ಮಹಾರಾಷ್ಟ್ರದಲ್ಲಿ 8 ತಿಂಗಳಲ್ಲಿ 1800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ: ರಾಜ್ಯ ಪರಿಹಾರ, ಪುನರ್ವಸತಿ ಇಲಾಖೆಯ ಅಂಕಿ ಅಂಶ

Update: 2022-10-13 08:46 GMT

ಮುಂಬೈ: ಮಹಾರಾಷ್ಟ್ರದಲ್ಲಿ ರೈತರ ಹತಾಶೆ ಮುಗಿಲು ಮುಟ್ಟಿದ್ದು, ಈ ವರ್ಷದ ಮೊದಲ ಎಂಟು ತಿಂಗಳಲ್ಲಿ 1875 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಜ್ಯ ಪರಿಹಾರ ಮತ್ತು ಪುನರ್ವಸತಿ ಇಲಾಖೆಯ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

2021ರ ಇದೇ ಅವಧಿಯಲ್ಲಿ 1605 ಮಂದಿ ಸಾಲದ ಹೊರೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಹಿಂದೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾ ವಿಕಾಸ ಅಗಾಡಿ ಸರ್ಕಾರ ಹಲವು ಸಾಲ ಮನ್ನಾ ಯೋಜನೆಗಳನ್ನು ಪ್ರಕಟಿಸಿದ ಹೊರತಾಗಿಯೂ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಇತ್ತೀಚೆಗೆ ಮುಖ್ಯಮಂತ್ರಿ ಏಕನಾಥ ಶಿಂಧೆ ಮಹಾರಾಷ್ಟ್ರವನ್ನು ರೈತರ ಆತ್ಮಹತ್ಯೆ ಮುಕ್ತ ರಾಜ್ಯವನ್ನಾಗಿ ಮಾಡುವ ಭರವಸೆ ನೀಡಿದ್ದರು.

ರೈತರ ಉತ್ಪನ್ನಗಳಿಗೆ ಕಡಿಮೆ ಬೆಲೆ, ಒತ್ತಡ ಹಾಗೂ ಕುಟುಂಬ ಜವಾಬ್ದಾರಿಗಳು, ಸರ್ಕಾರದ ನಿರ್ಲಕ್ಷ್ಯ, ನೀರಾವರಿ ಸೌಲಭ್ಯದ ಕೊರತೆ, ಸಾಲದ ಹೊರೆ, ಸಬ್ಸಿಡಿಯಲ್ಲಿ ಭ್ರಷ್ಟಾಚಾರ, ಅತಿವೃಷ್ಟಿ ಬೆಳೆ ಹಾನಿ ರೈತರು ಇಂಥ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣಗಳು ಎಂದು ಹಲವು ಸಾಮಾಜಿಕ ಸಂಘಟನೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

ಅಮರಾವತಿ ವಿಭಾಗದಲ್ಲಿ ಗರಿಷ್ಠ ಅಂದರೆ 725 ರೈತರು ಸಾವಿಗೆ ಶರಣಾಗಿದ್ದಾರೆ. ಕಳೆದ ವರ್ಷ ಇಲ್ಲಿ 662 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಔರಂಗಾಬಾದ್‍ ನಲ್ಲಿ 2022 ಹಾಗೂ 2021ರಲ್ಲಿ ಕ್ರಮವಾಗಿ 661 ಹಾಗೂ 532, ನಾಸಿಕ್‍ನಲ್ಲಿ 252 ಹಾಗೂ 201 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗ್ಪುರದಲ್ಲಿ ಈ ವರ್ಷ 225 ಹಾಗೂ ಕಳೆದ ವರ್ಷ 199 ಮಂದಿ ಸಾವಿಗೆ ಶರಣಾಗಿದ್ದರು ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News