ವಡೋದರಾದಲ್ಲಿ ಬಿಜೆಪಿ ಬೆಂಬಲಿಗರಿಂದ ದಾಂಧಲೆ; ಆಪ್ ರ್‍ಯಾಲಿಯ ಬ್ಯಾನರ್ ಗಳ ಧ್ವಂಸ
ವಡೋದರಾ,ಅ.8: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಿ ಗುಜರಾತ್ ನ ವಡೋದರಾ ನಗರದಲ್ಲಿ ಬಿಜೆಪಿಯ ಬೆಂಬಲಿಗರು ಆಪ್ ಪಕ್ಷದ ಬ್ಯಾನರ್ಗಳನ್ನು ಹರಿದುಹಾಕಿದ್ದಾರೆ. ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪಾಲ್ಗೊಳ್ಳಲಿದ್ದ ಆಪ್ ಪಕ್ಷದ ರ್‍ಯಾಲಿಯ ಪ್ರಚಾರಕ್ಕಾಗಿ ಈ ಬ್ಯಾನರ್ಗಳನ್ನು ಹಾಕಲಾಗಿತ್ತು.
ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಶನಿವಾರ 4:00 ಗಂಟೆಗೆ ಆಪ್ ಪಕ್ಷವು ತಿರಂಗ್ಯಾತ್ರಿ ರ್‍ಯಾಲಿಯನ್ನು ಆಯೋಜಿಸಿತ್ತು, ರ್‍ಯಾಲಿ ನಡೆಯುವುದಕ್ಕೆ ಕೆಲವೇ ತಾಸುಗಳ ಮೊದಲು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಹಾಗೂ ದಾಂಧಲೆಯಲ್ಲಿ ನಡೆಸಿದ್ದಾರೆನ್ನಲಾಗಿದೆ. ಗುಜರಾತ್ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯು ಗೂಂಡಾಗಿರಿಯಲ್ಲಿ ತೊಡಗಿದೆಯೆಂದು’’ ಹಿರಿಯ ಆಪ್ ನಾಯಕ ದುರ್ಗೇಶ್ ಪಾಠಕ್ ಟ್ವೀಟ್ ಮಾಡಿದ್ದಾರೆ.
ದಿಲ್ಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಇತ್ತೀಚೆಗೆ ಬೌದ್ಧಧರ್ಮಕ್ಕೆ ಸಾಮೂಹಿಕ ಮತಾಂತರ ಕಾರ್ಯಕ್ರಮವೊಂದರಲ್ಲಿ ಕೈಗೊಂಡಿದ್ದ ಪ್ರತಿಜ್ಞೆಯು ಹಿಂದೂ ವಿರೋಧಿಯಾಗಿದೆಯೆಂದು ಬಿಜೆಪಿ ಬೆಂಬಲಿಗರು ಆಪಾದಿಸಿದ್ದಾರೆ. ಈ ರ್‍ಯಾಲಿಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿ ಹಿಂದೂ ದೇವತೆಗಳನ್ನು ಖಂಡಿಸುವುದು ಸೇರಿದಂತೆ 22 ಪ್ರತಿಜ್ಞೆಗಳನ್ನು ಕೈಗೊಂಡಿದ್ದರು. ಸಭೆಯಲ್ಲಿ ಒಬ್ಬಾತ ,‘ನನಗೆ ಬ್ರಹ್ಮ,, ವಿಷ್ಣು ಹಾಗೂ ಮಹೇಶ್ವರರ ಮೇಲೆ ವಿಶ್ವಾಸವಿಲ್ಲ ಹಾಗೂ ನಾನು ಅವರನ್ನು ಆರಾಧಿಸುವುದಿಲ್ಲʼ ಎಂದು ಹೇಳಿದ್ದನ್ನು ಇತರರು ಉಚ್ಚರಿಸಿದ್ದನ್ನು ವಿವಾದಾತ್ಮಕ ವಿಡಿಯೋದಲ್ಲಿ ತೋರಿಸಲಾಗಿತ್ತು.
ಆದರೆ ರಾಜೇಂದ್ರ ಪಾಲ್ ಗೌತಮ್ ಅವರು ತನ್ನ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. 1956ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸಂದರ್ಭದಲ್ಲಿ ದಲಿತ ನಾಯಕ, ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಕೈಗೊಂಡಿದ್ದ ಪ್ರತಿಜ್ಞೆಯನ್ನೇ ತಾನು ಪುನರುಚ್ಚರಿಸಿರುವುದಾಗಿ ಅವರು ಹೇಳಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರದ ಹಕ್ಕಿದೆಯೆಂದು ಅವರು ಹೇಳಿದ್ದಾರೆ.