ಪತ್ರದ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಯ್ಕೆಗೆ ಇಬ್ಬರು ಸದಸ್ಯರ ಆಕ್ಷೇಪ:ಕೊಲಿಜಿಯಂ

Update: 2022-10-10 15:29 GMT

ಹೊಸದಿಲ್ಲಿ,ಅ.10: ಸರ್ವೋಚ್ಚ ನ್ಯಾಯಾಲಯದ (Supreme Court) ನ್ಯಾಯಾಧೀಶರಾಗಿ ಪದೋನ್ನತಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಯು.ಯು.ಲಲಿತ್ (U.U.Lalit) ಅವರು ಅನುಸರಿಸಿದ್ದ ಕಾರ್ಯವಿಧಾನಕ್ಕೆ ತನ್ನ ಇಬ್ಬರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ (Coliseum) ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಪತ್ರದ ಮೂಲಕ ಪದೋನ್ನತಿಗಾಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಅಭಿಪ್ರಾಯವನ್ನು ಕೋರುವ ಕಾರ್ಯವಿಧಾನವನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ (DY Chandrachud) ಮತ್ತು ಅಬ್ದುಲ್ ನಝೀರ್(Abdul Nazir) ಅವರು ಒಪ್ಪಿಕೊಂಡಿಲ್ಲ ಎಂದು ಹೇಳಿಕೆಯು ತಿಳಿಸಿದೆ. ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರೂ ನ್ಯಾ.ಲಲಿತ್ ನೇತೃತ್ವದ ಕೊಲಿಜಿಯಂ ಸದಸ್ಯರಾಗಿದ್ದಾರೆ.

ನ್ಯಾಯಾಧೀಶರನ್ನು ಪದೋನ್ನತಿಗೊಳಿಸುವ ಕುರಿತು ಕೊಲಿಜಿಯಂ ಭೌತಿಕ ಸಭೆಗಳನ್ನು ನಡೆಸುತ್ತದೆ.

ಅಲ್ಲದೆ,ತನ್ನ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಸೂಚಿಸಿ ಸಿಜೆಐಗೆ ಕೇಂದ್ರ ಕಾನೂನು ಸಚಿವರು ಅ.7ರಂದು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಪದೋನ್ನತಿ ಕುರಿತು ಕೊಲಿಜಿಯಂ ಯಾವುದೇ ಸಭೆಯನ್ನು ನಡೆಸುವುದಿಲ್ಲ ಎಂದೂ ಹೇಳಿಕೆಯು ತಿಳಿಸಿದೆ.

ಸಿಜೆಐ ಲಲಿತ್ ಅವರು ನ.8ರಂದು ನಿವೃತ್ತರಾಗಲಿದ್ದು,ಮರುದಿನ ಅವರ ಉತ್ತರಾಧಿಕಾರಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ನಿರ್ಣಯಗಳಂತೆ ನಿರ್ಗಮನಗೊಳ್ಳುವ ಮುಖ್ಯ ನ್ಯಾಯಾಧೀಶರು ತನ್ನ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಆರಂಭಗೊಂಡಾಗ ಕೊಲಿಜಿಯಂ ಸಭೆಯನ್ನು ನಡೆಸುವಂತಿಲ್ಲ.

ಸರ್ವೋಚ್ಚ ನ್ಯಾಯಾಲಯದಲ್ಲಿಖಾಲಿಯಿರುವ ಹುದ್ದೆಗಳನ್ನು ತುಂಬಲು 11 ಅಭ್ಯರ್ಥಿಗಳ ಹೆಸರುಗಳ ಪರಿಶೀಲನೆಯನ್ನು ಕೊಲಿಜಿಯಂ ಕೈಗೆತ್ತಿಕೊಂಡಿತ್ತು. ಸೆ.26ರಂದು ನಡೆದಿದ್ದ ಸಭೆಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ದೀಪಂಕರ್ ದತ್ತಾ ಅವರನ್ನು ಪದೋನ್ನತಿಗೊಳಿಸಲು ಎಲ್ಲ ಸದಸ್ಯರು ಒಪ್ಪಿಕೊಂಡಿದ್ದರು,ಆದರೆ ಇತರ 10 ಅಭ್ಯರ್ಥಿಗಳ ಕುರಿತು ನಿರ್ಧಾರ ಕೈಗೊಳ್ಳುವುದನ್ನು ಸೆ.30ಕ್ಕೆ ಮುಂದೂಡಲಾಗಿತ್ತು ಎಂದು ಹೇಳಿಕೆಯು ತಿಳಿಸಿದೆ.

 ಅಭ್ಯರ್ಥಿಗಳ ಇನ್ನಷ್ಟು ತೀರ್ಪುಗಳನ್ನು ಪರಿಶೀಲಿಸಲು ಕೆಲವು ನ್ಯಾಯಾಧೀಶರು ಬಯಸಿದ್ದರು ಎಂದು ಕೊಲಿಜಿಯಂ ಹೇಳಿದೆ.

ಮು ಖ್ಯ ನ್ಯಾಯಾಧೀಶರ ಹುದ್ದೆಗೆ ಸರದಿಯಲ್ಲಿ ಮೊದಲ ಸ್ಥಾನದಲ್ಲಿರುವ ನ್ಯಾ.ಚಂದ್ರಚೂಡ ಅವರಿಗೆ ಹಾಜರಾಗಲು ಸಾಧ್ಯವಾಗದ್ದರಿಂದ ಅಭ್ಯರ್ಥಿಗಳ ಕುರಿತು ಚರ್ಚೆಗಾಗಿ ಸೆ.30ರಂದು ಸಂಜೆ 4:30ಕ್ಕೆ ನಿಗದಿಯಾಗಿದ್ದ ಸಭೆ ನಡೆದಿರಲಿಲ್ಲ. ಸೆ.30ರಂದು ರಾತ್ರಿ 9.15ರವರೆಗೂ ನ್ಯಾ.ಚಂದ್ರಚೂಡ ತನ್ನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿದ್ದರು. ಎಲ್ಲ ಸದಸ್ಯರು ಉಪಸ್ಥಿತರಿಲ್ಲದ್ದರಿಂದ ಸಭೆಯು ನಡೆದಿರಲಿಲ್ಲ. ಬದಲಿಗೆ  ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರ ಪದೋನ್ನತಿಗಾಗಿ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ಕೋರಿ ನ್ಯಾ.ಲಲಿತ್ ಅವರು ಸದಸ್ಯರಿಗೆ ಪತ್ರ ಬರೆದಿದ್ದರು.

ನ್ಯಾಯಮೂರ್ತಿಗಳಾದ ಕೌಲ್ ಮತ್ತು ಜೋಸೆಫ್ ಪ್ರಸ್ತಾವವನ್ನು ಅನುಮೋದಿಸಿದ್ದರೆ ನ್ಯಾಯಮೂರ್ತಿಗಳಾದ ಚಂದ್ರಚೂಡ ಮತ್ತು ನಝೀರ್ ಪತ್ರದ ಮೂಲಕ ಅಭಿಪ್ರಾಯವನ್ನು ಕೋರುವ ಕಾರ್ಯ ವಿಧಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.

ಆದಾಗ್ಯೂ ನ್ಯಾಯಮೂರ್ತಿಗಳಾದ ಚಂದ್ರಚೂಡ ಮತ್ತು ನಝೀರ್ ತಮ್ಮ ಪತ್ರಗಳಲ್ಲಿ ಅಭ್ಯರ್ಥಿಗಳ ವಿರುದ್ಧ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News