ಪಾಕಿಸ್ತಾನದ ಆಸ್ಪತ್ರೆಯ ಛಾವಣಿಯಲ್ಲಿ ನೂರಾರು ಕೊಳೆತ ಮೃತದೇಹಗಳು: ವರದಿ

Update: 2022-10-15 12:44 GMT
Photo: Tribuneindia

ಮುಲ್ತಾನ್: ಪಾಕಿಸ್ತಾನದ ಮುಲ್ತಾನ್ ನಗರದ ಆಸ್ಪತ್ರೆಯೊಂದರ ಶವಾಗಾರದ ಛಾವಣಿಯಲ್ಲಿ ನಿರ್ಮಿಸಲಾದ ಕೊಠಡಿಯೊಂದರಲ್ಲಿ ಕನಿಷ್ಠ 200 ಕೊಳೆತು ಹೋದ ಮೃತದೇಹಗಳು ಶುಕ್ರವಾರ ಪತ್ತೆಯಾಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸುದ್ದಿ ಹರಿದಾಡಿದ ನಂತರ ನಿಶ್ತಾರ್ ಆಸ್ಪತ್ರೆಯಲ್ಲಿನ ಈ ವಿದ್ಯಮಾನ ಕುರಿತಂತೆ ಸರಕಾರ ತನಿಖೆಗೆ ನಿರ್ಧರಿಸಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುದ್ದಿಯ ಪ್ರಕಾರ ಆಸ್ಪತ್ರೆಯ ಛಾವಣಿಯಂದ ನೂರಾರು ಮಾನವ ದೇಹ ಭಾಗಗಳು ಪತ್ತೆಯಾಗಿವೆ.

ಈ ಸುದ್ದಿಯನ್ನು ಸರಕಾರಿ ಅಧಿಕಾರಿಗಳು ಇನ್ನೂ ದೃಢೀಕರಿಸಿಲ್ಲ ಅಥವಾ ನಿರಾಕರಿಸಿಲ್ಲ.

ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯ ಸಲಹೆಗಾರ ತಾರಿಖ್ ಝಮಾನ್ ಗುಜ್ಜರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭ ಒಬ್ಬ ವ್ಯಕ್ತಿ ಅವರಿಗೆ ಈ ಕುರಿತು ಮಾಹಿತಿ ನೀಡಿದ ನಂತರ ಅವರು ಛಾವಣಿಯ ಕೊಠಡಿಗೆ ಹೋದಾಗ ಅದರ ಬಾಗಿಲು ತೆರೆಯಲು ಸಿಬ್ಬಂದಿ ನಿರಾಕರಿಸಿದ್ದರು. ಕೊನೆಗೆ ದೂರು ನೀಡುವ ಬೆದರಿಕೆ ಹಾಕಿದ ನಂತರ ಬಾಗಿಲು ತೆರೆದಾಗ ಅಲ್ಲಿ ಸುಮಾರು 200 ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. "ಎಲ್ಲಾ ಕೊಳೆತ ಮೃತದೇಹಗಳು ನಗ್ನವಾಗಿದ್ದವು, ಮಹಿಳೆಯರ ಕಳೇಬರಗಳನ್ನೂ ಮುಚ್ಚಲಾಗಿರಲಿಲ್ಲ" ಎಂದು ಗುಜ್ಜರ್ ಹೇಳಿದ್ದಾರೆ.

ಇವುಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಗಳಿಗೆ ಬಳಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದರೆನ್ನಲಾಗಿದೆ. ಘಟನೆ ಬಗ್ಗೆ ತಿಳಿದು ಪಂಜಾಬ್ ಸೀಎಂ ಪರ್ವೇಝ್ ಎಲಾಹಿ ಸಂಬಂಧಿತ ಇಲಾಖೆಯಿಂದ ವರದಿ ಕೇಳಿದ್ದಾರೆ. ತನಿಖೆಗೆ ಆರು ಮಂದಿಯ ಸಮಿತಿ ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News