ಪ್ರಧಾನಿಯಿಂದ ಪಿಎಂ ಕಿಸಾನ್ ಸಮ್ಮಾನ ನಿಧಿಯಡಿ 16,000 ಕೋ.ರೂ.ಗಳ 12ನೇ ಕಂತು ಬಿಡುಗಡೆ
ಹೊಸದಿಲ್ಲಿ,ಅ.17: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಸೋಮವಾರ ಪಿಎಂ ಕಿಸಾನ ಸಮ್ಮಾನ್ ನಿಧಿಯಡಿ (Under PM Kisana Samman Nidhi)16,000 ಕೋ.ರೂ.ಗಳ 12ನೇ ಕಂತನ್ನು ಬಿಡುಗಡೆಗೊಳಿಸಿದ್ದು,ಇದು ನೇರವಾಗಿ ಸುಮಾರು 10 ಕೋ.ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ. ದಿಲ್ಲಿಯಲ್ಲಿ ಆರಂಭಗೊಂಡ ಕಿಸಾನ ಸಮ್ಮೇಳನದಲ್ಲಿ ಪ್ರಧಾನಿ 600 ಕಿಸಾನ ಸಮೃದ್ಧಿ ಕೇಂದ್ರಗಳ ಜೊತೆ ‘ಒಂದು ದೇಶ ಒಂದು ರಸಗೊಬ್ಬರ’('One Country One Fertilizer')ಯೋಜನೆಯನ್ನೂ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ,ಎರಡು ಲ.ಕೋ.ರೂ.ಗೂ ಅಧಿಕ ಮೊತ್ತವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಇದು ಕೃಷಿವೆಚ್ಚಗಳನ್ನು ನಿಭಾಯಿಸಲು ಅವರಿಗೆ ನೆರವಾಗಿದೆ ಎಂದರು.
ಯೂರಿಯಾದಂತಹ ಅಗತ್ಯ ರಸಗೊಬ್ಬರಗಳಿಗೆ ಸರಕಾರವು ಸಬ್ಸಿಡಿಯನ್ನು ಒದಗಿಸುತ್ತಿದೆ ಮತ್ತು ಈ ವರ್ಷವೊಂದರಲ್ಲೇ 2.5 ಲ.ಕೋ.ರೂ.ಗಳ ಸಬ್ಸಿಡಿಯನ್ನು ನೀಡಲಾಗಿದೆ ಎಂದ ಅವರು,ದೇಶವು ಕೃಷಿಯಲ್ಲಿ ಸ್ವಾವಲಂಬಿಯಾಗುವ ಅಗತ್ಯವನ್ನು ಒತ್ತಿ ಹೇಳಿದರು.
ಜಾಗತಿಕವಾಗಿ ಯೂರಿಯಾ ಮತ್ತು ಡಿಎಪಿ ಬೆಲೆಗಳು ಹೆಚ್ಚುತ್ತಿರುವುದರಿಂದ ಸಬ್ಸಿಡಿಗಳನ್ನು ನೀಡಲಾಗುತ್ತಿದೆ ಎಂದರು.
ರಸಗೊಬ್ಬರಗಳನ್ನು ‘ಭಾರತ್’ಎಂದು ಮರುಬ್ರಾಂಡ್ ಮಾಡಲಾಗುವುದು ಎಂದೂ ಅವರು ತಿಳಿಸಿದರು. ಕೃಷಿಯ ಆಧುನೀಕರಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಕಿಸಾನ ಸಮೃದ್ಧಿ ಕೇಂದ್ರಗಳು ಈ ಪ್ರಕ್ರಿಯೆಯಲ್ಲಿ ನೆರವಾಗಲಿವೆ ಎಂದರು.