ಈ.ಡಿ.ಯಿಂದ ಟಿಆರ್‌ಎಸ್ ಸಂಸದ, ಮಧುಕೋನ್ ಸಮೂಹದ 80 ಕೋ.ರೂ.ಗೂ ಅಧಿಕ ಮೌಲ್ಯದ ಸೊತ್ತು ವಶ
ಹೈದರಾಬಾದ್, ಅ. 17: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಟಿಆರ್‌ಎಸ್‌ನ ಲೋಕಸಭಾ ಸಂಸದ ನಮಾ ನಾಗೇಶ್ವರ ರಾವ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೇರಿದ 80.65 ಕೋ.ರೂ. ಮೌಲ್ಯದ 28 ಸ್ಥಿರ ಹಾಗೂ ಇತರ ಸೊತ್ತುಗಳನ್ನು ಔಪಚಾರಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಸೋಮವಾರ ಹೇಳಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ-2022ರ ನಿಯಮಗಳ ಅಡಿಯಲ್ಲಿ ರಾಂಚಿ ಎಕ್ಸ್ಪ್ರೆಸ್‌ವೇ ಲಿಮಿಟೆಡ್, ಮಧುಕೋನ್ ಪ್ರೊಜೆಕ್ಟ್ ಲಿಮಿಟೆಡ್ ಹಾಗೂ ಅದರ ನಿರ್ದೇಶಕರು ಹಾಗೂ ಪ್ರವರ್ತಕರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ಜಾರಿ ನಿರ್ದೇಶನಾಲಯದ ಪತ್ರಿಕಾ ಹೇಳಿಕೆ ತಿಳಿಸಿದೆ.
ನಾಗೇಶ್ವರ ರಾವ್ ಅವರು ಮಧುಕೋನ್ ಕಂಪೆನಿಗಳ ಸಮೂಹದ ಪ್ರವರ್ತಕರು ಹಾಗೂ ನಿರ್ದೇಶಕರು. ಅಲ್ಲದೆ, ಅವರು ರಾಂಚಿ ಎಕ್ಸ್ಪ್ರೆಸ್‌ವೇ ಲಿಮಿಟೆಡ್‌ನ ಬ್ಯಾಂಕ್ ಸಾಲ ಸುಸ್ಥಿಗೆ ವೈಯುಕ್ತಿಕ ಖಾತರಿದಾರರು. ಮಧುಕೋನ್ ಕಂಪೆನಿಗಳ ಸಮೂಹದ ಇಲ್ಲಿನ ನೋಂದಾಯಿತ ಕಚೇರಿ ಹಾಗೂ ವಸತಿ ಸೊತ್ತನ್ನು ಕೂಡ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಜಾರಿ ನಿರ್ದೇಶನಾಲಯ ಹೈದರಾಬಾದ್, ಖಮ್ಮಮ್ ಹಾಗೂ ಪ್ರಕಾಶಂ ಜಿಲ್ಲೆಯಲ್ಲಿರುವ 67.08 ಕೋ. ರೂ. ಸ್ಥಿರ ಸೊತ್ತು ಹಾಗೂ ಮಧುಕೋನ್ ಪ್ರೊಜೆಕ್ಟ್ಸ್ ಲಿಮಿಟೆಡ್, ಮಧುಕೋನ್ ಗ್ರಾನೈಟ್ಸ್ ಲಿಮಿಟೆಡ್ ಹಾಗೂ ಇತರ ಮಧುಕೋನ್ ಕಂಪೆನಿಗಳ ಸಮೂಹದಲ್ಲಿರುವ ನಾಗೇಶ್ವರ ರಾವ್ ಹಾಗೂ ಅವರ ಕುಟುಂಬದ ಸದಸ್ಯರು ಹೊಂದಿರುವ ಶೇರುಗಳು ಸೇರಿದಂತೆ 13.57 ಕೋ.ರೂ. ಚರ ಸೊತ್ತನ್ನು ಜಾರಿ ನಿರ್ದೇಶನಾಲಯ ಗುರುತಿಸಿದೆ ಹಾಗೂ ಮುಟ್ಟುಗೋಲು ಹಾಕಿಕೊಂಡಿದೆ.
ಈ ಹಿಂದೆ ಮಧುಕೋನ್ ಸಮೂಹ ಹಾಗೂ ನಮಾ ನಾಗೇಶ್ವರ ರಾವ್ ಸೇರಿದಂತೆ ಅದರ ನಿರ್ದೇಶಕರು ಹಾಗೂ ಪ್ರವರ್ತಕರಿಗೆ ಸೇರಿದ 105 ಸ್ಥಿರ ಸೊತ್ತುಗಳು ಹಾಗೂ 73.74 ಕೊ.ರೂ. ಮೌಲ್ಯದ ಇತರ ಸೊತ್ತುಗಳನ್ನು ಜಾರಿ ನಿರ್ದೇಶನಾಲಯ 2022 ಜುಲೈಯಲ್ಲಿ ಔಪಚಾರಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು.