144 ಕೋ.ರೂ.ಗಳ ನಷ್ಟವನ್ನುಂಟು ಮಾಡಿದ್ದ ಪ್ರಮುಖ PSU ಮುಖ್ಯಸ್ಥರ ವಿರುದ್ಧದ ಎಫ್ಐಆರ್ ಕಡೆಗಣಿಸಿದ ರೈಲ್ವೆ ಸಚಿವಾಲಯ ‌

Update: 2022-10-16 15:16 GMT
PHOTO: Twitter & PTI

ಹೊಸದಿಲ್ಲಿ,ಅ.16: ರೈಲ್ವೆ ಸಚಿವಾಲಯವು ಅಕ್ಟೋಬರ್ 2020ರಲ್ಲಿ ತನ್ನ ಪ್ರಮುಖ ಸಾರ್ವಜನಿಕ ಕೇತ್ರದ ಘಟಕ (ಪಿಎಸ್‌ಯು) ಗಳಲ್ಲೊಂದಾಗಿರುವ ಭಾರತೀಯ ರೈಲ್ವೆ ಹಣಕಾಸು ನಿಗಮ (ಐಆರ್‌ಎಫ್‌ಸಿ)ದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿರುವ ಅಮಿತಾಭ್ ಬ್ಯಾನರ್ಜಿಯವರು ಪೂರ್ಣಾವಧಿಗೆ ಹುದ್ದೆಯಲ್ಲಿ ಮುಂದುವರಿಯಲು ಅನುಮತಿಯನ್ನು ನೀಡಿತ್ತು. ಆದರೆ ಹಾಗೆ ಮಾಡುವಾಗ ಬ್ಯಾನರ್ಜಿ ಹಿಂದೆ ಕೆಲಸ ಮಾಡಿದ್ದ ಇನ್ನೊಂದು ಪಿಎಸ್‌ಯುನಲ್ಲಿಯ ಬಹುಕೋಟಿ ರೂ.ಗಳ ಹಣಕಾಸು ಅವ್ಯವಹಾರಗಳ ಪ್ರಕರಣದ ಎಫ್‌ಐಆರ್‌ನಲ್ಲಿ ಸಿಬಿಐ ಅವರನ್ನು ಹೆಸರಿಸಿತ್ತು ಎನ್ನುವುದನ್ನು ಕಡೆಗಣಿಸಿತ್ತು ಎನ್ನುವುದು ಬೆಳಕಿಗೆ ಬಂದಿದೆ.

ಸಚಿವಾಲಯದ ಈ ಕ್ರಮವು ಭ್ರಷ್ಟಾಚಾರದ ಆರೋಪಗಳಿಗೆ ಶೂನ್ಯ ಅಸಹಿಷ್ಣುತೆಯ ಅದರ ಧೋರಣೆಗೆ ವಿರುದ್ಧವಾಗಿರುವಂತಿದೆ. ಬ್ಯಾನರ್ಜಿಯವರ ಪೂರ್ವಾಧಿಕಾರಿ ಎಸ್.ಕೆ.ಪಟ್ಟನಾಯಕ್ ಅವರು 2018ರಲ್ಲಿ ತನ್ನ ಒಂದು ವರ್ಷದ ಪ್ರೊಬೇಷನರಿ ಅವಧಿಯಲ್ಲಿ ಯಶಸ್ವಿಯಾಗಿರಲಿಲ್ಲ. ಇದೇ ವೇಳೆ ನ್ಯಾಷನಲ್ ಹೈಸ್ಪೀಡ್ ರೇಲ್ ಕಾರ್ಪೊರೇಷನ್‌ನ ಆಡಳಿತ ನಿರ್ದೇಶಕರಾಗಿದ್ದ ಸತೀಶ ಅಗ್ನಿಹೋತ್ರಿಯವರನ್ನು ಅವರು ಇನ್ನೊಂದು ಪಿಎಸ್‌ಯು ರೇಲ್ ವಿಕಾಸ ನಿಗಮ ಲಿ.ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಈ ವರ್ಷದ ಪೂರ್ವಾರ್ಧದಲ್ಲಿ ಸಚಿವಾಲಯವು ವಜಾಗೊಳಿಸಿತ್ತು.

ನೇಮಕಾತಿಗಳ ಕುರಿತ ಸಂಪುಟ ಸಮಿತಿಯು ಅಕ್ಟೋಬರ್ 2019ರಲ್ಲಿ ಬ್ಯಾನರ್ಜಿಯವರ ನೇಮಕಕ್ಕೆ ಅನುಮೋದನೆ ನೀಡಿತ್ತು. ವಾಸ್ತವದಲ್ಲಿ ಅವರು ಒಂದು ವರ್ಷದ ಕಡ್ಡಾಯ ಪ್ರೊಬೇಷನರಿ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಿತ್ತು ಮತ್ತು ಎಲ್ಲ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದ ಬಳಿಕವೇ ಅವರ ನೇಮಕಾತಿಯು ದೃಢಪಡಬೇಕಿತ್ತು.ಕೇಂದ್ರ ಜಾಗ್ರತ ಆಯೋಗದ ಮಾರ್ಗಸೂಚಿಯಂತೆ ಬ್ಯಾನರ್ಜಿಯವರ ಪ್ರೊಬೇಷನರಿ ಅವಧಿಯಲ್ಲಿ ಅವರ ವಿರುದ್ಧದ ಯಾವುದೇ ಭ್ರಷ್ಟಾಚಾರದ ಆರೋಪಗಳನ್ನು ರೈಲ್ವೆ ಮಂಡಳಿಯ ಜಾಗ್ರತ ನಿರ್ದೇಶನಾಲಯವು ಪರಿಶೀಲಿಸಬೇಕಿತ್ತು,ಜೊತೆಗೆ ಕಳೆದ 10 ವರ್ಷಗಳಲ್ಲಿ ಅವರ ಪ್ರಾಮಾಣಿಕತೆಯನ್ನೂ ಒರೆಗೆ ಹಚ್ಚಬೇಕಿತ್ತು.

thewire.in 2020 ಅಕ್ಟೋಬರ್‌ನಲ್ಲಿ ಬ್ಯಾನರ್ಜಿಯವರ ಪ್ರೊಬೇಷನರಿ ಅವಧಿಯ ಅಂತ್ಯದಲ್ಲಿ ಜಾಗ್ರತ ನಿರ್ದೇಶನಾಲಯವು ಅವರ ಕುರಿತು ಧನಾತ್ಮಕ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿತ್ತು. ಆದರೆ ಹಾಗೆ ಮಾಡುವಾಗ ಅದು ಶಿಲ್ಲಾಂಗ್‌ನ ಭಾರೀ ಕೈಗಾರಿಕೆಗಳ ಸಚಿವಾಲಯದ ಅಧೀನದ ಹಿಂದುಸ್ಥಾನ ಪೇಪರ್ ಮಿಲ್ ಕಾರ್ಪೊರೇಷನ್ ಲಿ.(ಎಚ್‌ಪಿಸಿಎಲ್) ನಲ್ಲಿಯ ಭ್ರಷ್ಟಾಚಾರ ಪ್ರಕರಣದಲ್ಲಿ ಬ್ಯಾನರ್ಜಿ ಮತ್ತು ಇತರರನ್ನು ಹೆಸರಿಸಿ ಸಿಬಿಐ 2020 ಮಾರ್ಚ್‌ನಲ್ಲಿ ಸಲ್ಲಿಸಿದ್ದ ಎಫ್‌ಐಆರ್‌ನ್ನು ಅದು ಕಡೆಗಣಿಸಿತ್ತು ಎನ್ನುವುದನ್ನು ತಾನು ಪರಿಶೀಲಿಸಿದ ಅಧಿಕೃತ ದಾಖಲೆಗಳು ಬೆಟ್ಟು ಮಾಡಿವೆ ಎಂದು ಸುದ್ದಿ ಜಾಲತಾಣ ತನ್ನ ವಿಶೇಷ ವರದಿಯಲ್ಲಿ ಬಹಿರಂಗಗೊಳಿಸಿದೆ. 2011-13ರ ನಡುವೆ ಎಚ್‌ಪಿಸಿಎಲ್‌ನಲ್ಲಿ ಹಣಕಾಸು ನಿರ್ದೇಶಕರಾಗಿದ್ದ ಅವಧಿಯಲ್ಲಿ ಬ್ಯಾನರ್ಜಿ ಕೇಂದ್ರ ಸರಕಾರಕ್ಕೆ ಕನಿಷ್ಠ 144 ಕೋ.ರೂ.ಗಳ ನಷ್ಟಕ್ಕೆ ಉತ್ತೇಜಿಸಿದ್ದರು ಎಂದು ಸಿಬಿಐ ಆರೋಪಿಸಿತ್ತು.

ಭಾರೀ ಕೈಗಾರಿಕೆಗಳ ಸಚಿವಾಲಯದ ದೂರಿನ ಮೇರೆಗೆ ಸಿಬಿಐನ ಶಿಲ್ಲಾಂಗ್ ಶಾಖೆಯ ಮುಖ್ಯಸ್ಥ ವಿವೇಕ ದತ್ತಾ ಅವರು 2020,ಮಾ.4ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.ಎಫ್‌ಐಆರ್‌ನಲ್ಲಿ ಪ್ರಕರಣದ ಮೂರನೇ ಆರೋಪಿಯನ್ನಾಗಿ ಬ್ಯಾನರ್ಜಿಯವರನ್ನು ಹೆಸರಿಸಲಾಗಿತ್ತು. ಎಚ್‌ಪಿಸಿಲ್‌ನ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ವಿ.ಎನ್ ರಾವ್ ಮತ್ತು ಮಾಜಿ ನಿರ್ದೇಶಕ (ಕಾರ್ಯಾಚರಣೆಗಳು) ಎಸ್.ಎನ್.ಭಟ್ಟಾಚಾರ್ಯ ಅವರು ಮೊದಲ ಇಬ್ಬರು ಆರೋಪಿಗಳಾಗಿದ್ದರು.

ಭಾರೀ ನಷ್ಟದಿಂದಾಗಿ ಎಚ್‌ಪಿಸಿಎಲ್ ಕೆಲವು ವರ್ಷಗಳ ಹಿಂದೆ ಮುಚ್ಚುಗಡೆಯಾಗಿದೆ.ಎಚ್‌ಪಿಸಿಎಲ್ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಭಾರೀ ಕೈಗಾರಿಕೆಗಳ ಸಚಿವಾಲಯದ ಆಗಿನ ಜಂಟಿ ಕಾರ್ಯದರ್ಶಿ ಭಾಸ್ಕರ ಜ್ಯೋತಿ ಮಹಂತ ಅವರು 2017,ಫೆ.22ರಂದು ಸಿಬಿಐಗೆ ಪತ್ರ ಬರೆದಿದ್ದರು. ಆದರೆ ಬ್ಯಾನರ್ಜಿ 2013 ಅಕ್ಟೋಬರ್‌ನಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದರು ಮತ್ತು ಅವರನ್ನು ಕೊಂಕಣ ರೈಲ್ವೆಯ ಹಣಕಾಸು ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿತ್ತು. 2019 ಅಕ್ಟೋಬರ್‌ನಲ್ಲಿ ಅವರು ಐಆರ್‌ಎಫ್‌ಸಿಗೆ ಸೇರ್ಪಡೆಗೊಂಡಿದ್ದರು.

ಬ್ಯಾನರ್ಜಿಯವರ ಪ್ರೊಬೇಷನರಿ ಅವಧಿ ಅಂತ್ಯಗೊಳ್ಳುವ ಏಳು ತಿಂಗಳು ಮೊದಲೇ ಸಿಬಿಐ ಅವರ ವಿರುದ್ಧ ಎಫ್‌ಐಆರ್‌ನ್ನು ದಾಖಲಿಸಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕಿದೆ.thewire.in ಹಣಕಾಸು ಅವ್ಯವಹಾರಗಳಿಗಾಗಿ ಬ್ಯಾನರ್ಜಿ ವಿರುದ್ಧ ಸಿಬಿಐ ವಿಚಾರಣೆ ಬಾಕಿಯಿದ್ದರೂ ್ನ ಐಆರ್‌ಎಫ್‌ಸಿಯ ಸಿಎಂಡಿ ಹುದ್ದೆಗೆ ಅವರ ನೇಮಕವನ್ನು ಪ್ರಶ್ನಿಸಿ ಸೆ.26ರಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ.ತ್ರಿಪಾಠಿಯವರಿಗೆ ಪತ್ರವನ್ನು ಬರೆದಿತ್ತು. ಆದರೆ ಅವರು ಪತ್ರಕ್ಕೆ ಉತ್ತರಿಸಿಲ್ಲ.ಸೆ.30ರಂದು ರೈಲ್ವೆ ಮಂಡಳಿಯ ಜಾಗ್ರತ ನಿರ್ದೇಶನಾಲಯದ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರವೀರ ರಮಣ ಅವರಿಗೂ ಇಂತಹುದೇ ಪತ್ರವನ್ನು ಬರೆಯಲಾಗಿದ್ದು,ಅವರೂ ಉತ್ತರಿಸುವ ಗೋಜಿಗೆ ಹೋಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News