ನ್ಯಾಯಾಂಗದಲ್ಲಿ ವೈವಿಧ್ಯವನ್ನು ತರದ ನ್ಯಾ.ರಮಣ ಅವರ ಕೊಲಿಜಿಯಂ, ಹೆಚ್ಚಿನ ನ್ಯಾಯಾಧೀಶರು ಮೇಲ್ಜಾತಿಯ ಹಿಂದುಗಳು

Update: 2022-10-15 07:14 GMT
Photo: PTI

‌ಅನಿರೀಕ್ಷಿತ ಬೆಳವಣಿಗೆ ಯೊಂದರಲ್ಲಿ, ನ್ಯಾಯಾಧೀಶರನ್ನು ಆಯ್ಕೆ ಮಾಡುವ ಬಹುಚರ್ಚಿತ ಕೊಲಿಜಿಯಂ ವ್ಯವಸ್ಥೆಯ ಕುರಿತು ಖುದ್ದು ಸರ್ವೋಚ್ಚ ನ್ಯಾಯಾಲಯದ ಪೀಠವೇ ಪ್ರಶ್ನೆಯನ್ನೆತ್ತಿತ್ತು. ನ್ಯಾಯಾಂಗದ ಪೀಠದಲ್ಲಿ ವೈವಿಧ್ಯವನ್ನು ಖಚಿತಪಡಿಸಲು ಸಾಂಸ್ಥಿಕ ವ್ಯವಸ್ಥೆಯ ಅನುಪಸ್ಥಿತಿಯು ಒಂದು ಸಮಸ್ಯೆಯಾಗಿದೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ಇತ್ತೀಚಿಗೆ ಕಾನೂನು ಶೃಂಗಸಭೆಯಲ್ಲಿ ‘ಸಾಂಸ್ಕೃತಿಕ ವೈವಿಧ್ಯ ಮತ್ತು ಕಾನೂನು ವೃತ್ತಿ ’ಕುರಿತು ಮಾತನಾಡುತ್ತ ಹೇಳಿದ್ದರು. 

ಮುಖ್ಯ ನ್ಯಾಯಾಧೀಶರಾಗಿ ತನ್ನ ಅಧಿಕಾರಾವಧಿಯಲ್ಲಿ ನ್ಯಾ.ರಮಣ ಅವರು ನ್ಯಾಯಾಧೀಶರ ನೇಮಕಾತಿಗಳಲ್ಲಿ ವೈವಿಧ್ಯತೆಯ ಕೊರತೆಯನ್ನು ನೀಗಿಸಲು ಸಾಕಷ್ಟು ಅವಕಾಶವನ್ನು ಹೊಂದಿದ್ದರು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಅವರ ಅಧಿಕಾರಾವಧಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಸುಪ್ರೀಂ ಕೋರ್ಟ್ಗೆ 11 ನ್ಯಾಯಾಧೀಶರನ್ನು ನೇಮಕಗೊಳಿಸಿತ್ತು. ಇದೇ ವೇಳೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಾತಿಗೆ ಕೊಲಿಜಿಯಂ 242 ಶಿಫಾರಸುಗಳನ್ನು ಮಾಡಿದ್ದು,ಈ ಪೈಕಿ 240 ಜನರ ನೇಮಕಾತಿಯಾಗಿತ್ತು.

ನೇಮಕಾತಿಗಳಲ್ಲಿ ವೈವಿಧ್ಯವನ್ನು ಸಾಧಿಸಲು ಮುಖ್ಯ ನ್ಯಾಯಾಧೀಶ ರಮಣ ಅವರಿಗೆ ಸಾಧ್ಯವಾಗಿರಲಿಲ್ಲ ಎನ್ನುವುದನ್ನು ಅಂಕಿಅಂಶಗಳೇ ತೋರಿಸುತ್ತವೆ. ರಮಣ ನೇತೃತ್ವದ ಕೊಲಿಜಿಯಂ ನೇಮಕಾತಿ ಮಾಡಿದ್ದ 240 ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಪೈಕಿ 190 (ಶೇ.80) ಜನರು ಮೇಲ್ಜಾತಿಯ ಹಿಂದುಗಳಾಗಿದ್ದರೆ,32 (ಶೇ.13) ಜನರು ಒಬಿಸಿಗೆ,6 (ಶೇ.2.5) ಜನರು ಪರಿಶಿಷ್ಟ ಜಾತಿಗಳಿಗೆ,4 (ಶೇ.1.6) ಜನರು ಪರಿಶಿಷ್ಟ ವರ್ಗಗಳಿಗೆ ಮತ್ತು 8 (ಶೇ.3.3) ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೂವರು ಮತ್ತು ವಿವಿಧ ಉಚ್ಚ ನ್ಯಾಯಾಲಯಗಳಿಗೆ 43 ಮಹಿಳೆಯರು ನೇಮಕಗೊಂಡಿದ್ದರು. 

ನ್ಯಾ.ರಮಣ ಅವರು ಪೀಠದಲ್ಲಿ ಲಿಂಗ ವೈವಿಧ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದರೂ, ಸಾಮಾಜಿಕ ವೈವಿಧ್ಯ ಮತ್ತು ಜಾತಿಗಳಿಗೆ ಸಂಬಂಧಿಸಿದಂತೆ ಅದನ್ನು ಮಾಡುವಲ್ಲಿ ವಿಫಲರಾಗಿದ್ದರು. ಕೊಲಿಜಿಯಂ ವ್ಯವಸ್ಥೆ ಇತ್ತೀಚಿಗೆ ಕಠಿಣ ಸವಾಲುಗಳನ್ನು ಎದುರಿಸಿತ್ತು. ನ್ಯಾಯಾಧೀಶರ ನೇಮಕಾತಿಗೆ ಹೆಸರುಗಳನ್ನು ಪರಿಗಣಿಸಲು ಸೆ.30ರಂದು ಕರೆಯಲಾಗಿದ್ದ ಕೊಲಿಜಿಯಂ ಸಭೆಗೆ ಸದಸ್ಯರಲ್ಲೋರ್ವರಾದ ನ್ಯಾ.ವೈ.ವಿ.ಚಂದ್ರಚೂಡ ಅವರು ಹಾಜರಾಗಿರಲಿಲ್ಲ,ಹೀಗಾಗಿ ಸಭೆಯು ಕಲಾಪ ನಡೆಸದೆ ಬರ್ಕಾಸ್ತುಗೊಂಡಿತ್ತು. 

ತಾನು ಪ್ರಸ್ತಾಪಿಸಿರುವ ಹೆಸರುಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ನ್ಯಾ.ಲಲಿತ್ ಅವರು ಕೊಲಿಜಿಯಂ ಸದಸ್ಯರಿಗೆ ಪತ್ರಗಳನ್ನು ರವಾನಿಸಿದ್ದರು. ಪತ್ರದ ಮೂಲಕ ನ್ಯಾಯಾಧೀಶರನ್ನು ನೇಮಕಗೊಳಿಸುವ ಕಾರ್ಯವಿಧಾನಕ್ಕೆ ನ್ಯಾ.ಚಂದ್ರಚೂಡ್ ಮತ್ತು ಕೊಲಿಜಿಯಮ್ನ ಇನ್ನೋರ್ವ ಸದಸ್ಯ ನ್ಯಾ.ಎಸ್ .ಅಬ್ದುಲ್ ನಝೀರ್ ಅವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಸಭೆಗೆ ಮುನ್ನ ಕೇಂದ್ರ ಕಾನೂನು ಸಚಿವರು ಮುಂದಿನ ಮುಖ್ಯ ನ್ಯಾಯಾಧೀಶ ಹುದ್ದೆಗೆ ಹೆಸರನ್ನು ಶಿಫಾರಸು ಮಾಡುವಂತೆ ಸೂಚಿಸಿ ನ್ಯಾ.ಲಲಿತ್ ಅವರಿಗೆ ಪತ್ರವನ್ನು ಬರೆದಿದ್ದರು. ಹೀಗಾಗಿ ನಾಲ್ವರು ನ್ಯಾಯಾಧೀಶರ ನೇಮಕಾತಿಗಾಗಿ ನ್ಯಾ.ಲಲಿತ್ ಆರಂಭಿಸಿದ್ದ ಉಪಕ್ರಮ ಅಲ್ಲಿಗೇ ಸ್ಥಗಿತಗೊಂಡಿದೆ.

ಕೊಲಿಜಿಯಮ್ನ ಯಾವುದೇ ಇಬ್ಬರು ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯಕ್ಕೆ ಯಾವುದೇ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಬಹುದು ಅಥವಾ ಬುಡಮೇಲುಗೊಳಿಸಬಹುದು ಎನ್ನುವುದನ್ನು ಈ ಘಟನೆಯು ತೋರಿಸಿದೆ.

ಕೊಲಿಜಿಯಂ ವ್ಯವಸ್ಥೆ ಪರಿಪೂರ್ಣವಲ್ಲ ಎನ್ನುವುದು ಶ್ರುತಪಟ್ಟಿದೆ. ನ್ಯಾಯಾಧೀಶರ ನೇಮಕಾತಿಗಾಗಿ ಹೆಚ್ಚು ಉತ್ತಮ ವ್ಯವಸ್ಥೆಯೊಂದರ ಅಗತ್ಯವಿದೆ. ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗ ಇವೆರಡೂ ಪಾತ್ರವನ್ನು ಹೊಂದಿರುವಂತೆ ಸಮತೋಲನವನ್ನು ಕಂಡುಕೊಳ್ಳಬೇಕಿದೆ.

ನೂತನ ವ್ಯವಸ್ಥೆಯಲ್ಲಿ ನ್ಯಾಯಾಂಗ,ಕಾರ್ಯಾಂಗ ಮತ್ತು ಎಸ್ಸಿ/ಎಸ್ಟಿ/ಒಬಿಸಿ ಆಯೋಗಗಳಿಂದ ಸದಸ್ಯರೊಂದಿಗೆ ನೇಮಕಾತಿ ಆಯೋಗವನ್ನು ಸೃಷ್ಟಿಸಬೇಕು. ನ್ಯಾಯಾಂಗವನ್ನು ಹೆಚ್ಚು ಸದೃಢವಾಗಿಸಲು,ಅದು ಎಲ್ಲರನ್ನೂ ಒಳಗೊಂಡಿರುವಂತಾಗಲು ಮತ್ತು ಭಾರತವನ್ನು ಪ್ರತಿಬಿಂಬಿಸುವಂತಾಗಲು ನ್ಯಾಯಾಧೀಶರ ಆಯ್ಕೆಗಾಗಿ ಪಾರದರ್ಶಕ ಮತ್ತು ಸಮತೋಲಿತ ವಿಧಾನವನ್ನು ರೂಪಿಸಬೇಕು. ಈ ವಿಷಯದಲ್ಲಿ ನರೇಂದ್ರ ಮೋದಿ ಸರಕಾರವು ಸಂಸತ್ತಿನಲ್ಲಿ ಶಾಸಕಾಂಗ ಪ್ರಸ್ತಾವವೊಂದನ್ನು ತರಬೇಕಾದ ಅಗತ್ಯವಿದೆ.

ಕೃಪೆ: theprint.in

Writer - ದಿಲೀಪ್ ಮಂಡಲ್ (theprint.in)

contributor

Editor - ದಿಲೀಪ್ ಮಂಡಲ್ (theprint.in)

contributor

Similar News