×
Ad

ಇಬ್ಬರು ಮಹಿಳೆಯರನ್ನು ಕೊಂದು ನರಬಲಿ ನೀಡಿದ ಪ್ರಕರಣ: ದಂಪತಿ ಸಹಿತ ಮೂವರ ಬಂಧನ

Update: 2022-10-11 15:12 IST
ಸಾಂದರ್ಭಿಕ ಚಿತ್ರ

ತಿರುವನಂತಪುರ,ಅ.11: ಇಬ್ಬರು ಮಹಿಳೆಯರ ಸಾವಿನ ಕುರಿತು ನಡೆಸಲಾದ ತನಿಖೆಯು ಶಂಕಿತ ನರಬಲಿ ಪ್ರಕರಣವನ್ನು ಬೆಟ್ಟು ಮಾಡಿರುವ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ದಂಪತಿ ಸೇರಿದಂತೆ ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.

ಪೆರುಂಬವೂರ ನಿವಾಸಿ ಮುಹಮ್ಮದ್ ಶಫಿ ಅಲಿಯಾಸ್ ರಶೀದ್, ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳದ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಬಂಧಿತ ಆರೋಪಿಗಳಾಗಿದ್ದಾರೆ. ರಶೀದ್ ಮಹಿಳೆಯರನ್ನು ಅಪಹರಿಸಿ ಸಿಂಗ್ ದಂಪತಿಯ ಮನೆಗೆ ಕರೆತಂದಿದ್ದ ಎಂದು ಶಂಕಿಸಲಾಗಿದೆ. ಆರ್ಥಿಕ ಏಳಿಗೆಗಾಗಿ ವಾಮಾಚಾರ ವಿಧಿಯ ಭಾಗವಾಗಿ ಮಹಿಳೆಯರನ್ನು ಕೊಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಹೊಟ್ಟೆಪಾಡಿಗಾಗಿ ಎರ್ನಾಕುಳಮ್‌ನಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ರೋಸಿಲಿ ಮತ್ತು ಪದ್ಮಂ ಎಂಬಿಬ್ಬರು ಮಹಿಳೆಯರನ್ನು ಮೂರು ತಿಂಗಳ ಅಂತರದಲ್ಲಿ ಅಪಹರಿಸಲಾಗಿತ್ತು. ರೋಸಿಲಿ ಜೂನ್‌ನಿಂದ ಮತ್ತು ಪದ್ಮಂ ಸೆ.26ರಿಂದ ನಾಪತ್ತೆಯಾಗಿದ್ದರು.

ಇಬ್ಬರು ಮಹಿಳೆಯರ ಫೋನ್‌ಗಳನ್ನು ಜಾಲಾಡಿದ ಪೊಲೀಸರು ಅವರು ರಶೀದ್‌ಗೆ ಕರೆಗಳನ್ನು ಮಾಡಿರುವುದು ಬೆಳಕಿಗೆ ಬಂದ ನಂತರ ಆತನನ್ನು ವಶಕ್ಕೆ ತೆಗೆದುಕೊಂಡಿದ್ದರು. ನರಬಲಿ ವಿಧಿಗಾಗಿ ಮಹಿಳೆಯರನ್ನು ಕೊಂದಿರುವುದಾಗಿ ರಶೀದ್ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದ.

ಪೊಲೀಸ್ ತಂಡವು ತನಿಖೆಗಾಗಿ ತಿರುವಳ್ಳಕ್ಕೆ ತೆರಳಿದೆ ಎಂದು ತಿಳಿಸಿದ ಕೊಚ್ಚಿ ನಗರ ಜಿಲ್ಲೆಯ ಎಸ್.ಪಿ. ಸಿ.ಎಚ್.ನಾಗರಾಜು ಅವರು,‘ನರಬಲಿ ನೀಡಲಾಗಿದೆ ಎಂದು ನಾವು ಶಂಕಿಸಿದ್ದೇವೆ. ಮಹಿಳೆಯರ ಶವಗಳನ್ನು ಹೊರತೆಗೆಯಬೇಕಿದೆ. ಮಹಿಳೆಯರ ರುಂಡಗಳನ್ನು ಕತ್ತರಿಸಲಾಗಿತ್ತು ಮತ್ತು ಶವಗಳನ್ನು ಪಟ್ಟಣಂತಿಟ್ಟದ ಎಳಂತೂರಿನಲ್ಲಿ ಹುಗಿಯಲಾಗಿತ್ತು ಎಂದರು. ಕೊಚ್ಚಿ ನಗರ, ಎರ್ನಾಕುಳಂ ಗ್ರಾಮೀಣ ಮತ್ತು ಪಟ್ಟಣಂತಿಟ್ಟ ಪೊಲೀಸರು ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

‘ವಿವರವಾದ ತನಿಖೆಯ ನಂತರವೇ ಕೊಲೆಗೆ ನಿಖರವಾದ ಕಾರಣಗಳು ಹಾಗೂ ಕೊಲೆಯನ್ನು ಯಾವಾಗ ಮತ್ತು ಹೇಗೆ ಮಾಡಲಾಯಿತು ಎನ್ನುವುದು ತಿಳಿದುಬರಬೇಕಿದೆ. ಸದ್ಯಕ್ಕೆ ನಾವು ಕೊಲೆ ಪ್ರಕರಣಗಳನ್ನಾಗಿ ದಾಖಲಿಸಿಕೊಂಡಿದ್ದೇವೆ ’ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News