ದಿಲ್ಲಿ ಅಬಕಾರಿ ನೀತಿ ಹಗರಣ: ರಾಷ್ಟ್ರ ರಾಜಧಾನಿಯ 25 ಸ್ಥಳಗಳಲ್ಲಿ ಈ.ಡಿ.ದಾಳಿ
ಹೊಸದಿಲ್ಲಿ,ಅ.14: ಈಗ ಹಿಂದೆಗೆದುಕೊಳ್ಳಲಾಗಿರುವ ಅಬಕಾರಿ ನೀತಿಯಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತನ್ನ ಅಕ್ರಮ ಹಣ ವರ್ಗಾವಣೆ ತನಿಖೆಯ ಅಂಗವಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಶುಕ್ರವಾರ ದಿಲ್ಲಿಯ 25 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.
ಮದ್ಯ ಮಾರಾಟಗಾರರು ಮತ್ತು ಮದ್ಯ ವಿತರಕರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಈ ದಾಳಿಗಳು ನಡೆದಿವೆ.
ಇದು ಪ್ರಕರಣಕ್ಕೆ ಸಂಬಂಧಿಸಿದಂತೆ ಈ.ಡಿ.ಯಿಂದ ಸೆ.6ರಿಂದೀಚಿಗೆ ನಾಲ್ಕನೇ ಸುತ್ತಿನ ದಾಳಿಯಾಗಿದೆ. ಅ.7ರಂದು ಈ.ಡಿ.ದಿಲ್ಲಿ,ಪಂಜಾಬ ಮತ್ತು ಹೈದರಾಬಾದ್ಗಳಲ್ಲಿಯ 35 ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿತ್ತು.
ಈ.ಡಿ.ಯ ಅಕ್ರಮ ಹಣ ವರ್ಗಾವಣೆ ಪ್ರಕರಣವು ಸಿಬಿಐ ಆಗಸ್ಟ್ ನಲ್ಲಿ ದಿಲ್ಲಿ ಸರಕಾರದ ಅಬಕಾರಿ ನೀತಿಯ ಕುರಿತು ನಡೆಸಿದ್ದ ವಿಚಾರಣೆಯನ್ನು ಆಧರಿಸಿದೆ. ನೂತನ ಅಬಕಾರಿ ನೀತಿಯಲ್ಲಿ ಅಕ್ರಮಗಳ ಆರೋಪದಲ್ಲಿ ಸಿಬಿಐ ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ ಸಿಸೋದಿಯಾ ಮತ್ತು ಇತರ 14 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಆ.30ರಂದು ಸಿಬಿಐ ಸಿಸೋಡಿಯಾ ಮತ್ತು ಇತರ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿಗಳನ್ನೂ ನಡೆಸಿತ್ತು.
ದಿಲ್ಲಿಯಲ್ಲಿ ನ.17ರಂದು ಜಾರಿಗೊಳಿಸಲಾಗಿದ್ದ ನೂತನ ನೀತಿಯಡಿ ಮುಕ್ತ ಬಿಡ್ಡಿಂಗ್ ಮೂಲಕ 849 ಮದ್ಯದಂಗಡಿಗಳ ಪರವಾನಿಗೆಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿತ್ತು. ಆದರೆ ಉಪರಾಜ್ಯಪಾಲ ವಿನಯಕುಮಾರ ಸಕ್ಸೇನಾ ಅವರು ಈ ಬಗ್ಗೆ ಸಿಬಿಐ ವಿಚಾರಣೆಗೆ ಶಿಫಾರಸು ಮಾಡಿದ ಬಳಿಕ ಜು.30ರಂದು ದಿಲ್ಲಿ ಸರಕಾರವು ನೂತನ ಅಬಕಾರಿ ನೀತಿಯನ್ನು ಹಿಂದೆಗೆದುಕೊಂಡಿತ್ತು.
ಸೆ.1ರಂದು ದಿಲ್ಲಿಯು ತನ್ನ ಹಳೆಯ ಅಬಕಾರಿ ನೀತಿಗೆ ಮರಳಿದ್ದು, ಇದರಡಿ ಸರಕಾರಿ ಸ್ವಾಮ್ಯದ ಮದ್ಯದಂಗಡಿಗಳು ಮಾತ್ರ ಕಾರ್ಯ ನಿರ್ವಹಿಸಲು ಅವಕಾಶವಿದೆ.