ಮತಾಂತರ ಕಾರ್ಯಕ್ರಮಕ್ಕೆ ಹಾಜರಾಗಿದ್ದ ದಿಲ್ಲಿಯ ಮಾಜಿ ಸಚಿವ ಗೌತಮ್ ಇಂದು ಪೊಲೀಸರ ವಿಚಾರಣೆಗೆ ಹಾಜರು
ಹೊಸದಿಲ್ಲಿ: ಕೆಲವು ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಪ್ರತಿಜ್ಞೆ ಮಾಡಿದ ಕಾರ್ಯಕ್ರಮದಲ್ಲಿ ಹಾಜರಾಗಿದ್ದಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಮಂಗಳವಾರ ನಗರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಹಿಂದೂಗಳು ಹಾಗೂ ಬೌದ್ಧರ ನಡುವೆ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ ನಂತರ ಗೌತಮ್ ರವಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಗೌತಮ್ ಗೆ ದಿಲ್ಲಿ ಪೊಲೀಸರು ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಪಹರ್‌ಗಂಜ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಹೇಳಿದ್ದಾರೆ. ಘಟನೆಯ ಬಗ್ಗೆ ದಾಖಲೆಗಳನ್ನು ತರಲು ಪೊಲೀಸರು ತನಗೆ ತಿಳಿಸಿದ್ದಾರೆಂದು ಹೇಳಿದರು.
"ಒಬ್ಬ ವಕೀಲ ಹಾಗೂ ಜವಾಬ್ದಾರಿಯುತ ಭಾರತೀಯ ಪ್ರಜೆಯಾಗಿ ನಾನು ಕಾನೂನು ಮತ್ತು ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದೇನೆ. ನಾನು ಪೊಲೀಸ್ ಠಾಣೆಗೆ ಹೋಗುತ್ತೇನೆ ಹಾಗೂ ಎಲ್ಲಾ ದಾಖಲೆಗಳನ್ನು ತೋರಿಸುತ್ತೇನೆ’’ ಎಂದು ದಿಲ್ಲಿ ಸರಕಾರದ ಮಾಜಿ ಸಮಾಜ ಕಲ್ಯಾಣ ಸಚಿವರಾದ ಗೌತಮ್ ಹೇಳಿದ್ದಾರೆ.