ಕಪ್ಪುಹಣ ಬಿಳುಪು ಪ್ರಕರಣ: ಈಡಿ ದಾಳಿ; ಚತ್ತೀಸ್‌ಗಢದ ಐಎಎಸ್ ಅಧಿಕಾರಿ ಬಂಧನ
ಹೊಸದಿಲ್ಲಿ: ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಗುರುವಾರ ಚತ್ತೀಸ್‌ಗಡದ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯಿ ಹಾಗೂ ಇನ್ನಿಬ್ಬರನ್ನು ಬಂಧಿಸಿದೆ.
ಇಂದ್ರಮಣಿ ಗ್ರೂಪ್ ಉದ್ಯಮಿ ಸುನೀಲ್ ಅಗರ್ವಾಲ್ ಹಾಗೂ ನಾಪತ್ತೆಯಾದ ಉದ್ಯಮಿ ಸೂರ್ಯಕಾಂತ್ ತಿವಾರಿಯ ಸಂಬಂಧಿ ಲಕ್ಷ್ಮಿಕಾಂತ್ ತಿವಾರಿ ಇತರ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಸರಕಾರಿ ಸ್ವಾಮ್ಯದ ಚತ್ತೀಸ್‌ಗಢ ಇನ್‌ಫೋಟೆಕ್ ಪ್ರಮೋಶನ್ ಸೊಸೈಟಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ವಿಷ್ಣೋಯಿ ಅವರನ್ನು ರಾಯ್‌ಪುರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಬುಧವಾರ ವಿಚಾರಣೆಗೊಳಪಡಿಸಲಾಗಿತ್ತು.
ಸರಕಾರಿ ಅಧಿಕಾರಿಗಳ ಜೊತೆ ಶಾಮೀಲಾಗಿ ರಾಜ್ಯದಲ್ಲಿ ಕಲ್ಲಿದ್ದಲು ಹಾಗೂ ಗಣಿಗಾರಿಕೆ ವಾಹನಗಳ ಗಳ ಮಾಲಕರಿಂದ ಹಣ ಸುಲಿಗೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಮಂಗಳವಾರ ಚತ್ತೀಸ್‌ಗಢದ ವಿವಿಧೆಡೆ ದಾಳಿ ಕಾರ್ಯಾಚರಣೆಗಳನ್ನು ನಡೆಸಿತ್ತು ಹಾಗೂ 4 ಕೋಟಿ ರೂ.ಗೂ ಅಧಿಕ ಮೌಲ್ಯದ ನಗದು ಹಾಗೂ ಆಭರಣಗಳನ್ನು ವಶಪಡಿಸಿಕೊಂಡಿತ್ತು.
ಜಾರಿ ನಿರ್ದೇಶನಾಲಯವು ಇನ್ನೋರ್ವ ಐಎಎಸ್ ಅಧಿಕಾರಿಣಿ ಹಾಗೂ ರಾಯಘಡ ಜಿಲ್ಲಾಧಿಕಾರಿ ರಾನು ಶಾ ಅವರ ನಿವಾಸದ ಮೇಲೂ ದಾಳಿ ನಡೆಸಿತ್ತು. ಆದರೆ ಆಕೆ ಸ್ಥಳದಲ್ಲಿಲ್ಲದಿದ್ದುದರಿಂದ ಅವರ ನಿವಾಸಕ್ಕೆ ಬೀಗಮುದ್ರ ಜಡಿದಿತ್ತು.