ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿಗೆ ಲಕ್ಷಾಂತರ ರೂ. ವಂಚನೆ
ಉಡುಪಿ, ಅ.15: ನಿವೃತ್ತ ಬ್ಯಾಂಕ್ ಉದ್ಯೋಗಿಯ ಮನೆಯಲ್ಲಿ ಉಳಿದುಕೊಂಡಿದ್ದ ವಾರ್ಡ್ ಬಾಯ್ ಅವರ ಎಟಿಎಂನಿಂದ ಲಕ್ಷಾಂತರ ರೂ. ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತಿ ಉದ್ಯೋಗಿ ಬನ್ನಂಜೆಯ ಬಾಲಕೃಷ್ಣ ನಾಯಕ್ (79) ಎಂಬವರು ಪತ್ನಿಯ ಮರಣದ ಬಳಿಕ ಮನೆಯಲ್ಲಿ ಒಬ್ಬರೇ ವಾಸ ಮಾಡಿಕೊಂಡಿದ್ದರು. ಈ ಕಾರಣದಿಂದ ಬಾಲಕೃಷ್ಣ ನಾಯಕ್, ಸರಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಹಾವೇರಿ ಜಿಲ್ಲೆಯ ರಮೇಶ್ ಮತ್ತು ಆತನ ಪತ್ನಿಗೆ ಮನೆಯಲ್ಲಿ ಉಚಿತ ರೂಮ್ ನೀಡಿ ವಾಸಕ್ಕೆ ವ್ಯವಸ್ಥೆ ಮಾಡಿದ್ದರು.
ಜು.4ರಿಂದ ಆ.10ರ ಮಧ್ಯಾವಧಿಯಲ್ಲಿ ರಮೇಶ್, ಬಾಲಕೃಷ್ಣ ನಾಯಕ್ ಅವರ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಒಟಿಪಿ ಬಳಸಿಕೊಂಡು ಬೇರೆ ಬೇರೆ ದಿನಗಳಲ್ಲಿ ವಿವಿಧ ಎಟಿಎಂಗಳಿಂದ ಒಟ್ಟು 9,75,500 ರೂ. ಡ್ರಾ ಮಾಡಿ ವಂಚನೆ ಮಾಡಿದ್ದಾನೆಂದು ದೂರಲಾಗಿದೆ.
ಈ ನಡುವೆ ಮನೆಯಲ್ಲಿ 2 ಚಿನ್ನದ ಉಂಗುರಗಳು ಕಾಣೆಯಾಗಿದ್ದು, ಇವುಗಳನ್ನೂ ಆತನೆ ತೆಗೆದುಕೊಂಡು ಹೋಗಿ ರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡಲಾಗಿದೆ.