ಉಡುಪಿ: ಕೃಷಿಗೆ ಸಂಬಂಧಿಸಿದ ರಫ್ತುದಾರರ ಸಮಾವೇಶ ಮತ್ತು ಪ್ರದರ್ಶನ

Update: 2022-10-14 14:54 GMT

ಉಡುಪಿ, ಅ.14: ರಾಜ್ಯದ ರೈತರು ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ)ಗಳ ಮೂಲಕ ಉತ್ಪಾದಿಸುವ ವಿವಿಧ ಕೃಷಿ ಉತ್ಪನ್ನಗಳ ರಫ್ತಿಗೆ ವಿಶೇಷ ಉತ್ತೇಜನ ನೀಡಲು ಸಾಧ್ಯವಾಗುವಂತೆ ರಾಜ್ಯ ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ಘಟಕ (ಸ್ಪೆಷಲ್‌ಸೆಲ್)ವೊಂದನ್ನು ಪ್ರಾರಂಭಿಸುವಂತೆ ತಾವು ರಾಜ್ಯದ ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡುವುದಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ), ಲಘು ಉದ್ಯೋಗ ಭಾರತಿ ಕರ್ನಾಟಕ ಹಾಗೂ ಐಎಂಎಸ್ ಫೌಂಡೇಷನ್‌ಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯಲ್ಲಿ ಕರಾವಳಿ ಕರ್ನಾಟಕದ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು ಹೊಟೇಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಫ್ತುದಾರರ ಸಮಾವೇಶ ಹಾಗೂ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೈಗಾರಿಕಾ ಇಲಾಖೆ ಐಟಿ, ಬಿಟಿ ಹಾಗೂ ಇತರ ಕೈಗಾರಿಕಾ ಉತ್ಪನ್ನಗಳ ರಫ್ತಿಗೆ ಈಗ ಹೆಚ್ಚಿನ ಗಮನ ಹರಿಸುತಿದ್ದು, ಕೃಷಿ ಉತ್ಪನ್ನಗಳ ರಫ್ತಿಗೂ ಹೆಚ್ಚಿನ ಉತ್ತೇಜನ ಸಿಗಬೇಕಿದ್ದರೆ ಅದಕ್ಕಾಗಿ ಪ್ರತ್ಯೇಕ ಘಟಕವೊಂದನ್ನು ಪ್ರಾರಂಭಿಸಬೇಕಾದ ಅಗತ್ಯವಿದೆ. ಈ ಬಗ್ಗೆ ಈಗಾಗಲೇ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯೊಂದಿಗೆ ಮಾತನಾಡಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ಇದನ್ನು ತರುವುದಾಗಿ ಶೋಭಾ ತಿಳಿಸಿದರು.

ನಮಗೆ ಸ್ವಾತಂತ್ರ ದೊರೆತ ಪ್ರಾರಂಭದಲ್ಲಿ ಕೃಷಿಯ ಬದಲು ಕೈಗಾರಿಕೆಗೆ ಆದ್ಯತೆ ನೀಡಿದ್ದರಿಂದ, ಕೃಷಿ ಪ್ರದಾನ ದೇಶವಾದರೂ ಕೃಷಿಕರನ್ನು ಮರೆತು ಬಿಡಲಾಗಿತ್ತು. ಹೀಗಾಗಿ ಅನ್ನಕ್ಕಾಗಿ ಬೇರೆ ದೇಶಕ್ಕೆ ಕೈಯೊಡ್ಡಬೇಕಾದ ಅಗತ್ಯ ಬಂದಿತ್ತು. ಅಂದಿನ ಕಾಲದಲ್ಲಿ ಆರಂಭಿಸಿರುವ ಕೈಗಾರಿಕೆಗಳಲ್ಲಿ ಹೆಚ್ಚಿನವು ಇಂದು ಮುಚ್ಚಿದ್ದು, ಕೃಷಿ ಮಾತ್ರವೇ ಇಂದು ಉಳಿದುಕೊಂಡಿದೆ ಎಂದು ಶೋಭಾ ಹೇಳಿದರು.

ಈ ಭಾಗದಲ್ಲಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರೈತರ, ಹಾಲು ಉತ್ಪಾದಕರ ಹಾಗೂ ಮೀನುಗಾರರ ಅಗತ್ಯತೆಗಳನ್ನು ಅರಿತು ಅವರಿಗೆ ಸಹಾಯ ಮಾಡಲುಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತದೆ. ಇದಕ್ಕಾಗಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಬೇಕಾದ ಎಲ್ಲಾ ಸಹಾಯ ಮಾಡಲಾಗುವುದು ಎಂದು ಶೋಭಾ ಭರವಸೆ ನೀಡಿದರು.

ಕರಾವಳಿಯಲ್ಲಿ ಸಾಗರೋತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈಗಿರುವಂತೆ ಸಂಸ್ಕರಣೆಗಾಗಿ ಕೇರಳಕ್ಕೆ ತೆರಳಿ ಅಲ್ಲಿಂದ ಅವುಗಳನ್ನು ರಫ್ತು ಮಾಡುವ ಬದಲು, ಇಲ್ಲೇ ಸಂಸ್ಕರಣೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿ, ಇಲ್ಲಿಂದಲೇ ರಫ್ತು ಮಾಡಲು ಉತ್ತೇಜನ ನೀಡಲಾಗುವುದು. ಇದರಿಂದ ಎಲ್ಲಾ ಲಾಭವೂ ನಮ್ಮ ಮೀನುಗಾರ ಬಂಧುಗಳಿಗೆ ಸಿಗುವಂತಾಗುತ್ತದೆ ಎಂದರು.

ಭಾರತದಲ್ಲಿ ಬೆಳೆಯುವ ತರಕಾರಿ, ಹಣ್ಣು ಹಂಪಲು, ಧವಸಧಾನ್ಯಗಳಿಗೆ ವಿದೇಶಗಳಲ್ಲಿ ವಿಶೇಷ ಬೇಡಿಕೆ ಇದೆ. ಯಾವ್ಯಾವ ದೇಶಗಳಲ್ಲಿ ಏನೇನು ಉತ್ಪನ್ನಗಳಿಗೆ ಬೇಡಿಕೆ ಇದೆ ಎಂಬುದನ್ನು ಅರಿತುಕೊಂಡು ಅದಕ್ಕನುಗುಣವಾಗಿ ಆಹಾರ ಪದಾರ್ಥಗಳನ್ನು ಬೆಳೆದು ಜಾಗತಿಕ ಮಾರುಕಟ್ಟೆಗೆ ಪೂರೈಕೆ ಮಾಡಿ ರೈತರು ಹೆಚ್ಚಿನ ಲಾಭ ಪಡೆಯುವಂತೆ ಮಾಡಬಹುದು. ಇದರೊಂದಿಗೆ ರೈತರಿಗೆ ಪ್ಯಾಕೇಜಿಂಗ್, ಬ್ರಾಂಡಿಂಗ್ ಹಾಗೂ ಮಾರುಕಟ್ಟೆಯ ಕುರಿತಂತೆ ತರಬೇತಿಯನ್ನು ನೀಡಲು ಸಹ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯಗಳಿಗಾಗಿ ಒಂದು ಲಕ್ಷ ಕೋಟಿ ರೂ.ಗಳ ಫಂಡ್ ಇದೆ. ಇದರೊಂದಿಗೆ ರಾಷ್ಟ್ರೀಯ ಕೃಷಿ ಯೋಜನೆ, ಕೃಷಿ ವಿಕಾಸ ಯೋಜನೆಗಳು ರೈತರ ಸರ್ವತೋಮುಖ ಅಭಿವೃದ್ಧಿಗಾಗಿಯೇ ಇವೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಕರ್ನಾಟಕ ರಾಜ್ಯದಜಲ್ಲಿ 1139 ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಕಾರ್ಯನಿರ್ವಹಿಸುತ್ತಿವೆ. ಮಹಾರಾಷ್ಟ್ರದ ಬಳಿಕ ಅತಿಹೆಚ್ಚು ಎಫ್‌ಪಿಒ ಇರುವುದು ಕರ್ನಾಟಕದಲ್ಲೇ. ಇವುಗಳಲ್ಲಿ ಕೆಲವು ಸಂಸ್ಥೆಗಳು ವಾರ್ಷಿಕವಾಗಿ 25ರಿಂದ 30 ಕೋಟಿ ರೂ. ವ್ಯವಹಾರ ನಡೆಸುತ್ತಿವೆ. ಹೆಚ್ಚಿನ ಸಂಸ್ಥೆಗಳಲ್ಲಿ 2-3 ಕೋಟಿ ವ್ಯವಹಾರ ನಡೆಯುತ್ತಿದೆ. ಉತ್ಪನ್ನಗಳ ಮೌಲ್ಯವರ್ದನೆಗೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಎಪಿಇಡಿಎ ಅಧ್ಯಕ್ಷ ಡಾ.ಎಂ.ಅಂಗಮುತ್ತು, ನಬಾರ್ಡ್‌ನ ಬೆಂಗಳೂರು ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಟಿ.ರಮೇಶ್, ಕಪೆಕ್‌ನ ಎಂಡಿ ಎಂ.ಬಿ.ಪರ್ವೇಜ್ ಬಂಟನಾಳ್ ಅವರು ಮಾತನಾಡಿದರು. ಲಘು ಉದ್ಯೋಗ ಭಾರತಿಯ ಪ್ರಧಾನ ಕಾರ್ಯದರ್ಶಿ ಕೆ.ನಾರಾಯಣ ಪ್ರಸನ್ನ ಉಪಸ್ಥಿತರಿದ್ದರು.

ಲಘು ಉದ್ಯೋಗ ಭಾರತಿ ಕರ್ನಾಟಕ ಅಧ್ಯಕ್ಷ ಸಚಿನ್ ಬಿ.ಸಬ್ನಿಸ್ ಅತಿಥಿಗಳನ್ನು ಸ್ವಾಗತಿಸಿದರೆ, ಕೃಷಿ ಸಚಿವರ ಪ್ರಧಾನ ಸಲಹೆಗಾರ ಡಾ.ಎ.ಬಿ.ಪಾಟೀಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ವಿವಿಧ ಸರಕಾರಿ ಇಲಾಖೆಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಮುದಾಯ, ರಫ್ತುದಾರರು ಹಾಗೂ ಇತರರು ಸೇರಿ ರಾಜ್ಯದ ವಿವಿದೆಡೆಗಳಿಂದ ಬಂದ 250 ಮಂದಿ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು, ಕರಾವಳಿ ಕರ್ನಾಟಕ ಭಾಗದಲ್ಲಿ ರಫ್ತು ವ್ಯವಹಾರವನ್ನು ಪ್ರೋತ್ಸಾಹಿಸುವ ಕುರಿತು ಚರ್ಚೆ, ಸಂವಾದದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ 25ಕ್ಕೂ ಅಧಿಕ ಮಳಿಗೆಗಳು ವೈವಿದ್ಯಮಯ ಉತ್ಪನ್ನಗಳನ್ನು ಪ್ರದರ್ಶಿಸಿವೆ.

ಕುಚ್ಚಲಕ್ಕಿ ಖರೀದಿ ಕೇಂದ್ರ ಪ್ರಾರಂಭಕ್ಕೆ ಆಗ್ರಹ
ಕೇಂದ್ರ ಸರಕಾರವು ಈ ಬಾರಿಯೂ ಈ ಭಾಗದಲ್ಲಿ ಬೆಳೆದ ಕುಚ್ಚಲಕ್ಕಿಯನ್ನು ಖರೀದಿಸಿ, ಪಡಿತರ ವ್ಯವಸ್ಥೆ ಮೂಲಕ ವಿತರಣೆಗೆ ಅನುಮತಿ ನೀಡಿದೆ. ಕಳೆದ ಬಾರಿ ಭತ್ತ ಖರೀದಿಗೆ ಅನುಮತಿ ನೀಡುವಾಗ ತಡವಾದ ಕಾರಣ ನಿರೀಕ್ಷಿತ ಪ್ರಮಾಣದ ಕುಚ್ಚಲಕ್ಕಿ ಸಿಗದೇ ಯಶಸ್ಸು ಕಂಡಿರಲಿಲ್ಲ.

ಆದರೆ ಈ ಬಾರಿ ಕಟಾವಿಗೆ ಪೂರ್ವದಲ್ಲೇ ಕೇಂದ್ರ ಸರಕಾರ ಅನುಮತಿ ನೀಡಿದೆ. ಹೀಗಾಗಿ ರಾಜ್ಯ ಸರಕಾರ ಶೀಘ್ರದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಮುಂದಾಗಬೇಕು. ಇದರಿಂದ ಕರಾವಳಿ ಭಾಗದ ಜನರಿಗೆ ಪಡಿತರದಲ್ಲಿ ಕುಚ್ಚಲಕ್ಕಿ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವೆ ಶೋಭಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News