11 ವರ್ಷಗಳ ಹಿಂದೆ ಪ್ರಕಟಗೊಂಡ ಲೇಖನಕ್ಕೆ ಕಾಶ್ಮೀರ್ ವಾಲ್ಲಾ ಸಂಪಾದಕ, ಸಂಶೋಧನಾ ವಿದ್ವಾಂಸನ ವಿರುದ್ಧ ಚಾರ್ಜ್ ಶೀಟ್
ಜಮ್ಮು: ರಾಜ್ಯ ತನಿಖಾ ಏಜನ್ಸಿಯು ದಿ ಕಾಶ್ಮಿರ್ ವಾಲ್ಲಾ(Kashmirwalla) ಸಂಪಾದಕ ಫಹದ್ ಶಾ ಮತ್ತು ಸಂಶೋಧನಾ ವಿದ್ವಾಂಸ ಅಬ್ದುಲ್ ಆಲಾ ಫಾಝಿಲಿ ವಿರುದ್ಧ 11 ವರ್ಷಗಳ ಹಿಂದಿನ ಲೇಖನಕ್ಕೆ ಸಂಬಂಧಿಸಿದಂತೆ `ನರೇಟಿವ್ ಟೆರರಿಸಂ'(Narrative Terrorism) ಆರೋಪ ಹೊರಿಸಿ ಚಾರ್ಜ್ ಶೀಟ್ ಸಲ್ಲಿಸಿದೆ.
ʻʻಕ್ರಿಮಿನಲ್ ಸಂಚಿನ ಉದ್ದೇಶ ಹಾಗೂ ಉಗ್ರವಾದ ಹರಡುವ ಉದ್ದೇಶದಿಂದ ಸುಳ್ಳು ಸುದ್ದಿ ಹರಡಲು ಯತ್ನಿಸಿದ್ದಾರೆ, ಆರೋಪಿ ಫಾಝಿಲಿ ತನ್ನ ಪ್ರಚೋದನಾತ್ಮಕ ಮತ್ತು ದೇಶದ್ರೋಹದ ವಿಚಾರ ಇರುವ ಬರಹದಿಂದ ಸಮಾಜದಲ್ಲಿ ಅಶಾಂತಿ ಹರಡಲು ಹಾಗೂ ಮುಗ್ಧ ಯುವಕರನ್ನು ಹಿಂಸೆಯ ಹಾದಿಗೆ ಪ್ರಚೋದಿಸಿದ್ದಾರೆ,ʼʼ ಎಂದು ಚಾರ್ಜ್ ಶೀಟ್‌ನಲ್ಲಿ ಹೇಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿ ವಿಷಯ ಪೋಸ್ಟ್ ಮಾಡಿದ್ದಾರೆಂಬ ಆರೋಪ ಹೊರಿಸಿ ಪುಲ್ವಾಮ ಪೊಲೀಸರು ಶಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಿದ್ದರು. ಅವರ ಆನ್‌ಲೈನ್ ಮ್ಯಾಗಜೀನ್‌ನಲ್ಲಿ 2011 ರಲ್ಲಿ ಪ್ರಕಟಗೊಂಡ ಲೇಖನ ಪ್ರಚೋದನಾತ್ಮಕವಾಗಿದೆ ಎಂಬ ಆರೋಪ ಕುರಿತಂತೆ ನಂತರ ಇನ್ನೊಂದು ಪ್ರಕರಣದಲ್ಲಿ ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಇದೇ ಪ್ರಕರಣ ಸಂಬಂಧ ಈಗ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಪೊಲೀಸರ ಪ್ರಕಾರ ಲೇಖನವನ್ನು ಅಬ್ದುಲ್ ಆಲಾ ಫಾಝಿಲಿ ಬರೆದಿದ್ದರು. ಅವರನ್ನು ಎಪ್ರಿಲ್ 17 ರಂದು ಯುಎಪಿಎ ಅಡಿ ಬಂಧಿಸಲಾಗಿತ್ತು.
ಈ ಲೇಖನವು ದೇಶದ ಏಕತೆಗೆ ವಿರುದ್ಧವಾಗಿದೆ ಹಾಗೂ ದೇಶದ ಭೂಭಾಗವನ್ನು ಪ್ರತ್ಯೇಕಿಸುವ ಕುರಿತಂತೆ ಬೆಂಬಲಿಸಿದೆ ಹಾಗೂ ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸಿದೆ,ʼʼ ಎಂದು ರಾಜ್ಯ ತನಿಖಾ ಏಜನ್ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಲೇಖನವನ್ನು ಪ್ರಕಟಿಸಲು ಶಾ ಅವರು ಫಾಝಿಲಿ ಜೊತೆ ಸಂಚು ಹೂಡಿದ್ದರು ಹಾಗೂ ಇದರಿಂದ ಜಮ್ಮು ಕಾಶ್ಮೀರದಾದ್ಯಂತೆ ಉಗ್ರವಾದ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಏರಿಕೆಯಾಗಿತ್ತು ಎಂದು ಏಜನ್ಸಿ ಆರೋಪಿಸಿದೆ.