×
Ad

ಮಾವೋವಾದಿ ನಂಟು ಪ್ರಕರಣ: ದಿಲ್ಲಿ ವಿವಿ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಖುಲಾಸೆ

Update: 2022-10-14 11:17 IST
Photo:NDTV

ಮುಂಬೈ, ಅ. ೧೪: ಬಾಂಬೇ ಹೈಕೋರ್ಟ್ ಶುಕ್ರವಾರ ಮಾವೋವಾದಿಗಳೊಂದಿಗೆ ನಂಟು ಹೊಂದಿದ ಪ್ರಕರಣದಲ್ಲಿ, ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಜಿ.ಎನ್. ಸಾಯಿಬಾಬಾರನ್ನು ದೋಷಮುಕ್ತಗೊಳಿಸಿದೆ ಎಂದು ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ. ಅವರಿಗೆ ೨೦೧೭ರಲ್ಲಿ ಸೆಶನ್ಸ್ ನ್ಯಾಯಾಲಯವೊಂದು ಈ ಪ್ರೆಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.


ಗಡ್ಚಿರೋಳಿಯಲ್ಲಿರುವ ಸೆಶನ್ಸ್ ನ್ಯಾಯಾಲಯವು ಕೇಂದ್ರ ಸರಕಾರದಿಂದ ಅನುಮೋದನೆ ಪಡೆಯದೆಯೇ ಸಾಯಿಬಾಬಾರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ಅಡಿ ದೋಷಾರೋಪ ಹೊರಿಸಿತ್ತು ಎಂದು ನ್ಯಾಯಮೂರ್ತಿಗಳಾದ ರೋಹಿತ್ ದೇವ್ ಮತ್ತು ಅನಿಲ್ ಪನ್ಸಾರೆ ಅವರನ್ನೊಳಗೊಂಡ ಪೀಠವೊಂದು ಅಭಿಪ್ರಾಯಪಟ್ಟಿತು.


೨೦೧೭ರಲ್ಲಿ ಸೆಶನ್ಸ್ ನ್ಯಾಯಾಲಯವು ಅವರನ್ನು ದೋಷಿ ಎಂಬುದಾಗಿ ತೀರ್ಮಾನಿಸಿದ ಬಳಿಕ ನಾಗಪುರದ ಕೇಂದ್ರೀಯಲ ಜೈಲಿನಲ್ಲಿ ಇಡಲಾಗಿತ್ತು.


ಸಾಯಿಬಾಬಾ ‘‘ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಸಾಧ್ಯತೆಯಿದೆ’’ ಎಂಬುದಾಗಿ ಆರೋಪಿಸಿ ಪೊಲೀಸರು ಅವರನ್ನು ೨೦೧೪ ಮೇ ತಿಂಗಳಲ್ಲಿ ಬಂಧಿಸಿದ್ದರು. ಅವರಿಗೆ ೨೦೧೬ ಎಪ್ರಿಲ್‌ನಲ್ಲಿ ಮಧ್ಯಾಂತರ ಜಾಮೀನು ಲಭಿಸಿತ್ತು.


ಕಾಯಿಲೆಗಳಿಂದಾಗಿ ೫೫ ವರ್ಷದ ಅವರ ದೇಹದ ೯೦% ಭಾಗವು ಚಲನೆಯನ್ನು ಕಳೆದುಕೊಂಡಿರುವುದರಿಂದ ಅವರು ಗಾಲಿಕುರ್ಚಿಯಲ್ಲಿ ಓಡಾಡುತ್ತಿದ್ದರು. ಅವರ ಆರೋಗ್ಯವನ್ನು ಪರಿಗಣಿಸಿ ಬಿಡುಗಡೆಗೊಳಿಸಬೇಕೆಂದು ವಿವಿಧ ಮಾನವಹಕ್ಕು ಸಂಘಟನೆಗಳು ಮತ್ತು ನಾಗರಿಕ ಸಮಾಜದ ಗುಂಪುಗಳು ಒತ್ತಾಯಿಸಿದ್ದವು.


ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಶುಕ್ರವಾರ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಅಧಿಕಾರಿಗಳಿಗೆ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News