ಹಲ್ಲೆಯ ನಂತರ ಗುರುಗ್ರಾಮ ಖಾಸಗಿ ವಿವಿ ಕ್ಯಾಂಪಸ್‌ನಿಂದ ಪರಾರಿಯಾದ 60 ನೈಜೀರಿಯನ್‌ ವಿದ್ಯಾರ್ಥಿಗಳು

Update: 2022-10-17 13:45 GMT
Photo: Twitter video screengrab

ಗುರುಗ್ರಾಮ: ಇಲ್ಲಿನ ಜಿಡಿ ಗೋಯೆಂಕಾ ವಿಶ್ವವಿದ್ಯಾಲಯವೊಂದರ ಹಾಸ್ಟೆಲ್‌ ಮತ್ತು ಫುಟ್ಬಾಲ್‌ ಮೈದಾನದಲ್ಲಿ ತಮ್ಮನ್ನು ಇತರ ವಿದ್ಯಾರ್ಥಿಗಳು ಥಳಿಸಿದ್ದೇ ಅಲ್ಲದೆ ನಿಂದಿಸಿದ ಕಾರಣ ತಾವು ಕ್ಯಾಂಪಸ್‌ನಿಂದ ಪರಾರಿಯಾಗಿರುವುದಾಗಿ ಸುಮಾರು 60 ನೈಜೀರಿಯನ್‌ ವಿದ್ಯಾರ್ಥಿಗಳು ದೂರಿದ್ದಾರೆ.

ಜೀವಭಯದಿಂದ  ಸದ್ಯ ತಾವು ಬೇರೆ ಕಡೆ ಇರುವುದಾಗಿಯೂ ಈ ವಿದ್ಯಾರ್ಥಿಗಳು ತಿಳಿಸಿದ್ದು ನೈಜೀರಿಯಾ ರಾಯಭಾರ ಕಚೇರಿಯ ಹಸ್ತಕ್ಷೇಪ ಕೋರಿದ್ದಾರೆ.

ಫುಟ್ಬಾಲ್‌ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ನೈಜೀರಿಯನ್‌ ವಿದ್ಯಾರ್ಥಿಗಳ ವಿರುದ್ಧ ಭಾರತೀಯ ವಿದ್ಯಾರ್ಥಿಗಳ ಒಂದು ಗುಂಪು ಒಂದು ತಿಂಗಳ ಹಿಂದೆ ಇದೇ ಸಂಸ್ಥೆಯಲ್ಲಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ನೈಜೀರಿಯಾ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ ಕೊಠಡಿಗಳಲ್ಲೇ ನಮಾಝ್ ಸಲ್ಲಿಸುವಂತೆ ಮಾಡಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದ ನಂತರ ಸಮಸ್ಯೆಯನ್ನು ಸೌಹಾರ್ದತೆಯಿಂದ ಆಗ ಇತ್ಯರ್ಥ ಪಡಿಸಲಾಗಿತ್ತು.

ಆದರೆ ಈ ಘಟನೆಗೂ ರವಿವಾರದ ಘಟನೆಗೂ ಸಂಬಂಧವಿಲ್ಲವೆಂದು ಹೇಳಲಾಗಿದೆ. ಒಬ್ಬ ನೈಜೀರಿಯನ್‌ ವಿದ್ಯಾರ್ಥಿಯ ಪ್ರಕಾರ, ಕಳೆದ ಶುಕ್ರವಾರ ಒಂದೇ ತಂಡದಲ್ಲಿ ಭಾರತೀಯ ಮತ್ತು ನೈಜೀರಿಯಾ ವಿದ್ಯಾರ್ಥಿಗಳನ್ನಿರಿಸಲು ನಿರ್ಧರಿಸಿದಾಗ ಸಮಸ್ಯೆ ಎದುರಾಗಿತ್ತು. ʻʻನಮ್ಮ ನಾಯಕ ಕ್ರೀಡಾ ಅಧಿಕಾರಿಯನ್ನು ಸಂಪರ್ಕಿಸಿ ಮಿಶ್ರ ತಂಡಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಧಿಕಾರಿ ಪಂದ್ಯ ರದ್ದುಗೊಳಿಸಿದ್ದರು. ಆದರೂ ಭಾರತೀಯ ವಿದ್ಯಾರ್ಥಿಗಳಲ್ಲಿ ಕೆಲವರು ಮೈದಾನ ಪ್ರವೇಶಿಸಿ ನಮ್ಮ ನಾಯಕನ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದರು. ಹೊರಗಿನಿಂದ ಬೈಕುಗಳಲ್ಲಿ ಬಂದಿದ್ದ ಕೆಲವರೂ ಸೇರಿಕೊಂಡ ಕಾರಣ ಅಲ್ಲಿ ಸಂಘರ್ಷ ಏರ್ಪಟ್ಟಿತ್ತು. ಈ ವಿಚಾರ ಅಂದೇ ಇತ್ಯರ್ಥಪಡಿಸಲಾಗಿದ್ದರೂ ಶನಿವಾರ   ಭಾರತೀಯ ವಿದ್ಯಾರ್ಥಿಗಳ ಒಂದು ತಂಡ ದಾಳಿ ನಡೆಸಿದ್ದೇ ಅಲ್ಲದೆ ನಿಂದಿಸಿ ಪರಿಣಾಮ ನೆಟ್ಟಗಾಗದು ಎಂದು ಬೆದರಿಸಿದ್ದರು ಎಂದು ವಿದ್ಯಾರ್ಥಿಯೊಬ್ಬ ಆರೋಪಿಸಿದ್ದಾನೆ.

ʻʻಈ ಹಿನ್ನೆಲೆಯಲ್ಲಿ ಒಟ್ಟು 63 ನೈಜೀರಿಯಾ ವಿದ್ಯಾರ್ಥಿಗಳು ಕ್ಯಾಂಪಸ್‌ ತೊರೆದು ದಿಲ್ಲಿಯಲ್ಲಿದ್ದೇವೆ,ʼʼ ಎಂದು ಆತ ಹೇಳಿದ್ದಾನೆ. ಎರಡೂ ಗುಂಪುಗಳು ಪರಸ್ಪರರ ವಿರುದ್ಧ ದೂರು ದಾಖಲಿಸಿವೆ. ʻʻದೊಡ್ಡ ಘಟನೆಯೇನೂ ನಡೆದಿಲ್ಲ, ಫುಟ್ಬಾಲ್‌ ಮ್ಯಾಚ್‌ ವೇಳೆ ನಡೆದ ಜಗಳದಿಂದ ಹೀಗಾಗಿದೆ. ಸೀಸಿಟಿವಿ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು,ʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಯಾವುದೇ ವಿದ್ಯಾರ್ಥಿ ಕ್ಯಾಂಪಸ್‌ ತೊರೆದಿಲ್ಲ ಎಂದು ವಿವಿ ಆಡಳಿತ ಹೇಳಿದೆ. ಶುಕ್ರವಾದ ಪಂದ್ಯದ ವೇಳೆ ರಾದ್ಧಾಂತ ಸೃಷ್ಟಿಸಿದ 10 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದೂ ಆಡಳಿತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News