ಒಂದು ಸಮುದಾಯದ 'ಸಂಪೂರ್ಣ ಬಹಿಷ್ಕಾರಕ್ಕೆ' ಕರೆ ನೀಡಿ ವಿವಾದಕ್ಕೀಡಾದ ಬಿಜೆಪಿ ಸಂಸದ

Update: 2022-10-10 09:30 GMT

ಹೊಸದಿಲ್ಲಿ: ಮುಸ್ಲಿಮರನ್ನು ಪರೋಕ್ಷವಾಗಿ ಗುರಿಯಾಗಿಸಿ 'ಸಂಪೂರ್ಣ ಬಿಹಿಷ್ಕಾರ' ಕರೆ ನೀಡುವ ಭಾಷಣದ ಮೂಲಕ ಬಿಜೆಪಿ (BJP) ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮ(BJP MP Parvesh Sahib Singh Verma) ವಿವಾದಕ್ಕೆ ಕಾರಣರಾಗಿದ್ದಾರೆ.

"ಅವರ ತಲೆ ನೆಟ್ಟಗಾಗಿಸಲು ಏನು ಮಾಡಬೇಕು'' ಎಂದು ತಮ್ಮ ಬೆಂಬಲಿಗರಿಗೆ ಸಾರ್ವಜನಿಕ ಸಭೆಯೊಂದರ ಭಾಷಣದಲ್ಲಿ ವರ್ಮ ಹೇಳುತ್ತಿರುವುದು ಕೇಳಿಸುತ್ತದೆ.

"ಅವರು ತಳ್ಳುಗಾಡಿಗಳನ್ನು ತೆರೆಯುತ್ತಲೇ ಇರುತ್ತಾರೆ, ನೀವು ಅವರಿಂದ ತರಕಾರಿ ಖರೀದಿಸುವ ಅಗತ್ಯವಿಲ್ಲ. ಅವರು ಮೀನು-ಮಾಂಸದ ಅಂಗಡಿಗಳನ್ನು ತೆರೆಯುತ್ತಾರೆ. ಅವುಗಳಿಗೆ ಪರವಾನಗಿ ಇಲ್ಲವೆಂದಾದರೆ ಅವುಗಳನ್ನು ಮುಚ್ಚಬೇಕೆಂದು ಮುನಿಸಿಪಲ್ ಆಡಳಿತಕ್ಕೆ ನಾವು ಹೇಳಬೇಕು. ಅವರನ್ನು ನೋಡಿದಲ್ಲೆಲ್ಲಾ ಅವರ ತಲೆ ನೆಟ್ಟಗಾಗಿಸಬೇಕಾದರೆ, ಅದಕ್ಕಿರುವ ಒಂದೇ ದಾರಿಯೆಂದರೆ ಸಂಪೂರ್ಣ ಬಹಿಷ್ಕಾರ. ಒಪ್ಪುತ್ತೀರಾದರೆ ಕೈಯ್ಯೆತ್ತಿ,'' ಎಂದು ಅವರು ಹೇಳಿದಾಗ ನೆರೆದಿದ್ದವರು ಕೈಯ್ಯೆತ್ತುವುದು ವೀಡಿಯೋದಲ್ಲಿ ಕಾಣಿಸುತ್ತದೆ.

"ಅವರನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಹೇಳಿ,'' ಎಂದು ವರ್ಮ ಹೇಳಿದಾಗ ನೆರೆದ ಜನರು ಕೂಡ ಹಾಗೆಯೇ ಹೇಳುತ್ತಾರೆ". ನಾವು ಅವರ ಅಂಗಡಿಗಳಿಂದ ಏನನ್ನೂ ಖರೀದಿಸುವುದಿಲ್ಲ, ಅವರಿಗೆ ಯಾವ ಕೆಲಸ ನೀಡುವುದಿಲ್ಲ,'' ಎಂದು ವರ್ಮ ಹೇಳಿದಾಗ ಜನರು ಹೌದು ಎನ್ನುತ್ತಾರೆ.

ವಿವಾದದ ಕುರಿತು ಪ್ರತಿಕ್ರಿಯಿಸಿದ ವರ್ಮ ತಾವು ಯಾವುದೇ ಧಾರ್ಮಿಕ ಸಮುದಾಯದ ಹೆಸರನ್ನೆತ್ತಿಲ್ಲ ಎಂದಿದ್ದಾರೆ. "ಇಂತಹ ಹತ್ಯೆಗಳಿಗೆ ಕಾರಣರಾಗುವ ಕುಟುಂಬಗಳ ಸದಸ್ಯರನ್ನು ಬಹಿಷ್ಕರಿಸಬೇಕು, ಅಂತಹ ಕುಟುಂಬಗಳ ವ್ಯವಹಾರ, ರೆಸ್ಟಾರೆಂಟ್‍ಗಳನ್ನು ಬಹಿಷ್ಕರಿಸಬೇಕು ಎಂದಷ್ಟೇ ಹೇಳಿದ್ದೇನೆ,'' ಎಂದು ಅವರು ಹೇಳಿದರು.

ವರ್ಮ ಭಾಷಣಕ್ಕೆ ಆಕ್ಷೇಪಿಸಿ ಹಲವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರೆ ಇನ್ನು ಕೆಲವರು ಅವರ ಪರ ಮಾತನಾಡಿದ್ದಾರೆ.

ಈ ವೀಡಿಯೋ ಶೇರ್ ಮಾಡಿದ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಬಿಜೆಪಿಯು ಮುಸ್ಲಿಮರ ವಿರುದ್ಧ ಯುದ್ಧ ಆರಂಭಿಸಿದೆ ಎಂದಿದ್ದಾರಲ್ಲದೆ ಗೃಹ ಸಚಿವ ಅಮಿತ್ ಶಾ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೌನವನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ವಕ್ತಾರೆ ಶಮಾ ಮುಹಮ್ಮದ್ ಪ್ರತಿಕ್ರಿಯಿಸಿ, ದಿಲ್ಲಿ ಪೊಲೀಸರು ವರ್ಮ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಡಿಕೆಶಿ ಓಟ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News