ನ.12ರಂದು ಹಿಮಾಚಲ ಅಸೆಂಬ್ಲಿ ಚುನಾವಣೆ: ಡಿಸೆಂಬರ್ 8ರಂದು ಮತ ಎಣಿಕೆ

Update: 2022-10-14 18:13 GMT
Photo:PTI

ಹೊಸದಿಲ್ಲಿ,ಅ.14: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯು ನವೆಂಬರ್ 12ರಂದು  ಒಂದೇ ಹಂತದಲ್ಲಿ ನಡೆಯಲಿದೆಯೆಂದು  ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಮತ ಎಣಿಕೆ ಡಿಸೆಂಬರ್ 8ರಂದು ನಡೆಯಲಿದೆಯೆಂದು ಅದು ತಿಳಿಸಿದೆ.

ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಅಧಿಕಾರಿ ರಾಜೀವ್ ಕುಮಾರ್ ಅವರು 48 ಸ್ಥಾನಗಳ ಹಿಮಾಚಲಪ್ರದೇಶದ ವಿಧಾನಸಭೆಯ ಚುನಾವಣಾ ದಿನಾಂಕವನ್ನು ಪ್ರಕಟಿಸಿದರು.

ಹಿಮಾಚಲಪ್ರದೇಶದಲ್ಲಿ 55.07 ಲಕ್ಷ ನೋಂದಣಿಯಾದ ಮತದಾರರಿದ್ದು, ಅವರಲ್ಲಿ 1.86 ಲಕ್ಷ ಮಂದಿ ಪ್ರಥಮ ಬಾರಿಗೆ ಮತಚಲಾಯಿಸಲಿದ್ದಾರೆಂದು ಅವರು ಹೇಳಿದರು.

ಅಕ್ಟೋಬರ್ 17ರಂದು ಚುನಾವಣಾ ಆಯೋಗ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಲಿದ್ದು, ಅಂದಿನಿAದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.

ನಾಮಪತ್ರಿಕೆ ಸಲ್ಲಿಕೆ ಕೂಡಾ ಅಕ್ಟೋಬರ್ 17ರಂದು ಆರಂಭಗೊಳ್ಳಲಿದ್ದು,  ಅಕ್ಟೋಬರ್ 25ರವರೆಗೂ ಮುಂದುವರಿಯಲಿದೆ ಎಂದವರು ತಿಳಿಸಿದರು. ಅಕ್ಟೋಬರ್ 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಕ್ಟೋಬರ್ 29 ನಾಮಪತ್ರ ಹಿಂತೆಗೆತಕ್ಕೆ ಕೊನೆದಿನಾಂಕವಾಗಿದೆ ಎಂದರು.

ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಿಸದೆ ಇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಕುಮಾರ್, ಚುನಾವಣಾ ಮಾದರಿ ನೀತಿ ಸಂಹಿತೆ, ಹಾಲಿ ವಿಧಾನಸಭೆಗಳ ಅವಧಿ ಮುಕ್ತಾಯ ದಿನಾಂಕ ಹಾಗೂ ಹವಾಮಾನ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಎರಡೂ ರಾಜ್ಯಗಳ ಚುನಾವಣಾ ದಿನಾಂಕವನ್ನು ಪ್ರತ್ಯೇಕವಾಗಿ ಪ್ರಕಟಿಸಲು ನಿರ್ಧರಿಸಲಾಯಿತೆಂದು ಎಂದು ಹೇಳಿದರು.

ಚುನಾವಣಾ ಪ್ರಣಾಳಿಕೆಯ ಕುರಿತಾಗಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ನಡೆಸಲಿದೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸುವ ಉಚಿತ ಕೊಡುಗೆಗಳ ಅನುಷ್ಠಾನವು ಹೇಗೆ ಕಾರ್ಯಸಾಧ್ಯವೆಂಬುದನ್ನು ಆಯಾ ಪಕ್ಷಗಳು ಆಯೋಗಕ್ಕೆ ವಿವರಿಸಬೇಕಾಗುತ್ತದೆ ಎಂದರು.

ಮಾದರಿ ಚುನಾವಣಾ ನೀತಿ ಸಂಹಿತೆಯನ್ನು  70 ದಿನಗಳಿಂದ 50 ದಿನಗಳಿಗೆ ಇಳಿಸಲಾಗಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.

ಚುನಾವಣಾ ದಿನಾಂಕಗಳನ್ನು ನಿರ್ಧರಿಸುವಾಗ ಪರ್ವತರಾಜ್ಯವಾದ ಹಿಮಾಚಲದ ಹವಾಮಾನ ಪರಿಸ್ಥಿತಿಯನ್ನು ಕೂಡಾ ಪರಿಗಣನೆಗೆ ತೆಗೆದುಕೊಂಡಿರುವುದಾಗಿ ಅವರು ಹೇಳಿದರು.

ಸುಳ್ಳು ಸುದ್ದಿಗಳು ಮತದಾರರ ಮೇಲೆ ಪ್ರಭಾವ ಬೀರುವುದನ್ನು ತಡೆಗಟ್ಟಲುಆಯೋಗವು ತನ್ನದೇ ಆದ ಸಾಮಾಜಿಕ ಜಾಲತಾಣ ತಂಡವನ್ನು ರಚಿಸಿದ್ದು, ಅವು  ಅಂತರ್ಜಾಲದಲ್ಲಿ ಹರಿದಾಡುವ ಇಂತಹ ವಿಷಯಗಳ ಬಗ್ಗೆ ನಿಗಾವಿರಿಸಲಿದೆ ಎಂದರು.

68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಪ್ರಸಕ್ತ ಆಡಳಿತಾರೂಢ ಬಿಜೆಪಿಯ 45 ಶಾಸಕರಿದ್ದಾರೆ. ಕಾಂಗ್ರೆಸ್ 22 ಹಾಗೂ ಸಿಪಿಎಂ 1 ಸದಸ್ಯರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News