ಜಾತಿ ನಿಂದನೆ ಹೇಳಿಕೆ: ಉ.ಪ್ರ. ಸಚಿವ ದಿನೇಶ್ ಖಟಿಕ್ ಕ್ಷಮೆ ಕೋರುವಂತೆ ವೈಶ್ಯ ಸಮುದಾಯ ಆಗ್ರಹ
ಮೀರತ್, ಅ. 8: ತಮ್ಮ ಸಮುದಾಯವನ್ನು ಅವಮಾನಿಸಿರುವುದಕ್ಕೆ ಹಾಗೂ ಹಿಂದೂ ಸಮುದಾಯವನ್ನು ವಿಭಜಿಸಲು ಪ್ರಯತ್ನಿಸುತ್ತಿರುವುದಕ್ಕೆ ಉತ್ತರಪ್ರದೇಶದ ಸಚಿವ ದಿನೇಶ್ ಖಟಿಕ್ ಅವರು ಕ್ಷಮೆ ಯಾಚಿಸುವಂತೆ ವೈಶ್ಯ ಸಮುದಾಯದ ಸದಸ್ಯರು ಶುಕ್ರವಾರ ಆಗ್ರಹಿಸಿದ್ದಾರೆ.
ತಾನು ಬನಿಯಾ (ವ್ಯಾಪಾರಿ ಜಾತಿ)ನ ಮಗನಲ್ಲ ಎಂದು ರಾಜ್ಯ ಜಲಶಕ್ತಿ ಸಚಿವರಾಗಿರುವ ಖಟಿಕ್ ಅವರು ಅಕ್ಟೋಬರ್ 4ರಂದು ಅವಹೇಳನಕಾರಿ ರೀತಿಯಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.ಯುವತಿಯೋರ್ವಳೊಂದಿಗೆ ಸಂಬಂಧ ಇರಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಆಕೆಯ ತಂದೆಯಿಂದ ಕಳೆದ ವಾರ ಹತ್ಯೆಗೀಡಾದ ದೀಪಕ್ ತ್ಯಾಗಿಯ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಖಟಿಕ್ ಅವರು ಪರೀಕ್ಷಿತ್‌ಗಡಕ್ಕೆ ತೆರಳಿದ್ದರು.ಅವರು ಅಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವಂತೆ ಕೆಲವರು ಅಡ್ಡಿಪಡಿಸಿದರು.
ಇದರಿಂದ ತಾಳ್ಮೆ ಕಳೆದುಕೊಂಡು ಪ್ರತಿಕ್ರಿಯಿಸಿದ ಖಟಿಕ್,‘‘ಅಹಂಕಾರ ಬೇಡ.ನಾನು ಶಾಸಕನಾಗಿರಬಹುದು. ಆದರೆ, ಈಗ ಈ ಗ್ರಾಮಕ್ಕೆ ಸೇರಿದವನು.ನಾನು ನಗರದವನೂ ಅಲ್ಲ, ಬನಿಯಾನ ಮಗನೂ ಅಲ್ಲ’’ ಎಂದು ಹೇಳಿದ್ದರು.ಈ ಘಟನೆಯ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಬಿಜೆಪಿ ನಾಯಕರು ಸೇರಿದಂತೆ ವೈಶ್ಯ ಸಮುದಾಯದ ಹಲವು ಸದಸ್ಯರು ಖಟಿಕ್ ಅವರು ಹೇಳಿಕೆಯನ್ನು ಖಂಡಿಸಿದ್ದಾರೆ ಹಾಗೂ ಖಟಿಕ್ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಖಟಿಕ್ ವಿರುದ್ಧ ವೈಶ್ಯ ಸಮಾಜ ಸೇವಾ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಬಳಿಕ ಪ್ರತಿಭಟನೆ ನಡೆಸಿದ್ದಾರೆ. ‘‘ಸಚಿವರು ಬನಿಯಾ ಸಮುದಾಯಕ್ಕೆ ಗೌರವ ನೀಡದೇ ಇದ್ದರೂ, ಅವಮಾನ ಮಾಡುವ ಅಗತ್ಯ ಇಲ್ಲ’’ ಎಂದು ಪ್ರತಿಭಟನಕಾರರು ಹೇಳಿದ್ದಾರೆ.