'ಜನಸಂಖ್ಯಾ ಹೆಚ್ಚಳ ತಡೆಯಬೇಕಾಗಿದೆ' ಎಂದ ಮೋಹನ್‌ ಭಾಗವತ್‌ ಗೆ ಉವೈಸಿ ತಿರುಗೇಟು

Update: 2022-10-09 11:15 GMT
Photo: PTI

ಹೈದರಾಬಾದ್: ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ, ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವುದು ಮುಸ್ಲಿಮರೇ ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ(Asaduddin owaisi) ಅವರು ಜನಸಂಖ್ಯೆ ನಿಯಂತ್ರಣದ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಅವರ ಇತ್ತೀಚಿನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಉವೈಸಿ ಅವರು ಹೈದರಾಬಾದ್‌ನಲ್ಲಿನ(Hyderabad) ಸಭೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಉವೈಸಿ, "ಮುಸ್ಲಿಮರ ಜನಸಂಖ್ಯೆಯು ಹೆಚ್ಚಾಗುತ್ತಿಲ್ಲ, ಬದಲಾಗಿ ಅದು ಕ್ಷೀಣಿಸುತ್ತಿದೆ, ಮುಸ್ಲಿಮರಲ್ಲಿ ಮಕ್ಕಳ ನಡುವಿನ ಅಂತರವೂ ಹೆಚ್ಚುತ್ತಿದೆ, ಯಾರು ಬಳಸುತ್ತಿದ್ದಾರೆ ಕಾಂಡೋಮ್ ಹೆಚ್ಚು? ನಾವು. ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ," ಎಂದು ಹೇಳಿದರು.

ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತಕ್ಕೆ ಜನಸಂಖ್ಯೆ ನಿಯಂತ್ರಣಕ್ಕಾಗಿ "ಎಲ್ಲರಿಗೂ ಸಮಾನವಾಗಿ ಅನ್ವಯಿಸುವ" ನೀತಿಯ ಅಗತ್ಯವಿದೆ ಎಂದು ಹೇಳಿಕೆ ನೀಡಿದ್ದರು. ಆರ್‌ಎಸ್‌ಎಸ್‌ನ ವಾರ್ಷಿಕ ದಸರಾ ರ್ಯಾಲಿಯಲ್ಲಿ ಅವರು ಜನಸಂಖ್ಯೆಯಲ್ಲಿನ "ಧರ್ಮ ಆಧಾರಿತ ಅಸಮತೋಲನ" ಮತ್ತು "ಬಲವಂತದ ಮತಾಂತರ"(Forced conversion) ಗಳನ್ನೂ ಉಲ್ಲೇಖಿಸಿದ್ದರು.

ಉವೈಸಿ ಅವರು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ - 5 ಅನ್ನು ಉಲ್ಲೇಖಿಸಿ, ಮುಸ್ಲಿಮರ ಒಟ್ಟು ಫಲವತ್ತತೆ ದರ (ಟಿಎಫ್ಆರ್) ಅತ್ಯಧಿಕ ಕುಸಿತವನ್ನು ಕಂಡಿದೆ ಎಂದು ಹೇಳಿದರು.

ಕಾಣೆಯಾದ ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವಂತೆ ಉವೈಸಿ ಭಾಗವತ್‌ಗೆ ಸವಾಲೆಸೆದರು. "ನಾನು ಮೋಹನ್ ಭಾಗವತ್ ಅವರನ್ನು ಕೇಳಲು ಬಯಸುತ್ತೇನೆ. 2000 ರಿಂದ 2019 ರವರೆಗೆ ನಮ್ಮ ಲಕ್ಷಾಂತರ ಹಿಂದೂ ಸಹೋದರಿಯ ಕಾಣೆಯಾಗಿದ್ದಾರೆ. ಇದು ಸರ್ಕಾರದ ಅಂಕಿಅಂಶವಾಗಿದೆ. ಆದರೆ ಅವರು ಅದರ ಬಗ್ಗೆ ಮಾತನಾಡುವುದಿಲ್ಲ" ಎಂದು ಹೇಳಿದರು.

"ನೆನಪಿಡಿ, ಹಿಂದೂ ರಾಷ್ಟ್ರವು ಭಾರತೀಯ ರಾಷ್ಟ್ರೀಯತೆಗೆ ವಿರುದ್ಧವಾಗಿದೆ. ಅದು ಭಾರತದ ವಿರುದ್ಧವಾಗಿದೆ" ಎಂದು ಉವೈಸಿ ಹೇಳಿದರು. ಬಿಜೆಪಿ ಅಧಿಕಾರದಲ್ಲಿರುವಲ್ಲೆಲ್ಲಾ ಮುಸ್ಲಿಮರು ತೆರೆದ ಜೈಲಿನಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ಇತ್ತೀಚೆಗೆ ಗುಜರಾತ್‌ನಲ್ಲಿ ಗರ್ಬಾ ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಗಳನ್ನು ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿದ ಘಟನೆಯ ಬಗ್ಗೆ ಪ್ರಧಾನಿ ಮೌನವನ್ನು ಪ್ರಶ್ನಿಸಿದರು. "ಇದು ನಮ್ಮ ಘನತೆಯೇ? ಮಿಸ್ಟರ್ ಪ್ರಧಾನಿ, ನೀವು ಗುಜರಾತ್‌ನಿಂದ ಬಂದವರು, ನೀವು ಮುಖ್ಯಮಂತ್ರಿಯಾಗಿದ್ದಿರಿ ಮತ್ತು ನಿಮ್ಮ ರಾಜ್ಯದಲ್ಲಿ ಮುಸ್ಲಿಮರನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಲಾಯಿತು ಮತ್ತು ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಾರೆ. ದಯವಿಟ್ಟು ನ್ಯಾಯಾಲಯಗಳನ್ನು ಮುಚ್ಚಿ, ಪೊಲೀಸ್ ಬಲವನ್ನು ವಜಾಗೊಳಿಸಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News