ಹಿಜಾಬ್‌ ಧರಿಸಿದ ಮುಸ್ಲಿಂ ಮಹಿಳೆ ಒಂದು ದಿನ ದೇಶದ ಪ್ರಧಾನಿಯಾಗುತ್ತಾಳೆ: ಅಸದುದ್ದೀನ್ ಉವೈಸಿ

Update: 2022-10-14 12:03 GMT

ಹೊಸದಿಲ್ಲಿ: ಹಿಜಾಬ್‌(Hijab) ಧರಿಸಿದ ಮಾತ್ರಕ್ಕೆ ಮುಸ್ಲಿಂ ಮಹಿಳೆಯರು ಇತರ ಮಹಿಳೆಯರಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಾಗುವುದಿಲ್ಲ, ಒಂದು ದಿನ ಹಿಜಾಬ್‌ ಧರಿಸಿದ ಮುಸ್ಲಿಂ ಮಹಿಳೆ ಈ ದೇಶದ ಪ್ರಧಾನಿಯಾಗುವಳು, ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್‌ ಉವೈಸಿ(Asaduddin Owaisi) ಹೇಳಿದ್ದಾರೆ.

ಹಿಜಾಬ್‌ ನಿಷೇಧ ಕುರಿತಂತೆ ಸುಪ್ರೀಂ ಕೋರ್ಟಿನ(Supreme Court) ಭಿನ್ನ ತೀರ್ಪಿನ ನಂತರ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉವೈಸಿ ಮೇಲಿನಂತೆ ಹೇಳಿದರು.

ಮುಸ್ಲಿಂ ಮಹಿಳೆಯರು ಶಿರ ಮುಚ್ಚುವ ವಸ್ತ್ರ ಧರಿಸಿದ್ದಾರೆಂಬ ಮಾತ್ರಕ್ಕೆ ಅವರು ತಮ್ಮ ಮನಸ್ಸನ್ನು ಮುಚ್ಚಿದ್ದಾರೆ ಎಂದರ್ಥವಲ್ಲ ಎಂದು ಅವರು ಹೇಳಿದರು.

ʻʻಹಿಂದೆಯೂ ಹೇಳಿದ್ದೇನೆ, ಮತ್ತೆ ಹೇಳುತ್ತೇನೆ. ನನ್ನ ಜೀವಮಾನದಲ್ಲಿ ಅಲ್ಲದೇ ಇದ್ದರೂ ನನ್ನ ನಂತರ ಹಿಜಾಬ್‌ ಧರಿಸಿರುವ ಮುಸ್ಲಿಂ ಮಹಿಳೆ ಈ ದೇಶದ ಪ್ರಧಾನಿಯಾಗುತ್ತಾಳೆ ಎಂದು ನಾನು ಹೇಳಿದಾಗ ಹಲವು ಜನರಿಗೆ ಹೊಟ್ಟೆಯುರಿ, ಎದೆಯುರಿಯಾಗಿದೆ,ʼʼಎಂದು ಅವರು ಹೇಳಿದರು.

ʻʻಹಿಂದು, ಸಿಖ್‌ ಮತ್ತು ಕ್ರೈಸ್ತ ವಿದ್ಯಾರ್ಥಿಗಳಿಗೆ ತಮ್ಮ ಧರ್ಮದ ಸಂಕೇತವನ್ನು ಧರಿಸಿ ತರಗತಿಗೆ ಅನುಮತಿಸುತ್ತಾರೆ, ಆದರೆ ಮುಸ್ಲಿಮರನ್ನು ತಡೆಯುತ್ತಾರೆ. ಮುಸ್ಲಿಮರ ಬಗ್ಗೆ ಅವರೇನು ಅಂದುಕೊಂಡಿರುವರು? ಮುಸ್ಲಿಮರು ನಮಗಿಂತ ಕೆಳಗಿನ ಹಂತದಲ್ಲಿರುವವರೆಂದು,ʼʼ ಎಂದು ಉವೈಸಿ ಹೇಳಿದರು.

ʻʻಹಿಜಾಬ್‌ ಧರಿಸಿದ ಮಹಿಳೆ ದೇಶದ ಪ್ರಧಾನಿಯಾಗಬೇಕೆಂಬುದು ನನ್ನ ಕನಸು. ಅದರಲ್ಲಿ ತಪ್ಪೇನಿದೆ? ಹಿಜಾಬ್‌ ಧರಿಸಬಾರದು ಎಂದು ಹೇಳುತ್ತೀರಿ. ಮತ್ತೇನು ಧರಿಸಬೇಕು? ಬಿಕಿನಿ? ಅದನ್ನೂ ಧರಿಸುವ ಹಕ್ಕಿದೆ. ನಮ್ಮ ಮಕ್ಕಳು ಹಿಜಾಬ್‌ ತೆಗೆಯಬೇಕು ಮತ್ತು ನಾನು ಗಡ್ಡ ಇರಿಸಬಾರದೆಂದು ನೀವೇಕೆ ಬಯಸುತ್ತೀರಿ. ಇಸ್ಲಾಂ ಮತ್ತು ಮುಸ್ಲಿಂ ಸಂಸ್ಕೃತಿ ನನ್ನಲ್ಲಿರಬಾರದೆಂದು ನೀವೇಕೆ ಬಯಸುತ್ತೀರಿ,ʼʼಎಂದು ಅವರು ಕೇಳಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಮಾತುಗಳನ್ನು ಉಲ್ಲೇಖಿಸಿದ ಉವೈಸಿ, ಹಿಜಾಬ್‌ ಘನತೆ ಮತ್ತು ಖಾಸಗಿತನದ ವಿಚಾರ ಎಂದರು.

ಬಿಜೆಪಿ ಮತ್ತು ಆರೆಸ್ಸೆಸ್‌ ನಿರ್ಧಾರಗಳ ಬಗ್ಗೆ ಪರಿವೆಯಿಲ್ಲ, ಮುಸ್ಲಿಂ ಹುಡುಗಿಯರು ತಮ್ಮ ಆಯ್ಕೆಯಂತೆ ಹಿಜಾಬ್‌ ಧರಿಸುವರು ಎಂದು ಅವರು ಹೇಳಿದರು. ʻʻಭಾರತದ ಸಂವಿಧಾನ ಅದಕ್ಕೆ ಅನುಮತಿಸುತ್ತದೆ. ನೀವು ನಿಮಗಿಷ್ಟವಾದುದನ್ನು ಧರಿಸಿ, ನಾವು ನಮಗಿಷ್ಟವಾಗಿದ್ದನ್ನು ಧರಿಸುತ್ತೇವೆ,ʼʼ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News