×
Ad

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಶೇ. 96 ಮತದಾನ, ಅ. 19ರಂದು ಫಲಿತಾಂಶ

Update: 2022-10-17 23:23 IST

ಹೊಸದಿಲ್ಲಿ, ಅ. 16: ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಿತು. ದಿಲ್ಲಿಯ ಎಐಸಿಸಿ ಪ್ರಧಾನ ಕಚೇರಿಯೂ ಸೇರಿದಂತೆ ದೇಶಾದ್ಯಂತ ಒಟ್ಟು 65 ಕೇಂದ್ರಗಳಲ್ಲಿ ಮತದಾನ ನಡೆಯಿತು.

ಮತದಾನದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ ಮಿಸ್ತ್ರಿ, ಒಟ್ಟು 9,900 ಪ್ರತಿನಿಧಿಗಳ ಪೈಕಿ 9,500 ಪ್ರತಿನಿಧಿಗಳು ಮತ ಚಲಾಯಿಸಿದ್ದು, ಶೇ. 96ರಷ್ಟು ಮತದಾನವಾಗಿದೆ ಎಂದರು.

ನಮಗೆ ಅತ್ಯಂತ ತೃಪ್ತಿದಾಯಕ ವಿಚಾರವೆಂದರೆ ಎಲ್ಲ ರಾಜ್ಯಗಳಲ್ಲಿ ಮತ ಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಪ್ರತಿಕೂಲ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಇದು ಅತಿ ದೊಡ್ಡ ಸಾಧನೆ. ಮತದಾನವನ್ನು ಶಾಂತಿಯುತ ರೀತಿಯಲ್ಲಿ ಮುಕ್ತವಾಗಿ ನಡೆಸಲಾಯಿತು ಎಂದು ಮಿಸ್ಟ್ರಿ ತಿಳಿಸಿದ್ದಾರೆ.

‘‘ಆಂತರಿಕ ಪ್ರಜಾಪ್ರಭುತ್ವ ಎಂದರೇನು ಎಂಬುದನ್ನು ಕಾಂಗ್ರೆಸ್ ಪಕ್ಷ ತೋರಿಸಿಕೊಟ್ಟಿದೆ. ಇದರಿಂದ ಪಾಠ ಕಲಿಯಲು ಬಯಸುವ ಇತರ ಪಕ್ಷಗಳು ಇದೇ ರೀತಿ ಮಾಡಬಹುದು’’ ಎಂದು ಅವರು ಹೇಳಿದರು.

ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು. ಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕರ್ನಾಟಕ ಕಾಂಗ್ರೆಸ್ ನಾಯಕರು ಹಾಗೂ ಪ್ರತಿನಿಧಿಗಳು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು. ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಬಳ್ಳಾರಿಯಲ್ಲಿ ಮತದಾನ ಮಾಡಿದರು.

ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News