ಉಕ್ರೇನ್‌ಗೆ ಅಪ್ಪಳಿಸಿದ ಕ್ಷಿಪಣಿ ನಮ್ಮ ವಾಯುಪ್ರದೇಶದಿಂದ ಸಾಗಿದೆ: ಮೊಲ್ದೋವ

Update: 2022-10-10 17:27 GMT

ಚಿಸಿನವು, ಅ.10: ಉಕ್ರೇನ್‌ನತ್ತ(Ukraine)  ರಶ್ಯ ಸೋಮವಾರ ಪ್ರಯೋಗಿಸಿದ ಸರಣಿ ಕ್ಷಿಪಣಿಗಳು ತನ್ನ ವಾಯುಪ್ರದೇಶದ ಮೂಲಕ ಸಾಗಿದ್ದು ಈ ಬಗ್ಗೆ ವಿವರಣೆ ನೀಡುವಂತೆ ರಶ್ಯದ(Russia) ರಾಯಭಾರಿಗೆ ಸಮನ್ಸ್ ನೀಡಿರುವುದಾಗಿ  ಮೊಲ್ದೋವ ದೇಶ ಹೇಳಿದೆ. ಕಪ್ಪು ಸಮುದ್ರದಲ್ಲಿ ಸೋಮವಾರ ಬೆಳಿಗ್ಗೆ ರಶ್ಯ ಪ್ರಯೋಗಿಸಿದ 3 ಕ್ರೂಸ್ ಕ್ಷಿಪಣಿಗಳು ( 3 cruise missile) ಮೊಲ್ದೋವ(Moldova) ವಾಯುಕ್ಷೇತ್ರದ ಮೂಲಕ ಸಾಗಿದ್ದು ಈ ಬಗ್ಗೆ ವಿವರಣೆ ನೀಡುವಂತೆ ರಶ್ಯದ ರಾಯಭಾರಿಗೆ ಸೂಚಿಸಲಾಗಿದೆ ಎಂದು ವಿದೇಶಾಂಗ ಸಚಿವ ನಿಕು ಪೊಪೆಸ್ಕು ಟ್ವೀಟ್ ಮಾಡಿದ್ದಾರೆ.

ಕ್ರಿಮಿಯಾ ಪ್ರಾಂತದ ಪ್ರಮುಖ ಸೇತುವೆಯನ್ನು ಸ್ಫೋಟಿಸಿದ್ದು ಉಕ್ರೇನ್‌ನ ಸೇನೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಶ್ಯ, ಇದಕ್ಕೆ ಪ್ರತಿಯಾಗಿ ಉಕ್ರೇನ್ ವಿರುದ್ಧ ಭಾರೀ ಪ್ರತಿದಾಳಿ ನಡೆಸುತ್ತಿದೆ. ರಾಜಧಾನಿ ಕೀವ್ ಸೇರಿದಂತೆ, ರಶ್ಯ ನಾಗರಿಕ ಗುರಿಯನ್ನು ಉದ್ದೇಶಿಸಿ ದಾಳಿ ಮುಂದುವರಿಸಿದೆ. ಜನರ ಹತ್ಯೆಯನ್ನು ರಶ್ಯ ನಿಲ್ಲಿಸಬೇಕು ಎಂದವರು ಆಗ್ರಹಿಸಿದ್ದಾರೆ. ಉಕ್ರೇನ್‌ನಂತೆಯೇ, ಮೊಲ್ದೋವಾ ಕೂಡಾ ಈ ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದು ಈಗ ಪಾಶಿಮಾತ್ಯ ದೇಶಗಳ ಪರ ಇರುವ ಸರಕಾರವನ್ನು ಹೊಂದಿದೆ. ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದ ಬಳಿಕ ಸಾವಿರಾರು ಮಂದಿ ಉಕ್ರೇನ್‌ನಿಂದ ನೆರೆದೇಶ ಮೊಲ್ದೋವಾಕ್ಕೆ ಪಲಾಯನ ಮಾಡಿದ್ದಾರೆ. ಮೊಲ್ದೋವಾ ಕೂಡಾ ಯುರೋಪಿಯನ್ ಯೂನಿಯನ್ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದೆ. ಮೋಲ್ದೋವಾದ ಒಂದು ಭಾಗವಾಗಿರುವ ಟ್ರಾನ್‌ಸ್ನಿಸ್ಟ್ರಿಯಾ ಪ್ರತ್ಯೇಕತಾವಾದಿ ಸಶಸ್ತ್ರ ಗುಂಪಿನ ಹಿಡಿತದಲ್ಲಿದ್ದು ಈ ಗುಂಪಿಗೆ ರಶ್ಯದ ಬೆಂಬಲವಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News