​ಮೋದಿ ಅವರಿಗೆ ರಾಹುಲ್ ಗಾಂಧಿ ಎಂದೂ ಸರಿಸಾಟಿಯಲ್ಲ: ಶೋಭಾ ಕರಂದ್ಲಾಜೆ

Update: 2022-10-14 16:58 GMT
ಶೋಭಾ ಕರಂದ್ಲಾಜೆ  (File Photo)

ಉಡುಪಿ: ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮೂಲಕ ಅವರ ಬಾಡಿ ಫಿಟ್ನೆಸ್ ಹೇಗಿದೆ ಎಂಬುದು ಪ್ರದರ್ಶನಗೊಳ್ಳುತ್ತಿದೆ. ಆದರೆ ಈ ದೇಶದ ನೇತೃತ್ವ ವಹಿಸುವುದಕ್ಕೆ ಅವರಿಗೆ ಸಾಧ್ಯನಾ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಇಂದು ವ್ಯಂಗ್ಯವಾಗಿ ಚುಚ್ಚಿದ್ದಾರೆ.

ಒಂದು ಪಕ್ಷದ ನೇತೃತ್ವವನ್ನು ವಹಿಸಲು ಆಗದವರು ದೇಶದ ನೇತೃತ್ವ ವಹಿಸಲು ಸಾಧ್ಯವಿಲ್ಲ. ಇವತ್ತು ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾಗಿ ನಿಲ್ಲಬೇಕೆಂಬ ಅವರ ಕನಸು ಯಾವತ್ತೂ ನನಸಾಗುವುದಿಲ್ಲ. ಏಕೆಂದರೆ ಬಾಡಿಯಲ್ಲಿ ಅವರು ಫಿಟ್ನೆಸ್ ಇದ್ದಾರೆ, ಆದರೆ ಮೆಂಟಲಿ ಅವರು ಫಿಟ್ನೆಸ್ ಇದ್ದಾರಾ... ದೇಶವನ್ನು ಆಳಲು ಅವರು ಫಿಟ್ನೆಸ್ ಇದ್ದಾರಾ ಎಂಬುದು ದೇಶದಲ್ಲಿ ಎಲ್ಲರೂ ನೋಡಿದ್ದಾರೆ ಮತ್ತು ದೇಶದ ಜನ ತಿಳಿದುಕೊಂಡಿದ್ದಾರೆ ಎಂದು ಛೇಡಿಸಿದರು.

ಮಾಧ್ಯಮಗಳ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಹಿಜಾಬ್ ಪ್ರಕರಣ ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಆಗಬಹುದು. ಇಬ್ಬರು ನ್ಯಾಯಮೂರ್ತಿಗಳು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಸಂವಿಧಾನಿಕ ಪೀಠದಲ್ಲಿ ಹಿಜಾಬ್ ದೇಶಕ್ಕೆ ಬೇಕೋ ಬೇಡವೋ ಎಂದು ತೀರ್ಮಾನವಾಗುತ್ತದೆ. ಎಲ್ಲಾ ಮಹಿಳೆಯರು ಸ್ವತಂತ್ರವಾಗಿ ಬದುಕಲು ನ್ಯಾಯಾಲಯ ಅವಕಾಶ ಮಾಡಿಕೊಡಬಹುದು ಎಂದು ಶೋಭಾ ಅಭಿಪ್ರಾಯಪಟ್ಟರು.

ಮುಸ್ಲಿಂ ಹೆಣ್ಣು ಮಕ್ಕಳು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು ಎಂದ ಅವರು, ಮನೆಯವರು, ವಿಶೇಷವಾಗಿ ಗಂಡಸರು ಹಿಜಾಬ್‌ಗೆ ಒತ್ತಾಯ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಗೆ ಸ್ವಾತಂತ್ರ್ಯ ಸಿಗಬೇಕಾದರೆ ಹಿಜಾಬ್‌ಗೆ ಅವಕಾಶ ಕೊಡಬಾರದು. ನಮ್ಮ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಸಿಗುವುದು ಮುಖ್ಯ ಎಂದವರು ನುಡಿದರು.

ಗಂಡಸರು ಹಾಕುವ ತಾಳಕ್ಕೆ ಕುಣಿದು ಇಚ್ಛೆಗೆ ವಿರುದ್ಧವಾಗಿ ನಡೆದು ಕೊಳ್ಳಬೇಡಿ. ಪ್ರಗತಿಶೀಲ ದೇಶಗಳು ಧರ್ಮಗಳಲ್ಲಿ ಇರುವ ತಪ್ಪುಗಳನ್ನು ಗುರುತಿಸಿ ಸರಿ ಮಾಡಬೇಕು. ಇರಾನ್‌ನ ಮುಸ್ಲಿಂ ಮಹಿಳೆಯರು ಈ ವಿಷಯದಲ್ಲಿ ಭಾರತಕ್ಕೆ ಮಾರ್ಗದರ್ಶಕ ಆಗಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News