ʼಸಲ್ಮಾನ್‌ ಖಾನ್‌ ಡ್ರಗ್ಸ್‌ ಬಳಸುತ್ತಾರೆ, ಆಮಿರ್‌ ಖಾನ್...ʼ: ರಾಮ್‌ದೇವ್‌ ವಿವಾದಾತ್ಮಕ ಭಾಷಣ

Update: 2022-10-17 13:09 GMT

ಲಕ್ನೋ: ಪತಂಜಲಿ ‌ಉತ್ಪನ್ನಗಳ ಉದ್ಯಮಿ, "ಯೋಗಗುರು" ರಾಮದೇವ್ ಅವರು "ಬಾಲಿವುಡ್ ಮತ್ತು ಡ್ರಗ್ಸ್" ಸಂಬಂಧದ ಬಗ್ಗೆ ಧ್ವನಿ ಎತ್ತುವ ಭರದಲ್ಲಿ  ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಮಗನ ಹೆಸರನ್ನು ಹೇಳಿ ವಿವಾದ ಸೃಷ್ಟಿಸಿದ್ದಾರೆ. ರಾಮದೇವ್‌ ಅವರ ವಿವಾದಾತ್ಮಕ ಭಾಷಣ ಈಗ ವೈರಲ್ ಆಗಿದೆ.

ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ನಡೆದ ಡ್ರಗ್ಸ್ ವಿರೋಧಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಮ್‌ದೇವ್, ಡ್ರಗ್ಸ್ ಪ್ರಸರಣಕ್ಕೆ ಚಿತ್ರರಂಗ ಮತ್ತು ತಾರೆಯರನ್ನು ದೂಷಿಸಿದ್ದಾರೆ.

"ಶಾರುಖ್ ಖಾನ್ ಅವರ ಮಗ (ಆರ್ಯನ್ ಖಾನ್) ಡ್ರಗ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದಾನೆ. ಅವರು ಜೈಲಿಗೆ ಹೋದರು. ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ. ಅಮೀರ್ ಖಾನ್ ಬಗ್ಗೆ ನನಗೆ ಗೊತ್ತಿಲ್ಲ. ಈ ನಟರ ಬಗ್ಗೆ ದೇವರಿಗೆ ಗೊತ್ತು" ಎಂದು ರಾಮ್‌ದೇವ್‌ ಹೇಳಿದ್ದಾರೆ.

"ಎಷ್ಟು ಸಿನಿಮಾ ತಾರೆಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಯಾರಿಗೆ ಗೊತ್ತು. ನಟಿಯರ (ಪರಿಸ್ಥಿತಿ) ಇನ್ನೂ ಕೆಟ್ಟದಾಗಿದೆ. ಚಿತ್ರರಂಗದಲ್ಲಿ ಎಲ್ಲೆಡೆ ಡ್ರಗ್ಸ್ ಇದೆ. ಬಾಲಿವುಡ್‌ನಲ್ಲಿ ಡ್ರಗ್ಸ್ ಇದೆ, ರಾಜಕೀಯದಲ್ಲಿ ಡ್ರಗ್ಸ್ ಇದೆ" ಎಂದು  "ಆರ್ಯವೀರ್ ಸಮ್ಮೇಳನ" ದಲ್ಲಿ ರಾಮ್‌ದೇವ್ ವಾಗ್ದಾಳಿ ನಡೆಸಿದ್ದಾರೆ.

"ಚುನಾವಣೆ ಸಮಯದಲ್ಲಿ ಮದ್ಯವನ್ನು ಹಂಚಲಾಗುತ್ತದೆ. ಭಾರತವು ಪ್ರತಿಯೊಂದು ಮಾದಕ ವ್ಯಸನದಿಂದ ಮುಕ್ತವಾಗಬೇಕು ಎಂದು ನಾವು ಪ್ರತಿಜ್ಞೆ ಮಾಡಬೇಕು. ಇದಕ್ಕಾಗಿ ನಾವು ಚಳವಳಿಯನ್ನು ಪ್ರಾರಂಭಿಸುತ್ತೇವೆ." ಎಂದು ಅವರು ಹೇಳಿದ್ದಾರೆ.

ಆದರೆ, ರಾಮ್‌ದೇವ್ ತಮ್ಮ ಯಾವುದೇ ಆರೋಪಕ್ಕೂ ಆಧಾರ ನೀಡಿಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ.

ಕಳೆದ ವರ್ಷ "ಹಡಗಿನಲ್ಲಿ ಡ್ರಗ್ಸ್" ಪ್ರಕರಣದಲ್ಲಿ ಬಂಧಿತರಾದ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ತನಿಖೆಯ ಬಳಿಕ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದರು. 20 ದಿನಗಳ ಜೈಲುವಾಸದ ಬಳಿಕ ಅವರಿಗೆ ಜಾಮೀನು ದೊರೆತಿತ್ತು. ಸಲ್ಮಾನ್‌ ಖಾನ್‌ ಡ್ರಗ್ಸ್‌ ಸೇವಿಸುತ್ತಾರೆ ಎನ್ನುವ ಆರೋಪಕ್ಕೂ ಯಾವುದೇ ಆಧಾರವಿಲ್ಲ. ಈ ಹಿನ್ನೆಲೆಯಲ್ಲಿ ರಾಮ್‌ದೇವ್‌ ಇವರನ್ನು ಗುರಿಯಾಗಿಸಿರುವುದು ಚರ್ಚೆಗೆ ಕಾರಣವಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News