ಜಾಗತಿಕ ಹಸಿವು ಸೂಚ್ಯಂಕ ವರದಿ ಬೇಜವಾಬ್ದಾರಿಯುತ: RSS ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್

Update: 2022-10-16 16:31 GMT

ಹೊಸದಿಲ್ಲಿ, ಅ. ೧೬: ಜಾಗತಿಕ ಹಸಿವು ಸೂಚ್ಯಾಂಕ-೨೦೨೨ರ ವರದಿ  ಬೇಜವಾಬ್ದಾರಿಯುತ ಹಾಗೂ ಕಿಡಿಗೇಡಿತನದ್ದು ಎಂದು ಆರೆಸ್ಸೆಸ್‌ನ ಅಂಗ ಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ) ರವಿವಾರ ಹೇಳಿದೆ. ಅಲ್ಲದೆ, ಭಾರತದ ವರ್ಚಸ್ಸಿಗೆ ಧಕ್ಕೆ ತಂದ ಪ್ರಕಾಶಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಜಾಗತಿಕ ಹಸಿವು ಸೂಚ್ಯಾಂಕವನ್ನು ಆಧರಿಸಿ ೧೨೧ ದೇಶಗಳ ಸ್ಥಾನಗಳ ವರದಿಯನ್ನು  ಜರ್ಮನಿಯ ಸರಕಾರೇತರ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫೆ ಮತ್ತೊಮ್ಮೆ ಬಿಡುಗಡೆ ಮಾಡಿದೆ.

ಭಾರತದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಬೇಜವಾಬ್ದಾರಿಯುತವಾಗಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಆರೆಸ್ಸೆಸ್‌ನ ಅಂಗ ಸಂಸ್ಥೆ ಎಸ್‌ಜೆಜೆ ವರದಿ ಕುರಿತು ಪ್ರತಿಕ್ರಿಯಿಸಿದೆ. ‘‘ಸತ್ಯಕ್ಕೆ ದೂರವಾದ ಈ ವರದಿ ದತ್ತಾಂಶದ ದೃಷ್ಟಿಕೋನದಿಂದ ಮಾತ್ರವಲ್ಲದೆ ವಿಶ್ಲೇಷಣೆ ಹಾಗೂ ವಿಧಾನ ಕ್ರಮದ ದೃಷ್ಟಿಕೋನದಿಂದಲೂ  ದೋಷಪೂರಿತವಲ್ಲದೆ, ಹಾಸ್ಯಾಸ್ಪದ ಕೂಡ ಆಗಿದೆ. ಕಳೆದ ವರ್ಷ ಅಕ್ಟೋಬರ್ ಆರಂಭದಲ್ಲಿ  ೧೧೬ ದೇಶಗಳ ಪಟ್ಟಿಯಲ್ಲಿ ಭಾರತ ೧೦೧ನೇ ಸ್ಥಾನ  ಪಡೆದಿತ್ತು’’ ಎಂದು ಅದು ಹೇಳಿದೆ. 

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದ ಜಾಗತಿಕ ಹಸಿವು ಸೂಚ್ಯಾಂಕವನ್ನು ಭಾರತ ದೃಢವಾಗಿ ವಿರೋಧಿಸುತ್ತದೆ ಎಂದು ಸ್ವದೇಶಿ ಜಾಗರಣ್ ಮಂಚ್ ಹೇಳಿದೆ. ಅಲ್ಲದೆ, ದೇಶಗಳ ಮೌಲ್ಯ ಮಾಪನಕ್ಕೆ ಬಳಸಲಾದ ದತ್ತಾಂಶ ಹಾಗೂ ವಿಧಾನ ಕ್ರಮವನ್ನು ಪ್ರಶ್ನಿಸಿದೆ.

‘‘ಈ ದೋಷಗಳನ್ನು ಸರಿಪಡಿಸಲಾಗುವುದು ಎಂದು ಜಾಗತಿಕ ಆಹಾರ ಸಂಘಟನೆ (ಎಫ್‌ಎಕ್ಯು) ತಿಳಿಸಿತ್ತು. ಆದರೆ, ಅದೇ ತಪ್ಪು ದತ್ತಾಂಶ ಹಾಗೂ ವಿಧಾನ ಕ್ರಮವನ್ನು ಮತ್ತೊಮ್ಮೆ ಬಳಸಿ ಈ ವರ್ಷದ ವರದಿಯನ್ನು ಬಿಡುಗಡೆಗೊಳಿಸಲಾಗಿದೆ’’ ಎಂದು ಅದು ಹೇಳಿದೆ.

‘‘ಸ್ವದೇಶಿ ಮಂಚ್ ಮತ್ತೊಮ್ಮೆ ಈ ವರದಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತದೆ. ಈ ವರದಿಯನ್ನು ತಿರಸ್ಕರಿಸುವಂತೆ ಹಾಗೂ ಭಾರತದ ಆಹಾರ ಭದ್ರತೆ ಕುರಿತು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಭಾರತದ ವರ್ಚಸ್ಸಿಗೆ ಧಕ್ಕೆ ತರುವ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರಕಾರವನ್ನು ಆಗ್ರಹಿಸುತ್ತದೆ’’ ಎಂದು ಸ್ವದೇಶಿ ಜಾಗರಣ್ ಮಂಚ್ ಹೇಳಿಕೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News