​ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ಟ್ರಸ್ಟ್‌ಗೆ ಯಕ್ಷಗಾನ ಕಲಾರಂಗದ ‘ಶ್ರೀವಿಶ್ವೇಶತೀರ್ಥ’ ಪ್ರಶಸ್ತಿ

Update: 2022-10-14 15:31 GMT

ಉಡುಪಿ: ಕಳೆದ ಆರು ತಲೆಮಾರುಗಳಿಂದ ಯಕ್ಷಗಾನ ಗೊಂಬೆಯಾಟವನ್ನು ನಡೆಸಿಕೊಂಡು ಬಂದಿರುವ ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಸ್ಮಾರಕ ಯಕ್ಷಗಾನ ಬೊಂಬೆಯಾಟ ಟ್ರಸ್ಟ್, ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಈ ಬಾರಿ ಉಡುಪಿಯ ಯಕ್ಷಗಾನ ಕಲಾರಂಗ ನೀಡುವ ಪ್ರತಿಷ್ಠಿತ ‘ಶ್ರೀವಿಶ್ವೇಶತೀರ್ಥ’ ಪ್ರಶಸ್ತಿಗೆ ಆಯ್ಕೆಯಾಗಿದೆ.

ಕೇವಲ ಕರಾವಳಿ ಪ್ರದೇಶದಲ್ಲಷ್ಟೆ ಅಲ್ಲದೆ ರಾಷ್ಟ್ರದಾದ್ಯಂತ ಹಾಗೂ ವಿದೇಶಗಳಲ್ಲೂ ಈ ಕಲೆಯನ್ನು ಪ್ರದರ್ಶಿಸಿ ಹೆಗ್ಗಳಿಕೆಗೆ ಸಂಸ್ಥೆ ಭಾಜನವಾಗಿದೆ. ಪರಂಪರೆಯ ಹಾಡುಗಾರಿಕೆ ಮತ್ತು ಅರ್ಥಗಾರಿಕೆಯನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನ ಗೊಂಬೆಯಾಟ ತಂಡ ಮಹತ್ತರ ಪಾತ್ರ ವಹಿಸಿದೆ.

ಪ್ರಸಕ್ತ ಭಾಸ್ಕರ ಕೊಗ್ಗ ಕಾಮತರು ಇದರ ನಿರ್ದೇಶಕರಾಗಿದ್ದು, ಉಪ್ಪಿನಕುದ್ರುನಲ್ಲಿ ಎಲ್ಲ ಮೂಲಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ರಂಗಮಂದಿರವನ್ನು ನಿರ್ಮಿಸಿ ಅದನ್ನು ಬೇರೆ ಬೇರೆ ಕಲಾಪ್ರಕಾರಗಳಿಗೂ ಉಚಿತ ವಾಗಿ ನೀಡುತ್ತಾ ಕಲಾ ಸಂವರ್ಧನೆಗೆ ಕಾರಣರಾಗಿದ್ದಾರೆ.

ಶ್ರೀವಿಶ್ವೇಶ ತೀರ್ಥ ಪ್ರಶಸ್ತಿಯು 50,000 ರೂ. ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ನ.13ರಂದು ಮಂಗಳೂರಿನ ಟೌನ್‌ಹಾಲ್‌ನಲ್ಲಿ ಜರಗಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News