ಬಿಜೆಪಿ ಕಾರ್ಯಕರ್ತರಿಂದ ಆಪ್‌ಗೆ ರಹಸ್ಯ ಬೆಂಬಲ: ಕೇಜ್ರಿವಾಲ್

Update: 2022-10-10 17:58 GMT
PHOTO: PTI

ಗಾಂಧಿನಗರ, ಅ. 10: ಗುಜರಾತ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ರಹಸ್ಯವಾಗಿ ಬೆಂಬಲ ನೀಡುತ್ತಿದ್ದಾರೆ ಹಾಗೂ ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲುವುದನ್ನು ನೋಡಲು ಬಯಸಿದ್ದಾರೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್  ಕೇಜ್ರಿವಾಲ್ ಅವರು ರವಿವಾರ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರು ಕೂಡ ಆಗಿರುವ  ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರೊಂದಿಗೆ ಎರಡು ದಿನಗಳ ಗುಜರಾತ್ ಭೇಟಿಯಲ್ಲಿ ಇದ್ದಾರೆ. ಆಮ್ ಆದ್ಮಿ ಪಕ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದೆ.

ವಲ್ಸದ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಕೇಜ್ರಿವಾಲ್, ‘‘ಒಂದು ವೇಳೆ ನೀವು ಆಮ್ ಆದ್ಮಿ ಪಕ್ಷಕ್ಕೆ ಸೇರಿದರೆ, ಅವರು ನಿಮ್ಮ ವ್ಯವಹಾರಕ್ಕೆ ಹಾನಿ ಉಂಟು ಮಾಡುವರು. ನೀವು ಅಲ್ಲೇ ಇರಿ, ಆದರೆ, ಅದನ್ನು ಸೋಲಿಸಲು ರಹಸ್ಯವಾಗಿ ಕೆಲಸ ಮಾಡಿ. ಕಾಂಗ್ರೆಸ್ ಕಾರ್ಯಕರ್ತರು ಭೀತಿಪಡುವ ಅಗತ್ಯ ಇಲ್ಲ. ನೀವು ಪಕ್ಷ ತ್ಯಜಿಸಬಹುದು ಹಾಗೂ ಆಮ್ ಆದ್ಮಿ ಪಕ್ಷ ಸೇರಬಹುದು. ನಿಮ್ಮ ಪಕ್ಷವನ್ನು ಮರೆತು ಬಿಡಿ’’ ಎಂದು ಅವರು ಹೇಳಿದರು. 

ಕಳೆದ 27 ವರ್ಷಗಳಲ್ಲಿ ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಏನನ್ನೂ ಪಡೆಯದಿರುವುದರಿಂದ ಸರಕಾರದಲ್ಲಿ ಬದಲಾವಣೆ ತರಲು  ರಾಜ್ಯದ ನಿವಾಸಿಗಳು ಬಯಸಿದ್ದಾರೆ ಎಂದು ಅವರು ತಿಳಿಸಿದರು.

‘‘ನವ ಗುಜರಾತ್‌ಗಾಗಿ ಪ್ರತಿಯೊಬ್ಬರೂ ಸಂಘಟಿತರಾಗಬೇಕು. ಪಕ್ಷದ ಕುರಿತು ಚಿಂತಿಸಬೇಡಿ, ಗುಜರಾತ್‌ಗಾಗಿ ಕೆಲಸ ಮಾಡಿ, ದೇಶಕ್ಕಾಗಿ ಕೆಲಸ ಮಾಡಿ’’ ಎಂದು ಅವರು ಹೇಳಿದರು.  ‘‘ಹಿಂದೂ ವಿರೋಧಿ’’ ಎಂಬ ಬ್ಯಾನರ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬ್ಯಾನರ್‌ಗಳ ಹಿಂದಿರುವವರು ಹಿಂದೂ ಪುರಾಣಗಳಲ್ಲಿ ದೇವರು ಹಾಗೂ ಶ್ರೀಕೃಷ್ಣನಿಂದ ಹತ್ಯೆಯಾದ ರಾಕ್ಷಸರು ಹಾಗೂ ಕಂಸನ ವಂಶಸ್ಥರು ಎಂದರು. 

ಶ್ರೀಕೃಷ್ಣ ನನಗೆ ಆಶೀರ್ವದಿಸಿ ಈ ಕಂಸನ ವಂಶಸ್ಥರನ್ನು ಮುಗಿಸುವ ವಿಶೇಷ ಕೆಲಸದೊಂದಿಗೆ ಕಳುಹಿಸಿ ಕೊಟ್ಟಿದ್ದಾನೆ ಎಂದು ಅವರು ಹೇಳಿದರು. ‘‘ಸಾರ್ವಜನಿಕರು ದೇವರು. ನನಗೆ ನಿಮ್ಮ ಬೆಂಬಲ ಬೇಕು. ರಾಕ್ಷಸರನ್ನು ನಾಶ ಮಾಡುವ ದೇವರ ಕೆಲಸವನ್ನು ಪೂರ್ಣಗೊಳಿಸಲು ನೀವು ನನಗೆ ಬೆಂಬಲ ನೀಡುತ್ತೀರಾ?’’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News