ಉತ್ತರಾಖಂಡ: ಗುಂಡಿನ ಚಕಮಕಿಯಲ್ಲಿ ಬಿಜೆಪಿ ನಾಯಕನ ಪತ್ನಿ ಮೃತ್ಯು; ಉ.ಪ್ರ. ಪೊಲೀಸರ ವಿರುದ್ದ ಹತ್ಯೆ ಕೇಸ್

Update: 2022-10-13 07:56 GMT

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಗಣಿಗಾರಿಕೆ ಮಾಫಿಯಾದಲ್ಲಿ ಭಾಗಿಯಾದ ವ್ಯಕ್ತಿಯನ್ನು ಬೆನ್ನಟ್ಟುವ ವೇಳೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಪೊಲೀಸರು ಹಾಗೂ  ಗಣಿಗಾರಿಕೆ ಮಾಫಿಯಾದ ವ್ಯಕ್ತಿಯ ಸಹಾಯಕರ ನಡುವಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ಬಿಜೆಪಿ ನಾಯಕ ಗುರ್ತಾಜ್ ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್ ಎಂದು ಗುರುತಿಸಲಾಗಿದೆ.

ಗಣಿಗಾರಿಕೆ ಮಾಫಿಯಾಕ್ಕೆ ಸಂಬಂಧಿಸಿ ಜಾಫರ್ ಎಂಬ ವ್ಯಕ್ತಿಯನ್ನು ಬಂಧಿಸಲು ಮೊರಾದಾಬಾದ್ ಪೊಲೀಸ್ ತಂಡವು ಉತ್ತರಾಖಂಡದ ಜಸ್ಪುರ್‌ಗೆ ತಲುಪಿದಾಗ ಉಂಟಾದ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಲಾಯಿತು ಹಾಗೂ  ಮೂವರು ಗಾಯಗೊಂಡರು.

ಬಿಜೆಪಿ ಮುಖಂಡನ ಪತ್ನಿಯ ಸಾವಿನ ನಂತರ, ಕೋಪಗೊಂಡ ಗ್ರಾಮಸ್ಥರು ನಾಲ್ವರು ಪೊಲೀಸರನ್ನು ಒತ್ತೆಯಾಳಾಗಿಸಿಕೊಂಡಿದ್ದಾರೆ. ಉತ್ತರಾಖಂಡದಲ್ಲಿ ಉತ್ತರಪ್ರದೇಶ ಪೊಲೀಸರ ವಿರುದ್ಧ ಕೊಲೆ ಪ್ರಕರಣವೂ ದಾಖಲಾಗಿದೆ.

ಆರೋಪಿಯು ವಾಂಟೆಡ್ ಕ್ರಿಮಿನಲ್ ಆಗಿದ್ದು, ಆತನ ಬಂಧನಕ್ಕೆ 50,000 ರೂ. ಬಹುಮಾನ ಘೋಷಿಸಲಾಗಿದೆ. ಆತ ಭರತ್‌ಪುರ ಗ್ರಾಮಕ್ಕೆ ಪರಾರಿಯಾಗಿದ್ದ. ಭುಲ್ಲರ್ ಮನೆಯಲ್ಲಿ ಅಡಗಿಕೊಂಡಿದ್ದಾನೆಂದು ನಂಬಲಾಗಿತ್ತು.  ನಮ್ಮ ಪೊಲೀಸ್ ತಂಡವು ತಲುಪಿದಾಗ, ಅವರನ್ನು ಒತ್ತೆಯಾಳಾಗಿ ಇರಿಸಲಾಯಿತು ಹಾಗೂ  ಅವರ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲಾಯಿತು, ”ಎಂದು ಮೊರಾದಾಬಾದ್‌ನ ಹಿರಿಯ ಪೊಲೀಸ್ ಶಲಭ್ ಮಾಥುರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News