ ಜಾಲತಾಣಕ್ಕೆ ತಿಳಿಸಿದ್ದಾರೆ.

‘‘ಮೇಡನ್ ಫಾರ್ಮಾ ಸಂಸ್ಥೆಯ ಔಷಧಿಗಳು ಕಳಪೆ ಗುಣಮಟ್ಟವನ್ನು ಹೊಂದಿರುವುದಾಗಿ ಕೇರಳ ಹಾಗೂ ಗುಜರಾತ್ ನ ಔಷಧಿ ನಿಯಂತ್ರಕ ಇಲಾಖೆಗಳು ಹೇಳಿವೆ. ಅಲ್ಲದೆ ಬಿಹಾರದ, ಸಾರ್ವಜನಿಕ ಔಷಧಿ ನಿಯಂತ್ರಕ ಏಜೆನ್ಸಿ ಕೂಡಾ ಈ ಸಿರಪ್ ಅನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಅವರು ಹೇಳಿದರು. ಅತ್ಯಂತ ಕಳಪೆ ದಾಖಲೆಯನ್ನು ಹೊಂದಿರುವ ಈ ಕಂಪೆನಿಗೆ ಔಷಧಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಮತಿಯನ್ನು ನೀಡಿದ್ದಾದರೂ ಹೇಗೆ ಎಂದು ಠಾಕೂರ್ ಪ್ರಶ್ನಿಸಿದ್ದಾರೆ.

ವಿಯೆಟ್ನಾಮ್ ದೇಶವು ಹಲವಾರು ಔಷಧಿ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ್ದು, ಅವುಗಳಲ್ಲಿ ಈ ಕಂಪೆನಿಯೂ ಸೇರಿದೆ. ರಫ್ತು ಅನುಮತಿಯನ್ನು ನೀಡುವ ಅಧಿಕಾರವನ್ನು ಕೇಂದ್ರೀಯ ಔಷಧಿ ನಿಯಂತ್ರಣ ಸಂಘಟನೆ (ಸಿಡಿಎಸ್ಓ) ಹೊಂದಿದೆ. ಆದರೆ ಸಿಡಿಎಸ್ಓ ತನ್ನ ವೆಬ್ಸೈಟ್ನಲ್ಲಿ ಅದರ ಹೆಸರನ್ನು ತೆಗೆದುಹಾಕಿದೆ. ಕಂಪೆನಿಯ ನಿರ್ದೇಶಕರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದಾಗಿ ಅವರು ತಿಳಿಸಿದ್ದಾರೆ.

ಗಾಂಬಿಯಾ ದೇಶದಲ್ಲಿ ಮೂತ್ರಕೋಶಕ್ಕೆ ಆದ ಹಾನಿಯಿಂದಾಗಿ 60ಕ್ಕೂ ಅಧಿಕ ಮಕ್ಕಳ ಸಾವಿಗೆ ಕಾರಣವಾಗಿದೆಯೆನ್ನಲಾದ ಕಫ ಹಾಗೂ ಶೀತ ನಿರೋಧಕ ಸಿರಪ್ಗಳನ್ನು ಸಂಗ್ರಹಿಸಲು ಗಾಂಭಿಯಾ ದೇಶವು ಮನೆಮನೆ ಅಭಿಯಾನವನ್ನು ಆರಂಭಿಸಿದೆ.

 ಮೇಡನ್ ಫಾರ್ಮಾಸ್ಯೂಟಿಕ್ಸ್ ಕಂಪೆನಿ ಔಷಧಿ ಉತ್ಪನ್ನಗಳಿಗೂ ಗಾಂಬಿಯಾದಲ್ಲಿ ಸಂಭವಿಸಿದ ಮಕ್ಕಳ ಸಾವಿಗೂ ನಂಟಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಹಿನ್ನೆಲೆಯಲ್ಲಿ ಭಾರತವು ಮೇಡನ್ ಫಾರ್ಮಾಸ್ಯೂಟಿಕಲ್ಸ್ನ ಕಂಪೆನಿಯ ಕಫ್ಸಿರಪ್ ಉತ್ಪನ್ನಗಳ ಸ್ಯಾಂಪಲ್ಗಳನ್ನು ಪರೀಕ್ಷಿಸುತ್ತಿದೆ ಎಂದು ಎನ್ಡಿಟಿವಿ ವರದಿಯಲ್ಲಿ ತಿಳಿಸಿದೆ.

 ಮೇಡನ್ ಫಾರ್ಮಾಸ್ಯೂಟಿಕಲ್ಸ್ ನ ಕಫ್ ಸಿರಪ್ ಮಾದರಿಗಳನ್ನು ಪರೀಕ್ಷೆಗಾಗಿ ಕೇಂದ್ರೀಯ ಫಾರ್ಮಾಸ್ಯೂಟಿಕಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆಯೆಂದು ಆ ಕಂಪೆನಿಯ ಕಾರ್ಖಾನೆಗಳಿರುವ ರಾಜ್ಯವಾದ ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.

ಮೇಡನ್ ಫಾರ್ಮಾಸ್ಯೂಟಿಕಲ್ ಕಂಪೆನಿಯ ಕಫ್ ಸಿರಪ್ನಲ್ಲಿ ಅಸ್ವೀಕಾರಾರ್ಹ ಪ್ರಮಾಣದಲ್ಲಿ ಡಿಥ್ಲೀನ್ ಗ್ಲೈಕೋಲ್ ಹಾಗೂ ಎಥಿಲಿನ್ ಗ್ಲೈಕೋಲ್ ಇರುವುದರಿಂದ ಅದು ವಿಷಕಾರಿಯಾಗಿದ್ದು, ಮೂತ್ರಕೋಶಕ್ಕೆ ಹಾನಿಯುಂಟು ಮಾಡಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News