ಅಧಿಕಾರಿಗೆ ಲಂಚ ನೀಡಿದ ಆರೋಪ: ಪಂಜಾಬ್‌ನ ಮಾಜಿ ಸಚಿವ ಸುಂದರ್ ಶ್ಯಾಮ್ ಅರೋರಾ ಬಂಧನ

Update: 2022-10-16 16:07 GMT
PHOTO: Twitter

ಚಂಡಿಗಡ, ಅ. 16: ತನ್ನ ವಿರುದ್ಧದ ಪ್ರಕರಣಗಳ ಇತ್ಯರ್ಥಕ್ಕೆ ನೆರವು ನೀಡಲು  ಅಧಿಕಾರಿಯೊಬ್ಬರಿಗೆ ೫೦ ಲಕ್ಷ ರೂಪಾಯಿ ಲಂಚ ನೀಡಿದ ಆರೋಪದಲ್ಲಿ ಮಾಜಿ ಸಚಿವ ಸುಂದರ್ ಶಾಮ್ ಅರೋರಾ ಅವರನ್ನು ಪಂಜಾಬ್‌ನ ಜಾಗೃತ ದಳ ಬಂಧಿಸಿದೆ.

ಆದಾಯ ಮೀರಿದ ಆಸ್ತಿ ಪ್ರಕರಣ ಹಾಗೂ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಕೈಗಾರಿಕ ಸಚಿವರಾಗಿದ್ದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಆರೋಪದ ತನಿಖೆಯನ್ನು ಸುಂದರ್ ಅರೋರಾ ಅವರು ಎದುರಿಸುತ್ತಿದ್ದಾರೆ.

ಈ ಪ್ರಕರಣಗಳಲ್ಲಿ ನೆರವು ನೀಡಲು ವಿಚಕ್ಷಣಾ ದಳದ ಅಧಿಕಾರಿಗೆ ೫೦ ಲಕ್ಷ ರೂಪಾಯಿ ಲಂಚ ನೀಡಲು ಪ್ರಯತ್ನಿಸಿದ ಆರೋಪದಲ್ಲಿ ಸುಂದರ್ ಅರೋರಾ ಅವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ವಿಚಕ್ಷಣಾ ದಳದ ಪ್ರಧಾನ ನಿರ್ದೇಶಕ ವರಿಂದರ್ ಕುಮಾರ್ ಅವರು ಹೇಳಿದ್ದಾರೆ.

ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಎಐಜಿ ಮನಮೋಹನ್ ಶರ್ಮಾ ಅವರನ್ನು ಸುಂದರ್ ಅರೋರಾ ಅಕ್ಟೋಬರ್ ೧೪ರಂದು ಸಂಪರ್ಕಿಸಿದ್ದರು.   ಅಲ್ಲದೆ, ಪ್ರಕರಣದಿಂದ ತನ್ನ ಹೆಸರನ್ನು ಕೈ ಬಿಡಲು ನೆರವು ನೀಡುವಂತೆ ಕೋರಿದ್ದರು. ಅದಕ್ಕಾಗಿ ಅವರು ೧ ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು ಎಂದು ಕುಮಾರ್ ಅವರು ತಿಳಿಸಿದ್ದಾರೆ.

ಮೊದಲ ಕಂತಾಗಿ ೫೦ ಲಕ್ಷ ರೂಪಾಯಿ ನೀಡುವುದಾಗಿ ಹಾಗೂ ಉಳಿದ ಮೊತ್ತವನ್ನು ಅನಂತರ ನೀಡುವುದಾಗಿ ಅವರು ತಿಳಿಸಿದ್ದರು ಎಂದು  ಕುಮಾರ್ ತಿಳಿಸಿದ್ದಾರೆ.

ಈ ವಿಷಯವನ್ನು ಶರ್ಮಾ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಅರೋರ ಅವರನ್ನು ಬಂಧಿಸಲು ಬಲೆ ಬೀಸಲಾಗಿತ್ತು. ಅರೋರಾ ಅವರು ೫೦ ಲಕ್ಷ ರೂಪಾಯಿ ಇದ್ದ ಬ್ಯಾಗ್ ಅನ್ನು ಹಸ್ತಾಂತರಿಸಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಕುಮಾರ್ ತಿಳಿಸಿದ್ದಾರೆ.

ಸುಂದರ್ ಅರೋರಾ ಅವರು ಈ ವರ್ಷ ಜೂನ್‌ನಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಗೆ ಸೇರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News