×
Ad

ಲೋಕಸಭಾ ಚುನಾವಣೆಯಲ್ಲಿ ಗೆಲುವು, ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರ ರಚನೆಗೆ ನೆರವು ನಮ್ಮ ಗುರಿ: ಎಂ.ಕೆ ಸ್ಟಾಲಿನ್

Update: 2022-10-17 21:18 IST

ಚೆನ್ನೈ,ಅ.17: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ 39 ಮತ್ತು ಪುದುಚೇರಿಯ ಏಕೈಕ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ಡಿಎಂಕೆಯ ಮೊದಲ ಗುರಿಯಾಗಿದೆ ಎಂದು ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(MK Stalin) ಹೇಳಿದ್ದಾರೆ.

ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಮತ್ತು ಒಕ್ಕೂಟವಾದದ ತತ್ತ್ವಗಳಿಗೆ ಬದ್ಧವಾಗಿರುವ ನೂತನ ಸರಕಾರದ ರಚನೆಗೆ ನೆರವಾಗುವುದು ಪಕ್ಷದ ಮುಂದಿನ ಗುರಿಯಾಗಿದೆ ಎಂದು ವೀಡಿಯೊ ಸಂದೇಶದಲ್ಲಿ ತಿಳಿಸಿರುವ ಅವರು,ಮುಂದಿನ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನಾವು ಈ ಗುರಿ ಸಾಧನೆಗಾಗಿ ರಾಜಕೀಯ ಹೆಜ್ಜೆಗಳನ್ನಿಡಲಿದ್ದೇವೆ ಎಂದಿದ್ದಾರೆ.

ಇದು ‘ನಿಮ್ಮಲ್ಲೊಬ್ಬರ ಉತ್ತರಗಳು’ ('Answers by one of you')ಎಂಬ ಶೀರ್ಷಿಕೆಯ ವೀಡಿಯೋ ಸಂದೇಶ ಸರಣಿಯ ಮೂಲಕ ಡಿಎಂಕೆಯ ಸಾರ್ವಜನಿಕ ಸಂಪರ್ಕ ಉಪಕ್ರಮದ ಮೊದಲ ಆವೃತ್ತಿಯಾಗಿದೆ.

‘ಎಲ್ಲ 40 ಲೋಕಸಭಾ ಸ್ಥಾನಗಳು ನಮ್ಮದೇ,ದೇಶವೂ ನಮ್ಮದೇ’ ಎಂಬ ಘೋಷಣೆಯನ್ನು ಡಿಎಂಕೆ ರೂಪಿಸಿದೆ.

ದ್ರಾವಿಡ ಸಿದ್ಧಾಂತ,ದ್ರಾವಿಡ್ ಆಡಳಿತ ಮಾದರಿ,ಆಡಳಿತ ಇತ್ಯಾದಿ ವಿಷಯಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಸಂಪರ್ಕ ಉಪಕ್ರಮದ ಉದ್ದೇಶವಾಗಿದೆ ಎಂದು ಡಿಎಂಕೆ ತಿಳಿಸಿದೆ. ಸ್ಟಾಲಿನ್ ಈ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ನೀಟ್ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸ್ಟಾಲಿನ್,ತಮಿಳುನಾಡು ಈ ಪರೀಕ್ಷೆಯಿಂದ ವಿನಾಯಿತಿಯನ್ನು ಪಡೆಯುವ ಬಗ್ಗೆ ತನಗೆ ವಿಶ್ವಾಸವಿದೆ ಎಂದು ತಿಳಿಸಿದರು. ‘ನೀಟ್ ಅನ್ಯಾಯ‘ಕ್ಕಾಗಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ದಾಳಿ ನಡೆಸಿದ ಅವರು,ಲೋಕಸಭಾ ಚುನಾವಣೆಯಲ್ಲಿ ಅದಕ್ಕೆ ಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು.

ಬಿಜೆಪಿ ತನ್ನ ರಾಜ್ಯಪಾಲರ ಮೂಲಕ ಸಮಾಂತರ ಸರಕಾರವನ್ನು ನಡೆಸಲು ಪ್ರಯತ್ನಿಸುತ್ತಿದೆ ಎಂಬ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ,ನಾವು ಇದೇ ಸಮಸ್ಯೆಯನ್ನು ಎದುರಿಸುತ್ತ ಸರಕಾರವನ್ನು ನಡೆಸುತ್ತಿದ್ದೇವೆ ಎಂದು ಉತ್ತರಿಸಿದರು. ಸಂವಿಧಾನವು ರಾಜ್ಯಪಾಲರು ಮತ್ತು ಜನರಿಂದ ಚುನಾಯಿತ ಮುಖ್ಯಮಂತ್ರಿಯ ಹೊಣೆಗಾರಿಕೆಗಳ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಅದನ್ನು ಪಾಲಿಸಿದರೆ ಯಾರಿಗೂ ಸಮಸ್ಯೆಯಿಲ್ಲ. ಅದರಿಂದ ಅನಗತ್ಯ ಸಮಸ್ಯೆಗಳನ್ನು ತಪ್ಪಿಸಬಹುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News