ʼಹಿಜಾಬ್‌ ಧರಿಸುವುದು ಅವರವರ ಆಯ್ಕೆಯ ವಿಚಾರʼ:‌ ಭಿನ್ನ ತೀರ್ಪಿನ ಬಳಿಕ ಸುಪ್ರೀಂ ನ್ಯಾಯಾಧೀಶರು ಹೇಳಿದ್ದೇನು?

Update: 2022-10-13 07:17 GMT

ಹೊಸದಿಲ್ಲಿ: ಹಿಜಾಬ್ ನಿಷೇಧ(Hijab Ban) ಕುರಿತಂತೆ ಹೊರಬಿದ್ದ ವಿಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್(Karnataka Highcourt) ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಸ್ತೃತ ಪೀಠ ರಚಿಸಿ ವಿಚಾರಣೆ ನಡೆಸುವ ಸಲುವಾಗಿ ಮುಖ್ಯ ನ್ಯಾಯಮೂರ್ತಿಗಳ ಮುಂದಿಡಬೇಕು ಎಂದು ಸುಪ್ರೀಂ ಕೋರ್ಟ್(Supreme court) ಇಂದು ಹೇಳಿದೆ.

ಕರ್ನಾಟಕ ಸರಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಿದ ಆದೇಶವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಜಸ್ಟಿಸ್ ಹೇಮಂತ್ ಗುಪ್ತಾ(Justice Hemant Gupta) ವಜಾಗೊಳಿಸಿದರು.

"ವಿಭಿನ್ನ ಅಭಿಪ್ರಾಯಗಳಿವೆ," ಎಂದು ಹೈಕೋರ್ಟ್ ಆದೇಶದೊಂದಿಗೆ ಸಹಮತ ವ್ಯಕ್ತಪಡಿಸುವ ವೇಳೆ ಜಸ್ಟಿಸ್ ಗುಪ್ತಾ ಹೇಳಿದರು.

"ನಾನು ಬೇರೆ ಅಭಿಪ್ರಾಯ ಹೊಂದಿದ್ದೇನೆ ಹಾಗೂ ಮೇಲ್ಮನವಿಗೆ ಅನುಮತಿಸುತ್ತೇನೆ" ಎಂದು ಜಸ್ಟಿಸ್ ಸುಧಾಂಶು ಧುಲಿಯಾ ಹೇಳಿದರು. "ಇಲ್ಲಿ ಹೆಚ್ಚಿನ ಒತ್ತು ಆಯ್ಕೆಯ ವಿಚಾರಕ್ಕಿರಬೇಕು. ಹಿಜಾಬ್‌ ಧರಿಸುವುದು ಆಯ್ಕೆಯ ವಿಚಾರ, ಹೆಚ್ಚೇನೂ ಇಲ್ಲ, ಕಡಿಮೆಯೂ ಇಲ್ಲ" ಎಂದು ಅವರು ಹೇಳಿದರು.

"ನನ್ನ ಮನಸ್ಸಿನಲ್ಲೂ ಪ್ರಮುಖವಾಗಿದ್ದುದು ಹೆಣ್ಣು ಮಕ್ಕಳ ಶಿಕ್ಷಣ. ಇದು ಬಹಳ ಮುಖ್ಯ. ಆದರೆ ನನ್ನ ಸಹ ನ್ಯಾಯಾಧೀಶರ ಅಭಿಪ್ರಾಯದೊಂದಿಗೆ ನಾನು ಗೌರವಪೂರ್ವಕವಾಗಿ ಸಹಮತ ಹೊಂದಿಲ್ಲ" ಎಂದು ಜಸ್ಟಿಸ್ ಗುಪ್ತಾ ಹೇಳಿದರು.

ವಾದ ವಿವಾದದ ವೇಳೆ ಅರ್ಜಿದಾರರ ಪರ ವಕೀಲರು ತಮ್ಮ ವಾದ ಮಂಡನೆ ವೇಳೆ ಹಿಜಾಬ್ ನಿಷೇಧದಿಂದ ಮುಸ್ಲಿಂ ಬಾಲಕಿಯರ ಶಿಕ್ಷಣ ಮೊಟಕುಗೊಳ್ಳಬಹುದು ಹಾಗೂ ಅವರು ತರಗತಿಗೆ ಹಾಜರಾಗುವುದನ್ನು ನಿಲ್ಲಿಸಬಹುದು ಎಂಬ ಭಯ ವ್ಯಕ್ತಪಡಿಸಿದ್ದರೆ ಸರಕಾರದ ಪರ ವಕೀಲರು ತಮ್ಮ ವಾದ ಮಂಡನೆ ವೇಳೆ ಈ ವಿವಾದವು 'ಧರ್ಮ ತಟಸ್ಥ' ಎಂದು ಹೇಳಿದ್ದರು.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಹೇರಿ ರಾಜ್ಯ ಸರಕಾರ ಫೆಬ್ರವರಿ 5 ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿಗಳು ಹೈಕೋರ್ಟಿನ ಮೊರೆ ಹೋಗಿದ್ದರೆ, ಮಾರ್ಚ್ 15 ರಂದು ಹೈಕೋರ್ಟ್ ಕೂಡ ರಾಜ್ಯ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News