ಪ್ರತಿಷ್ಠಿತ ಬೂಸಾನ್‌ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಪ್ರಶಸ್ತಿ ಬಾಚಿಕೊಂಡ ಕನ್ನಡ ಸಿನಿಮಾ 'ಶಿವಮ್ಮ'

Update: 2022-10-15 09:39 GMT

Photo: Twitter/@BangaloreTimes1

ಸಿಯೋಲ್: ಬಡ ಮಹಿಳೆಯ ಕುರಿತಾದ ಭಾರತೀಯ ಚಲನಚಿತ್ರ ʼಶಿವಮ್ಮʼ(Shivamma) ಈ ವರ್ಷದ ಪ್ರತಿಷ್ಠಿತ ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Busan International Film Festival) ಪ್ರಮುಖ ಬಹುಮಾನವನ್ನು ಗೆದ್ದಿದೆ ಎಂದು ಸಂಘಟಕರು ಶುಕ್ರವಾರ ಘೋಷಿಸಿದ್ದಾರೆ.

ಏಷ್ಯಾದ ಅತಿದೊಡ್ಡ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಒಟ್ಟು 10 ಚಲನಚಿತ್ರಗಳು ಕೊನೆಯ ಹಂತದಲ್ಲಿ ಆಯ್ಕೆಯಾಗಿದ್ದವು, ಇದೀಗ ಇಬ್ಬರು ವಿಜೇತರನ್ನು $30,000 ನಗದು ಮೊತ್ತವಿರುವ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

ಮೊದಲ ಅಥವಾ ಎರಡನೇ ಬಾರಿಗೆ ತಮ್ಮ ಚಿತ್ರಗಳನ್ನು ತಯಾರಿಸುವ ನಿರ್ದೇಶಕರಿಗಾಗಿಯೇ ಈ ಪ್ರಶಸ್ತಿಯನ್ನು ಕಾಯ್ದಿರಿಸಲಾಗಿದೆ. ಶಿವಮ್ಮ ಸಿನಿಮಾವನ್ನು ಇತ್ತೀಚೆಗೆ 'ಕಾಂತಾರ' ಚಿತ್ರದ ಮೂಲಕ ಸುದ್ದಿಯಾಗುತ್ತಿರುವ ರಿಷಭ್‌ ಶೆಟ್ಟಿ ನಿರ್ಮಿಸಿದ್ದಾರೆ. ಚಿತ್ರವನ್ನು ಜೈಶಂಕರ್‌ ಆರ್ಯರ್‌ ನಿರ್ದೇಶಿಸಿದ್ದಾರೆ. ವಿಚಿತ್ರ ಘಟನೆಗಳ ಸರಣಿಯನ್ನು ಎದುರಿಸುವ ಯುವ ಬಡಗಿಯ ಬಗೆಗಿನ ದಕ್ಷಿಣ ಕೊರಿಯಾದ ಚಲನಚಿತ್ರವೂ ಇದರೊಂದಿಗೆ ಪ್ರಶಸ್ತಿಗೆ ಭಾಜನವಾಗಿದೆ.

ಭಾರತೀಯ ಚಲನಚಿತ್ರ 'ಶಿವಮ್ಮ' ನಿರ್ದೇಶಕ ಜೈಶಂಕರ್ ಆರ್ಯರ್ ಅವರ ಚೊಚ್ಚಲ ಚಿತ್ರವಾಗಿದ್ದು, ತೀರ್ಪುಗಾರರಿಂದ ಶ್ಲಾಘಿಸಲ್ಪಟ್ಟಿದೆ. "ನಮ್ಮ ಪ್ರಸ್ತುತ ಕಾಲಕ್ಕೆ ಹೊಂದಿಕೆಯಾಗುವ ಈ ಕಥೆಯನ್ನು ಪೂರ್ಣಗೊಳಿಸಿದ ನಿರ್ದೇಶಕರನ್ನು ಅವರ ಸ್ವಂತಿಕೆ ಮತ್ತು ಅವರು ತೋರಿರುವ ತೀವ್ರತೆಗಾಗಿ ನಾವು ಪ್ರಶಂಸಿಸುತ್ತೇವೆ" ಎಂದು ತೀರ್ಪುಗಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮತ್ತೊಂದು ವಿಜೇತ, 'ಎ ವೈಲ್ಡ್ ರೂಮರ್' ಚಿತ್ರವು, ದಕ್ಷಿಣ ಕೊರಿಯಾದ ಚಲನಚಿತ್ರ ನಿರ್ಮಾಪಕ ಲೀ ಜಿಯೋಂಗ್-ಹಾಂಗ್ ಅವರ ಮೊದಲ ಚಲನಚಿತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News