ದೀಪಾವಳಿ ಉಡುಗೊರೆಯಾಗಿ ಉದ್ಯೋಗಿಗಳಿಗೆ ಕಾರು, ಬೈಕ್ ನೀಡಿದ ಚಿನ್ನಾಭರಣ ಮಳಿಗೆ ಮಾಲಕ

Update: 2022-10-17 11:12 GMT
Photo credit: ANI

ಚೆನ್ನೈ: ಚೆನ್ನೈನ (Chennai) ಚಿನ್ನಾಭರಣ ಮಳಿಗೆಯೊಂದರ (jewellery shop) ಮಾಲಕರಾಗಿರುವ ಜಯಂತಿ ಲಾಲ್ ಚಲ್ಲನಿ (Jayanthi Lal Chayanthi) ಎಂಬವರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳು ಮತ್ತು ಬೈಕ್‍ಗಳನ್ನು ನೀಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ವೇಳೆಯೂ ತಮ್ಮ ಉದ್ಯಮಕ್ಕೆ ಅವಿರತ ಬೆಂಬಲ ನೀಡಿದ್ದನ್ನು ಮನ್ನಿಸಿ ಈ ಕೊಡುಗೆ ನೀಡಿರುವುದಾಗಿ ಚಲ್ಲನಿ ಹೇಳಿದ್ದಾರೆ.

ಚಿನ್ನಾಭರಣಗಳ ಮಳಿಗೆಯ ಮಾಲಕರೊಬ್ಬರು ತಮ್ಮ ಉದ್ಯೋಗಿಗಳಿಗೆ ಕಾರು, ಬೈಕ್‍ಗಳನ್ನು ಉಡುಗೊರೆಯಾಗಿ ನೀಡಿರುವುದು ಭಾರತದಲ್ಲಿ ಇದೇ ಮೊದಲ ಬಾರಿ ಎಂದು ಸಂಸ್ಥೆಯ ಪ್ರಚಾರ ಮತ್ತು ಮಾರ್ಕೆಟಿಂಗ್ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್ ಎಸ್ ಬಾಲಾಜಿ ಹೇಳಿದ್ದಾರೆ. ಎಂಟು ಉದ್ಯೋಗಿಗಳಿಗೆ ಕಾರು ಹಾಗೂ 19 ಮಂದಿಗೆ ಬೈಕ್‍ಗಳು ಉಡುಗೊರೆಯಾಗಿ ದೊರಕಿವೆ ಎಂದು ಅವರು ಹೇಳಿದ್ದಾರೆ.

ನಗದು ಉಡುಗೊರೆ ನೀಡಿದರೆ ಒಂದೆರಡು ತಿಂಗಳಿನಲ್ಲಿ ಖರ್ಚಾಗಿ ಹೋಗುತ್ತದೆ ಎಂದು ವಾಹಗಳನ್ನು ನೀಡಲಾಯಿತು ಎಂದು ಹೇಳಿದ ಅವರು ಈ ಉಡುಗೊರೆ ವಿಚಾರ ತಮಗೂ, ಯಾರಿಗೂ ಕೊನೇ ಕ್ಷಣದ ತನಕ ತಿಳಿದಿರಲಿಲ್ಲ. ಉಡುಗೊರೆ ಪಡೆದ ಉದ್ಯೋಗಿಗಳು ಸಂತೋಷ ತಾಳಲಾರದೆ ಆನಂದಬಾಷ್ಪ ಸುರಿಸಿದರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News