ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ: AIMIM ಮುಖಂಡನ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ,ಅ.16: ಎಐಎಂಐಎಂ ಉತ್ತರ ಪ್ರದೇಶ ಮುಖ್ಯಸ್ಥ ಶೌಕತ್ ಅಲಿ ಅವರು ಶನಿವಾರ ಸಂಭಲ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ,ಮುಸ್ಲಿಮರನ್ನು ಬೆದರಿಸುವವರು ಓರ್ವ ಮಹಿಳೆಯನ್ನು ಮದುವೆಯಾಗಿರುತ್ತಾರೆ,ಆದರೆ ಹಲವಾರು ಉಪಪತ್ನಿಯರನ್ನು ಹೊಂದಿರುತ್ತಾರೆ ಮತ್ತು ಅಕ್ರಮ ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂದು ಹೇಳುವ ಮೂಲಕ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಉ.ಪ್ರ.ಪೊಲೀಸರು ಅಲಿ ವಿರುದ್ಧ ಕೋಮು ಸೌಹಾರ್ದವನ್ನು ಕದಡಿದ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅವರ ಭಾಷಣದ ವೀಡಿಯೊ ಈಗ ವೈರಲ್ ಆಗಿದ್ದು,ವಿವಿಧ ವರ್ಗಗಳಿಂದ ಆಕ್ರೋಶ ವ್ಯಕ್ತವಾಗಿದೆ.
‘ಬಿಜೆಪಿ ತನ್ನ ನೆಲೆಯನ್ನು ಕಳೆದುಕೊಳ್ಳಲು ಆರಂಭಿಸಿದಾಗ ಅವರು ಮುಸ್ಲಿಮರ ಹಿಂದೆ ಬೀಳುತ್ತಾರೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ ಎಂದು ಅವರು ಹೇಳುತ್ತಾರೆ. ಕೆಲವೊಮ್ಮೆ ಅವರು ನಾವು ಎರಡು ಮದುವೆಯಾಗುತ್ತೇವೆ ಎಂದು ಹೇಳುತ್ತಾರೆ. ನಾವು ಎರಡು ಮದುವೆಯಾಗುತ್ತೇವೆ ಎನ್ನುವುದು ನಿಜ,ಆದರೆ ಇಬ್ಬರೂ ಪತ್ನಿಯರನ್ನು ನಾವು ಗೌರವಿಸುತ್ತೇವೆ. ಆದರೆ ನೀವು ಓರ್ವಳನ್ನು ಮದುವೆಯಾಗುತ್ತೀರಿ ಮತ್ತು ಅನೇಕ ಉಪಪತ್ನಿಯರನ್ನು ಹೊಂದಿರುತ್ತೀರಿ ಮತ್ತು ಇದು ಯಾರಿಗೂ ಗೊತ್ತಾಗುವುದಿಲ್ಲ. ಅವರಲ್ಲಿ ಯಾರನ್ನೂ ನೀವು ಗೌರವಿಸುವುದಿಲ್ಲ ’ಎಂದು ಅಲಿ ವೀಡಿಯೊದಲ್ಲಿ ಹೇಳಿದ್ದಾರೆ.
ಅಲಿ ತನ್ನ ಭಾಷಣದಲ್ಲಿ ಬಳಸಿದ್ದ ‘ನೀವು’ಎಂಬ ಪದ ಹಿಂದುಗಳನ್ನು ಉದ್ದೇಶಿಸಿತ್ತು ಎನ್ನುವುದು ಸ್ಪಷ್ಟವಿದ್ದರೂ,ಹಿಂದುಗಳು ಸೇರಿದಂತೆ ಯಾವುದೇ ಸಮುದಾಯವನ್ನು ತಾನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದೇನೆ ಎನ್ನುವುದನ್ನು ಅವರು ನಿರಾಕರಿಸಿದ್ದಾರೆ.
‘ನಾವು ಇಬ್ಬರು ಮಹಿಳೆಯರನ್ನು ಮದುವೆಯಾದರೂ ಅವರಿಗೆ ಸಮಾನ ಗೌರವವನ್ನು ನೀಡುತ್ತೇವೆ. ಕೆಲವರು ಒಂದು ಮದುವೆ ಮಾಡಿಕೊಳ್ಳುತ್ತಾರೆ,ಆದರೆ ಹೊರಗೆ ಹಲವು ಉಪಪತ್ನಿಯರಿರುತ್ತಾರೆ ಮತ್ತು ಇದನ್ನು ಸಮಾಜದಿಂದ ಮುಚ್ಚಿಡುತ್ತಾರೆ. ನಾನು ಕೇವಲ ಇಂತಹ ಜನರ ಬಗ್ಗೆ ಮಾತನಾಡಿದ್ದೆ. ನಾನು‘ಹಿಂದು ’ ಎಂದು ಉಲ್ಲೇಖಿಸಿರಲಿಲ್ಲ. ಯಾವುದೇ ಸಮುದಾಯದ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ ’ಎಂದು ತನ್ನ ಭಾಷಣವು ವಿವಾದವನ್ನು ಸೃಷ್ಟಿಸಿದ ಬಳಿಕ ಅಲಿ ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.
ಶನಿವಾರದ ತನ್ನ ಭಾಷಣದಲ್ಲಿ ಮುಘಲ ಚಕ್ರವರ್ತಿ ಅಕ್ಬರ್ ರಜಪೂತ ರಾಜಕುಮಾರಿ ಜೋಧಾಬಾಯಿಯನ್ನು ಮದುವೆಯಾಗಿದ್ದನ್ನು ಪ್ರಸ್ತಾಪಿಸಿದ್ದ ಅಲಿ,‘ನಾವು ನಮ್ಮಾಂದಿಗೆ ನಿಮ್ಮನ್ನೂ ಉದ್ಧಾರ ಮಾಡಿದ್ದೇವೆ,ಆದರೆ ಈಗ ನೀವು ನಮಗೆ ಬೆದರಿಕೆ ಒಡ್ಡುತ್ತಿದ್ದೀರಿ ’ ಎಂದೂ ಹೇಳಿದ್ದರು. ಅಲಿ ಹಿಂದುಗಳನ್ನು ಮುಘಲ್ ಚಕ್ರವರ್ತಿಗಳ ಎದುರು ತಲೆ ಬಗ್ಗಿಸುತ್ತಿದ್ದ ‘ಹುಳಗಳು ’ಎಂದೂ ಬಣ್ಣಿಸಿದ್ದರು.