ವಿತ್ತ ಸಚಿವೆಯ 'ರುಪಾಯಿ ದುರ್ಬಲಗೊಂಡಿಲ್ಲ, ಡಾಲರ್ ಬಲಗೊಂಡಿದೆ' ಹೇಳಿಕೆಯ ನಂತರ ಕಾಂಗ್ರೆಸ್-ಬಿಜೆಪಿ ವಾಕ್ಸಮರ

Update: 2022-10-17 13:53 GMT
Photo: PTI

ಹೊಸದಿಲ್ಲಿ: "ರೂಪಾಯಿ (Rupee) ದುರ್ಬಲಗೊಂಡಿಲ್ಲ, ಡಾಲರ್ (Dollar) ಬಲಗೊಂಡಿದೆ,'' ಎಂದು ಕಳೆದ ಶನಿವಾರ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿರುವುದು ಇದೀಗ ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಅವರು ಟ್ವಿಟರ್ ನಲ್ಲಿ ಒಂದು ವೀಡಿಯೋ ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ- "ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಒಂದು ಡಾಲರ್ ರೂ. 58.43 ಗೆ ಸಮನಾಗಿತ್ತು, ಆದರೆ ಇಂದು ರೂ. 82.32 ಆಗಿದೆ. ಇದರರ್ಥ ಡಾಲರ್ ಗೆ ಹೋಲಿಸಿದಾಗ ರೂಪಾಯಿ ಮೌಲ್ಯ ಶೇ. 41 ರಷ್ಟು ಕಳೆದ ಎಂಟು ವರ್ಷಗಳಲ್ಲಿ ಕಡಿಮೆಯಾಗಿದೆ. ಆದರೆ ನೀವು ರುಪಾಯಿ ಕುಸಿಯುತ್ತಿಲ್ಲ, ಡಾಲರ್ ಏರಿಕೆಯಾಗುತ್ತಿದೆ ಎನ್ನುತ್ತಿದ್ದೀರಿ."

"ಕಳೆದ ಎಂಟು ವರ್ಷಗಳಲ್ಲಿ ಉದ್ಯೋಗಾವಕಾಶಗಳಲ್ಲಿ ಶೇ 41 ರಷ್ಟು ಏರಿಕೆಯಾಗಿದೆಯೇ, ಜನರ ಆದಾಯದಲ್ಲಿ ಶೇ 41ರಷ್ಟು ಏರಿಕೆಯಾಗಿದೆಯೇ ಆದರೆ ಡಾಲರ್ ಶೇ 41 ಹೆಚ್ಚು ಮೊತ್ತಕ್ಕೆ ಲಭ್ಯವಿದೆ,'' ಎಂದು ಅವರು ಬರೆದಿದ್ದಾರೆ.

ವಿತ್ತ ಸಚಿವೆಯ ಪತ್ರಿಕಾಗೋಷ್ಠಿ ವೀಡಿಯೋ ಟ್ವೀಟ್ ಮಾಡಿ ಪೋಸ್ಟ್ ಮಾಡಿದ ಆಪ್ ನಾಯಕ ರಾಘವ್ ಛಡ್ಡಾ, "ನನ್ನ ಅರ್ಥಶಾಸ್ತ್ರ ದುರ್ಬಲವಾಗಿಲ್ಲ, ನಿಮ್ಮದು ಬಲವಾಗಿದೆ,'' ಎಂದು ಬರೆದಿದ್ದಾರೆ.

ಒಡಿಶಾ ಕಾಂಗ್ರೆಸ್ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಪ್ರತಿಕ್ರಿಯಿಸಿ "ಯುಪಿಎ ಆಡಳಿತದಡಿಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 50 ಆಗಿದ್ದಾಗ ಭಾರತದ ಆರ್ಥಿಕತೆ ಬಿಕ್ಕಟ್ಟಿನಲ್ಲಿತ್ತು. ಈಗ ಮೋದಿ ಆಡಳಿತದಲ್ಲಿ ರುಪಾಯಿ ಮೌಲ್ಯ ಡಾಲರ್ ಎದುರು 80 ಹಾಗೂ ಅದು 'ಅಮೃತ್ ಕಾಲ್' ಎಂದು ವ್ಯಂಗ್ಯವಾಡಿದ್ದಾರೆ.

''ದೇಶದ ಆರ್ಥಿಕತೆಯನ್ನು ರಕ್ಷಿಸುವಲ್ಲಿ ಆಕೆಯ ಸರಕಾರದ ವೈಫಲ್ಯವನ್ನು ಇಂತಹ ಹೇಳಿಕೆಗಳಿಂದ ಮರೆಮಾಡಲಾಗದು,'' ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ವಕ್ತಾರ ಕ್ಲೈಡ್ ಕ್ರಾಸ್ಟೋ ಹೇಳಿದ್ದಾರೆ.

ವಿತ್ತ ಸಚಿವೆಯನ್ನು ಬೆಂಬಲಿಸಿ ಮಾತನಾಡಿದ ಬಿಜೆಪಿ ಐಟಿ ಸೆಲ್ ನಾಯಕ ಅಮಿತ್ ಮಾಲವಿಯ "ಮೂಲಭೂತ ಗಣಿತ ಗೊತ್ತಿಲ್ಲದವರು ರುಪಾಯಿ-ಡಾಲರ್ ಕುರಿತು ಮಾತನಾಡುತ್ತಿದ್ದಾರೆ, ಇದು ಅವರ ಪುಟ್ಟ ಮೆದುಳುಗಳಿಗೆ ಕ್ಲಿಷ್ಟಕರ. ಇತರ ಬೆಳೆಯುತ್ತಿರುವ ಆರ್ಥಿಕತೆಗಳಿಗೆ ಹೋಲಿಸಿದಾಗ ರುಪಾಯಿ ನಿರ್ವಹಣೆ ಉತ್ತಮವಾಗಿದೆ ಎಂದು ಆಕೆ ಹೇಳಿದ್ದಾರೆ,'' ಎಂದಿದ್ದಾರೆ.

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಪ್ರತಿಕ್ರಿಯಿಸಿ "ಯುಪಿಎ ಆಡಳಿತದಡಿಯಲ್ಲಿ 2013 ರಲ್ಲಿ ನಡೆದಂತೆ ಎಲ್ಲಾ  ಕರೆನ್ಸಿಗಳೆದುರು ರುಪಾಯಿ ಮೌಲ್ಯ ಕುಸಿದಾಗ ರುಪಾಯಿ ದುರ್ಬಲವಾಗುತ್ತಿದೆ ಎಂದು ಹೇಳಲಾಗುತ್ತದೆ. ಹೆಚ್ಚಿನ ಕರೆನ್ಸಿಗಳು ಫೆಡ್ ರೇಟ್ ಏರಿಕೆಯಿಂದ ಕುಸಿಯುತ್ತಿರುವಾಗ ಡಾಲರ್ ಮೌಲ್ಯ ಹೆಚ್ಚಾಗಿದೆ ಎನ್ನಲಾಗುತ್ತದೆ,'' ಎಂದು ವಿವರಣೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News