ಸಾವರ್ಕರ್ ಮತ್ತವರ ಲೆಫ್ಟಿನೆಂಟ್ ಗೋಡ್ಸೆ ಮತ್ತು ಗಾಂಧಿ ಹತ್ಯೆ ಪಿತೂರಿ

Update: 2022-10-18 06:12 GMT

ಗೋಡ್ಸೆಗೆ ಸಾವರ್ಕರ್ ಜೊತೆ ನಿಕಟ ಸಂಬಂಧವಿದ್ದುದರಿಂದ ತಕ್ಷಣವೇ ದುಷ್ಕೃತ್ಯದಲ್ಲಿ ಸಾವರ್ಕರ್ ಶಾಮೀಲಾಗಿರುವ ಕುರಿತು ಶಂಕೆ ವ್ಯಕ್ತವಾಗಿತ್ತು. ಗೋಡ್ಸೆ, ಸಾವರ್ಕರ್‌ರ ನಿಕಟವರ್ತಿಯಾಗಿದ್ದನೆಂದು ಆತನ ಸಹೋದರ ಗೋಪಾಲ ಗೋಡ್ಸೆಯೇ ಮೇ 13, 1969ರಂದು ವಾಲ್ಟರ್ ಆ್ಯಂಡರ್‌ಸನ್ ಜೊತೆ ನಡೆಸಿದ ಸಂದರ್ಶನವೊಂದರಲ್ಲಿ ಮತ್ತು ತಾನು ಬರೆದ "Gandhi Ji’s Murder and After' ಪುಸ್ತಕದಲ್ಲಿ ತಿಳಿಸಿದ್ದಾನೆ. 1929ರಲ್ಲಿ ಗೋಡ್ಸೆಯ ತಂದೆಗೆ ಸಾವರ್ಕರ್ ವಾಸವಾಗಿದ್ದ ರತ್ನಗಿರಿಗೆ ವರ್ಗವಾದಾಗ ನಾಥೂರಾಮ್ ಮತ್ತು ಸಾವರ್ಕರ್ ಮೊದಲ ಬಾರಿಗೆ ಭೇಟಿಯಾಗಿದ್ದರು.



1948ರ ಜನವರಿ 30ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಹೊಸದಿಲ್ಲಿಯ ಬಿರ್ಲಾ ಹೌಸ್‌ನ ಮೈದಾನದಲ್ಲಿ ಪ್ರಾರ್ಥನಾ ಸಭೆಯಲ್ಲಿದ್ದ ಗಾಂಧೀಜಿ ಮೇಲೆ ನಾಥೂರಾಮ್ ಗೋಡ್ಸೆ ಎಂಬಾತ ಪಿಸ್ತೂಲೊಂದರಿಂದ ಒಂದಾದ ಮೇಲೊಂದರಂತೆ ಮೂರು ಗುಂಡುಗಳನ್ನು ಹಾರಿಸಿದ. ‘‘ಹೇ ರಾಮ್’’ ಎನ್ನುತ್ತಾ ನೆಲಕ್ಕುರುಳಿದ ಗಾಂಧಿ ತುಸು ಸಮಯದಲ್ಲೇ ಅಸುನೀಗಿದರು. ಗೋಡ್ಸೆಯನ್ನು ಸೆರೆಹಿಡಿದು ಬಂಧನದಲ್ಲಿ ಇರಿಸಲಾಯಿತು. ಗೋಡ್ಸೆ ಮತ್ತು ಇತರರ ವಿರುದ್ಧ ಗಾಂಧಿ ಹತ್ಯೆಗೆ ಪಿತೂರಿ ನಡೆಸಿದ ಆರೋಪವನ್ನು ಹೊರಿಸಲಾಯಿತು. ‘ರೆಕ್ಸ್ Vs ನಾಥೂರಾಮ್ ವಿ. ಗೋಡ್ಸೆ ಮತ್ತು ಇತರರು’ ಹೆಸರಿನ ಈ ಪ್ರಕರಣದ ಇತರರಲ್ಲಿ ವಿನಾಯಕ ಡಿ. ಸಾವರ್ಕರ್ ಕೂಡಾ ಒಬ್ಬರು. ಗೋಡ್ಸೆಗೆ ಸಾವರ್ಕರ್ ಜೊತೆ ನಿಕಟ ಸಂಬಂಧವಿದ್ದುದರಿಂದ ತಕ್ಷಣವೇ ದುಷ್ಕೃತ್ಯದಲ್ಲಿ ಸಾವರ್ಕರ್ ಶಾಮೀಲಾಗಿರುವ ಕುರಿತು ಶಂಕೆ ವ್ಯಕ್ತವಾಗಿತ್ತು. ಗೋಡ್ಸೆ, ಸಾವರ್ಕರ್‌ರ ನಿಕಟವರ್ತಿಯಾಗಿದ್ದನೆಂದು ಆತನ ಸಹೋದರ ಗೋಪಾಲ ಗೋಡ್ಸೆಯೇ ಮೇ 13, 1969ರಂದು ವಾಲ್ಟರ್ ಆ್ಯಂಡರ್‌ಸನ್ ಜೊತೆ ನಡೆಸಿದ ಸಂದರ್ಶನವೊಂದರಲ್ಲಿ ಮತ್ತು ತಾನು ಬರೆದ Gandhi Ji’s Murder and After (ಇಂಗ್ಲಿಷ್ ಅನುವಾದ ಪ್ರೊ. ಎಸ್. ಟಿ. ಗೋಡ್‌ಬೋಲೆ, ಸೂರ್ಯ-ಪ್ರಕಾಶನ, ನಯಿ ಸಡಕ್, ದಿಲ್ಲಿ, 1989) ಪುಸ್ತಕದಲ್ಲಿ ತಿಳಿಸಿದ್ದಾನೆ. 1929ರಲ್ಲಿ ಗೋಡ್ಸೆಯ ತಂದೆಗೆ ಸಾವರ್ಕರ್ ವಾಸವಾಗಿದ್ದ ರತ್ನಗಿರಿಗೆ ವರ್ಗವಾದಾಗ ನಾಥೂರಾಮ್ ಮತ್ತು ಸಾವರ್ಕರ್ ಮೊದಲ ಬಾರಿಗೆ ಭೇಟಿಯಾಗಿದ್ದರು. ‘‘ನಾವು ರತ್ನಗಿರಿಗೆ ಬಂದು ಬರೀ ಮೂರು ದಿನಗಳಾಗಿದ್ದಾಗ ನಾಥೂರಾಮ್ ಸಾವರ್ಕರ್‌ರನ್ನು ಭೇಟಿಯಾಗಲು ಹೋಗಿದ್ದ. ಅದು ಅವರಿಬ್ಬರ ಮೊದಲ ಭೇಟಿಯಾಗಿತ್ತು. ಅದರ ನಂತರ ಆತ ಆಗಿಂದಾಗ್ಗೆ ಸಾವರ್ಕರ್‌ರನ್ನು ಸಂದರ್ಶಿಸುತ್ತಿದ್ದ’’ (ಪುಟ 109).

ಸಾಂಗ್ಲಿಯಲ್ಲಿ ಶ್ರೀ ಕಾಶಿನಾಥಪಂತ್ ಲಿಮಯೆ ನೇತೃತ್ವದಲ್ಲಿ ಆರೆಸ್ಸೆಸ್‌ನ ಶಾಖೆಯೊಂದನ್ನು ಸ್ಥಾಪಿಸಿದಾಗ ಸಂಘದ ಚಟುವಟಿಕೆಗಳಲ್ಲಿ ಅತ್ಯಂತ ತತ್ಪರತೆಯಿಂದ ಪಾಲ್ಗೊಳ್ಳತೊಡಗಿದ ನಾಥೂರಾಮ್ ಅನತಿ ಕಾಲದಲ್ಲಿ ಅದರ ಶೈಕ್ಷಣಿಕ ವಿಭಾಗದ ಮುಖ್ಯಸ್ಥನಾದ (ಬೌದ್ಧಿಕ್ ಕಾರ್ಯವಾಹ್)........ ನಾಥೂರಾಮ್ ವೀರ ಸಾವರ್ಕರ್ ಜೊತೆ ದಿನಾ ವೈಯಕ್ತಿಕ ಸಂಪರ್ಕದಲ್ಲಿ ಇರುತ್ತಿದ್ದ. ಹೀಗಾಗಿ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಸಾವರ್ಕರ್ ಬಳಸುತ್ತಿದ್ದ ನಿಷ್ಕೃಷ್ಟ ತಾರ್ಕಿಕ ಮಾರ್ಗದ ಕುರಿತು ಚೆನ್ನಾಗಿ ಅರಿತಿದ್ದ......... (ಪುಟ 114)

ಕಾಲಿನ್ಸ್ ಮತ್ತು ಲಾಪಿಯೆರ್ ಪ್ರಕಾರ ‘ಯಾವ ನಾಯಕನಿಗೂ ಇವನಂತಹ ನಿಷ್ಠಾವಂತ ಅನುಚರ ಎಂದೂ ಇರಲಿಲ್ಲ. ಗೋಡ್ಸೆ ಸಾವರ್ಕರ್‌ರನ್ನು ದೇಶದುದ್ದಗಲಕ್ಕೂ ಹಿಂಬಾಲಿಸಿದ’.(ಲ್ಯಾರಿ ಕಾಲಿನ್ಸ್ ಮತ್ತು ಡಾಮಿನಿಕ್ ಲಾಪಿಯೆರ್, Freedom At Midnight, ಪುಟ 364)

ಗಾಂಧಿ ಹತ್ಯೆ ಸಂಭವಿಸಿದ ಮಾರನೇ ದಿನವೇ ಸಾವರ್ಕರ್ ಮನೆಯನ್ನು ಶೋಧಿಸಲಾಯಿತು. ಸಾವರ್ಕರ್‌ರ ಆತ್ಮಚರಿತ್ರೆ ರಚಿಸಿದ ಧನಂಜಯ್ ಕೀರ್ ಬರೆದಿರುವಂತೆ ‘ಗೋಡ್ಸೆ ಸಾವರ್ಕರ್‌ರ ಪ್ರತಿನಿಧಿ (ಲೆಫ್ಟಿನೆಂಟ್) ಆಗಿದ್ದುದು ಸಾವರ್ಕರ್‌ಗೆ ಹಿಂದೊದೆತ ನೀಡಿಯೇ ನೀಡುತ್ತಿತ್ತು.’ ಸಾವರ್ಕರ್‌ರನ್ನು ಮುಂಬೈ ಸಾರ್ವಜನಿಕ ರಕ್ಷಣಾಕ್ರಮ ಕಾಯ್ದೆ, 1947ರ ಅನ್ವಯ ಫೆಬ್ರವರಿ 5ರಂದು ಹೊತ್ತಿಗೆ ಮುಂಚೆಯೇ ಬಂಧಿಸಿ ಲಾಕಪ್ಪಿನಲ್ಲಿ ಇರಿಸಲಾಯಿತು. ಫೆಬ್ರವರಿ 22ರಂದು ಆತ ಪೊಲೀಸ್ ಆಯುಕ್ತರಿಗೆ ಪತ್ರವೊಂದನ್ನು ಬರೆದು ‘ನನ್ನನ್ನು ಷರತ್ತುಬದ್ಧವಾಗಿ ಬಿಡುಗಡೆಗೊಳಿಸಿದಲ್ಲಿ ಆ ಷರತ್ತಿನ ಮೇರೆಗೆ ಸರಕಾರ ಅಪ್ಪಣೆ ಮಾಡಬಹುದಾದಷ್ಟು ಅವಧಿಗೆ ಯಾವುದೇ ಕೋಮುವಾದಿ ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ವಾಗ್ದಾನ ಮಾಡಬೇಕೆಂದು ಸರಕಾರ ಅಪೇಕ್ಷೆಪಟ್ಟಲ್ಲಿ ಅದಕ್ಕೆ ತಾನು ಸಿದ್ಧ’ ಎಂದು ತಿಳಿಸಿದ.

ಈ ಪತ್ರ ಬರೆಯುವುದರಿಂದ ಆತನಿಗೆ ತನ್ನ ಮೇಲೆ ಜರುಗಲಿದ್ದ ಕಾನೂನುಕ್ರಮವನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಕಾನೂನುಕ್ರಮ ನಿಸ್ಸಂದೇಹವಾಗಿಯೂ ಸದ್ಯದಲ್ಲೇ ಜರುಗಲಿದೆ ಎಂಬುದು ಆತನಿಗೆ ಗೊತ್ತಿತ್ತು. ಸಾವರ್ಕರ್‌ರ ಈ ಅವಮಾನಕರ ಮತ್ತು ಯಾವುದೇ ಪೂರ್ವನಿರ್ಧರಿತ ಮಿತಿಗಳಿರದ ವಾಗ್ದಾನದ ಹಿಂದೆ ರಾಜಕೀಯ ಗುರಿಗಳಿದ್ದಿದ್ದರೆ ಸರಕಾರದ ಕೆಲಸ ಕೇವಲ ಅದನ್ನು ಅಂಗೀಕರಿಸುವುದಷ್ಟೆ ಆಗಿತ್ತು. ಆದರೆ ಅಲ್ಲಿ ರಾಜಕೀಯ ಗುರಿಗಳು ಇರಲಿಲ್ಲ. ಗಾಂಧೀಜಿ ಕೊಲೆಯಾದ ನಂತರದಲ್ಲಿ ಖುದ್ದು ಪೊಲೀಸ್ ಆಯುಕ್ತ ಜೆ.ಎಸ್. ಭರೂಚಾರೇ ಸಾವರ್ಕರ್‌ರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಆತ ತನಗೂ ಕೊಲೆಗೂ ಸಂಬಂಧವಿರುವುದನ್ನು ಖಡಾಖಂಡಿತವಾಗಿ ನಿರಾಕರಿಸಿದರು. ಚುರುಕು ಬುದ್ಧಿಯ ಭರೂಚಾರಿಗೆ ಇದು ಅನುಮಾನಾಸ್ಪದವಾಗಿ ಕಂಡಿತು.

ಇದಾಗಿ 20 ವರ್ಷಗಳು ಗತಿಸಿದ ಬಳಿಕ ರಚಿಸಲಾದ ಮಹಾತ್ಮಾ ಗಾಂಧಿ ಕೊಲೆಯ ಒಳಸಂಚಿನ ತನಿಖೆಗಾಗಿರುವ ವಿಚಾರಣಾ ಆಯೋಗದ ನೇತೃತ್ವ ವಹಿಸಿದ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರಾಗಿದ್ದ ಜೀವನ್‌ಲಾಲ್ ಕಪೂರ್ ಇದರ ಬಗ್ಗೆ ಈ ಕೆಳಗಿನಂತೆ ಬರೆದಿದ್ದಾರೆ:

‘‘ಅದರಿಂದ (ಸಾವರ್ಕರ್‌ರ ನಿರಾಕರಣೆಯಿಂದ) ಭರೂಚಾ ಇದೇಕೋ ಸರಿಯಿಲ್ಲ ಎಂಬ ತೀರ್ಮಾನಕ್ಕೆ ಬಂದರು. ತಕ್ಷಣ ಮುಂಬೈ ಪ್ರಾಂತದ ಗೃಹಸಚಿವರಾಗಿದ್ದ ಮೊರಾರ್ಜಿ ದೇಸಾಯಿಯವರನ್ನು ಭೇಟಿಯಾಗಿ ತನಗೆ ಸಾವರ್ಕರ್ ಮೇಲೆ ಸಂಶಯವಿದೆ ಎಂದರು. ಸಾವರ್ಕರ್ ತನಗೆ ಹೇಳಿದ ವಿಷಯಗಳನ್ನು ಮೊರಾರ್ಜಿಯವರಿಗೆ ತಿಳಿಸಿದರು. ಆಗ ಮೊರಾರ್ಜಿ ‘ನೀವೇಕೆ ಅವರನ್ನು ಬಂಧಿಸುತ್ತಿಲ್ಲ?’ ಎಂದು ಕೇಳಿದರು. ಸಾವರ್ಕರ್ ನಿಜಕ್ಕೂ ಅಸ್ವಸ್ಥರಾಗಿದ್ದರೆೆಂದು ಭರೂಚಾ ಉತ್ತರಿಸಿದರು.......... ಇಲ್ಲಿ, ಸಾವರ್ಕರ್ ಅಸ್ವಸ್ಥರಾಗಿರುವಂತೆ ನಟಿಸುತ್ತಿದ್ದರೆಂದು ಜಮ್ಶೇಡ್ ಡಿ. ನಗರ್‌ವಾಲಾರು ಆಯೋಗದ ಮುಂದೆ ಸಾಕ್ಷಿ ನುಡಿದಿರುವುದನ್ನು ಗಮನಿಸಬಹುದಾಗಿದೆ.’’

ಕೇವಲ 32ರ ಹರೆಯದ ನಗರ್‌ವಾಲಾ ಮುಂಬೈಯ ಪೊಲೀಸ್ ಉಪಆಯುಕ್ತರಾಗಿ ಮುಂಬೈ ಸಿಐಡಿ ಸ್ಪೆಷಲ್ ಬ್ರಾಂಚ್‌ನ ವಿಭಾಗ 1 ಮತ್ತು 2ರ ಹೊಣೆ ಹೊತ್ತಿದ್ದರು. ರಾಜಕೀಯ ಮಾಹಿತಿ ಸಂಗ್ರಹದ ಜವಾಬ್ದಾರಿ ವಹಿಸಿದ್ದ ಆತ ಮೊರಾರ್ಜಿ ದೇಸಾಯಿಯವರ ಗಾಢ ವಿಶ್ವಾಸಕ್ಕೆ ಪಾತ್ರರಾಗಿದ್ದರು. ನಗರ್‌ವಾಲಾರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಬಯಸಿದ ಸಚಿವರು, ಆತ ಜನವರಿ 21ರಂದು ತನ್ನನ್ನು ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಭೇಟಿಯಾಗುವಂತೆ ಆದೇಶಿಸಿದ್ದರು. ಆ ಮಾಹಿತಿ ಅವರಿಗೆ ಮುಂಬೈನ ರುಯ್ಯಾ ಕಾಲೇಜಿನಲ್ಲಿ ಆಧಮಾಗಧಿ ಮತ್ತು ಹಿಂದಿ ಭಾಷಾ ಪ್ರೊಫೆಸರ್ ಆಗಿದ್ದ ಜಗದೀಶ್ ಚಂದ್ರ ಜೈನರಿಂದ ದೊರೆತಿತ್ತು. ಪ್ರೊ. ಜೈನ್ ಆ ಇಡೀ ವೃತ್ತಾಂತವನ್ನು ತನ್ನ "I Could Not Save Bapu' ಎಂಬ ಹೊತ್ತಗೆಯಲ್ಲಿ ಹೇಳಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮದನ್‌ಲಾಲ್ ಪಹ್ವಾ ಎಂಬ ಪಂಜಾಬಿ ನಿರಾಶ್ರಿತನಿಗೆ ನೆರವು ನೀಡಿದ ಪ್ರೊ. ಜೈನ್ ಆನಂತರ ಆತನ ನಂಬುಗೆಗೆ ಪಾತ್ರರಾಗಿದ್ದರು. ಪ್ರೊ. ಜೈನ್‌ರಿಗೆ ಆತ ಗಾಂಧಿಯನ್ನು ಕೊಲ್ಲುವ ಪಿತೂರಿಯೊಂದರ ಬಗ್ಗೆ ತಿಳಿಸಿದ್ದ. ಆತನ ಸೇಠ್ (ಧಣಿ) ವಿಷ್ಣು ಆರ್. ಕರ್ಕರೆ ಕೂಡಾ ಆತನ ಹಾಗೆೆ ಅಹಮದ್‌ನಗರದ ನಿವಾಸಿಯಾಗಿದ್ದ. ಸಾವರ್ಕರ್‌ಗೆ ಮದನ್‌ಲಾಲ್‌ನ ಸಾಹಸಕೃತ್ಯಗಳ ಅರಿವಿತ್ತು. ‘‘ಸಾವರ್ಕರ್ ನನ್ನ ಬೆನ್ನು ತಟ್ಟಿ ಅದನ್ನು ಮುಂದುವರಿಸುವಂತೆ ತಿಳಿಸಿದರು’’. ಇದನ್ನೆಲ್ಲ ಕೇಳಿ ತುಂಬಾ ಆತಂಕಕ್ಕೊಳಗಾದ ಪ್ರೊ. ಜೈನ್ ಅದನ್ನು ತನ್ನ ಪುಸ್ತಕದಲ್ಲಿ ತೋಡಿಕೊಂಡಿದ್ದಾರೆ: ‘‘ಈ ಯುವಕ ಇತರರ ಪ್ರಚೋದನೆಗೊಳಗಾಗಿ ಯಾವುದಾದರೂ ಹಿಂಸಾಕೃತದಲ್ಲಿ ತೊಡಗಬಹುದು. ಅಷ್ಟೇ ಅಲ್ಲ, ಈತ ಸಾವರ್ಕರ್‌ರನ್ನು ಸಂಧಿಸಿ ಆತನ ಆಶೀರ್ವಾದವನ್ನು ಪಡೆದುಕೊಂಡಿದ್ದ.’’(ಪುಟ 15)

ಜನವರಿ 20ರ ಸ್ಫೋಟ
ಮದನ್‌ಲಾಲ್ ನಿಜಕ್ಕೂ 1948ರ ಜನವರಿ 20ರಂದು ಬಿರ್ಲಾ ಹೌಸ್‌ನಲ್ಲಿ ಒಂದು ಸಿಡಿಹತ್ತಿಯನ್ನು ಸ್ಫೋಟಿಸಿದ. ಅದರ ಪರಿಣಾಮವಾಗಿ ಅಲ್ಲಿನ ಗೋಡೆಯೊಂದು ಹಾನಿಗೀಡಾಯಿತು. ಮದನ್‌ಲಾಲ್‌ನನ್ನು ತಕ್ಷಣ ಬಂಧಿಸಲಾಯಿತು. ಆತನ ಮೇಲ್ವಿಚಾರಕರಾದ ನಾಥೂರಾಮ್ ಗೋಡ್ಸೆ, ನಾರಾಯಣ ಡಿ. ಆಪ್ಟೆ, ಗೋಡ್ಸೆಯ ಆಪ್ತಮಿತ್ರ ವಿಷ್ಣು ಕರ್ಕರೆ, ದಿಗಂಬರ್ ರಾಮಚಂದ್ರ ಬಾಡ್ಗೆ ಮತ್ತು ಬಾಡ್ಗೆಯ ಸೇವಕ ಶಂಕರ್ ಕಿಸ್ತಯ್ಯ ಸ್ಥಳದಿಂದ ಕಾಲ್ಕಿತ್ತರು.
ಪ್ರೊ. ಜೈನ್ ಮರುದಿನದ ಪತ್ರಿಕೆಗಳಲ್ಲಿ ಈ ದಾಳಿಯ ಸುದ್ದಿಯನ್ನೋದಿದಾಗ ಯಾವ ಸಂಭಾವ್ಯ ಕೇಡಿನ ಬಗ್ಗೆ ಆತ ಭಯಪಟ್ಟಿದ್ದರೋ ಅದು ದೃಢಪಟ್ಟಿದೆೆ. ಆತ ತಡಮಾಡದೆ ತನಗೆ ಗೊತ್ತಿರುವುದೆಲ್ಲವನ್ನೂ ಗೃಹಸಚಿವ ಮೊರಾರ್ಜಿ ದೇಸಾಯಿ ಮತ್ತು ಪ್ರಧಾನಿ (ಭಾರತ ಸರಕಾರ ಕಾನೂನು, 1935ರ ಅನ್ವಯ ಮುಖ್ಯಮಂತ್ರಿಗಳನ್ನು ಪ್ರಧಾನ ಮಂತ್ರಿ ಎಂದು ಸಂಬೋಧಿಸಲಾಗುತ್ತಿತ್ತು) ಬಿ.ಜಿ. ಖೇರ್‌ರಿಗೆ ತಿಳಿಸಿದರು (ಪುಟ 42).......... ಜನವರಿ 21ರಂದು ನಗರ್‌ವಾಲಾ ಜೊತೆ ಮಾತನಾಡಿದ ಗೃಹಸಚಿವರು, ಸಾವರ್ಕರ್ ಮನೆಯ ಮೇಲೆ ಪಹರೆ ಇರಿಸುವಂತೆಯೂ ಕರ್ಕರೆಯನ್ನು ಕೂಡಲೇ ಬಂಧಿಸುವಂತೆಯೂ ‘ಈ ಪಿತೂರಿಯಲ್ಲಿ ಇನ್ನೂ ಯಾರೆಲ್ಲ ಶಾಮೀಲಾಗಿದ್ದಾರೆ’ ಎಂಬುದನ್ನು ಕಂಡುಹಿಡಿಯುವಂತೆಯೂ ಸೂಚಿಸಿದರು (ಪುಟ 80).........

ಮುಂದಿನ ಕೆಲವು ದಿನಗಳಲ್ಲಿ ಪೂರ್ವ ಮಾಹಿತಿ ಇನ್ನಷ್ಟು ಖಚಿತಗೊಂಡ ಹೊರತಾಗಿಯೂ ಗಾಂಧೀಜಿಯ ಪ್ರಾಣರಕ್ಷಣೆ ಮಾಡಿ ಅವರನ್ನು ಬದುಕುಳಿಸಲು ಯಾಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಈ ಕೃತಿಯ ವ್ಯಾಪ್ತಿಗೆ ಮೀರಿದುದು. ಸದ್ಯದ ಮಟ್ಟಿಗೆ, (ಗಾಂಧಿ ಹತ್ಯೆ ಪ್ರಕರಣದ) ವಿಚಾರಣೆ ನಡೆಸಿದ ಸಮರ್ಥ ನ್ಯಾಯಾಧೀಶರಾದ ಐಸಿಎಸ್ ಅಧಿಕಾರಿ ಆತ್ಮಚರಣರು (ಜನವರಿ 20ರ ಸ್ಫೋಟ ಪ್ರಕರಣದ) ಆರೋಪಿಗಳನ್ನು ನಿಶ್ಚಿಂತೆಯಿಂದ, ಬೇಜವಾಬ್ದಾರಿಯಿಂದ ದೋಷಮುಕ್ತಗೊಳಿಸಿದ ಪೂರ್ವ ಪಂಜಾಬಿನ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎನ್.ಭಂಡಾರಿ, ಅಚರು ರಾಮ್ ಮತ್ತು ಜಿ.ಡಿ. ಖೋಸ್ಲಾರನ್ನು ಕಟುವಾಗಿ ಟೀಕಿಸಿದರೆಂದು ಹೇಳಿದರೆ ಸಾಕು. (ಕಪೂರ್ ವರದಿ, ಭಾಗ 2, ಪುಟ 356, ಪ್ಯಾರಾ 26, 112, 113 ಮತ್ತು 114) .........ಜನವರಿ 31ರಂದು ನಗರ್‌ವಾಲಾರನ್ನು ದಿಲ್ಲಿಯ ಪೊಲೀಸ್ ಸುಪರಿಂಟೆಂಡೆಂಟ್ ಆಗಿ ನೇಮಕ ಮಾಡುವ ಮೂಲಕ ಆತನಿಗೆ ಹೆಚ್ಚುವರಿ ಕರ್ತವ್ಯವನ್ನು ವಹಿಸಲಾಯಿತು. ತನಿಖೆಯ ಫಲವಾಗಿ ಗಾಂಧಿ ಹತ್ಯೆ ಒಳಸಂಚಿನ ಶಾಖೋಪಶಾಖೆಗಳು ಬಯಲಿಗೆ ಬಂದವು. ಪಿತೂರಿಕೋರರ ಗುರುತು ಪರಿಚಯ ರಹಸ್ಯವಾಗಿ ಉಳಿಯಲಿಲ್ಲ. ದಿಲ್ಲಿಯ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟರು ಹೊರಡಿಸಿದ ವಾರಂಟ್‌ಅನ್ನು ಪಾಲಿಸಿದ ದಿಲ್ಲಿ ಪೊಲೀಸರು ಸಾವರ್ಕರ್‌ರನ್ನು ಗಾಂಧಿ ಕೊಲೆ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಮಾರ್ಚ್ 11ರಂದು ಬಂಧಿಸಿದರು.

ಗಾಂಧಿ ಹತ್ಯೆಯ ವಿಚಾರಣೆ
ಮೇ 4ರಂದು ಕಾನಪುರದ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಆತ್ಮ ಚರಣರ ನೇತೃತ್ವದಲ್ಲಿ ವಿಶೇಷ ನ್ಯಾಯಾಲಯವೊಂದನ್ನು ರಚಿಸಲಾಯಿತು. ಮೇ 13ರಂದು ‘ರೆಕ್ಸ್ Vs ನಾಥೂರಾಮ್ ಗೋಡ್ಸೆೆ ಮತ್ತು ಇತರ ಎಂಟು ಮಂದಿ’ ಪ್ರಕರಣದ ವಿಚಾರಣೆಯನ್ನು ನ್ಯಾ. ಆತ್ಮಚರಣರಿಗೆ ಒಪ್ಪಿಸಲಾಯಿತು. ವಿಶೇಷ ನ್ಯಾಯಾಲಯದ ವಿಚಾರಣಾ ಕಲಾಪ ಮೇ 27ರಂದು ದಿಲ್ಲಿಯ ಕೆಂಪು ಕೋಟೆಯಲ್ಲಿ ಆರಂಭಗೊಂಡಿತು. ಆರೋಪಪಟ್ಟಿಯನ್ನು ಅದೇ ದಿನ ಸಲ್ಲಿಸಲಾಯಿತು. ಆರೋಪಿಗಳ ಪಟ್ಟಿಯಲ್ಲಿ ಸಾವರ್ಕರ್ ಏಳನೆಯವರಾಗಿದ್ದರು. ಮತ್ತೊಬ್ಬ ಆರೋಪಿ ದಿಗಂಬರ್ ಬಾಡ್ಗೆ ತಿರುಗಿ ಬಿದ್ದು ಮಾಫಿಸಾಕ್ಷಿಯಾದ ಕಾರಣ ನ್ಯಾಯಾಲಯ ಜೂನ್ 21ರಂದು ಆತನ ಅಪರಾಧವನ್ನು ಮನ್ನಾ ಮಾಡಿತು. ತನಗೆ ವಕೀಲರು ಬೇಡವೆಂದ ಬಾಡ್ಗೆ, ಘಟನೆಗಳ ಕುರಿತು ಸ್ವಇಚ್ಛೆಯಿಂದ ಯಥಾರ್ಥವಾದ ಹೇಳಿಕೆ ನೀಡುವೆನೆಂದು ಹೇಳಿದ. ಆತನನ್ನು ಒಂದು ವಾರಕ್ಕೂ ಅಧಿಕ ಕಾಲ ಪಾಟೀಸವಾಲಿಗೆ ಗುರಿಪಡಿಸಿದ ತರುವಾಯ ನ್ಯಾಯಾಲಯ ಆತ ಸತ್ಯ ಹೇಳಿರುವುದಾಗಿ ಕಂಡುಕೊಂಡಿದೆ.
ಮುಂಬೈ ಪ್ರಾಂತದ ಪ್ರಧಾನ ಸರಕಾರಿ ವಕೀಲರಾಗಿದ್ದ ಸಿ.ಕೆ. ದಫ್ತರಿಯವರು ನ್ಯಾಯಾಲಯದಲ್ಲಿ ಫಿರ್ಯಾದಿ ಪಕ್ಷದ ನೇತೃತ್ವ ವಹಿಸಿದರು. ಆದರೆ ಪ್ರಧಾನ ಅಭಿಯೋಜಕರಾಗಿದ್ದವರು ಇನ್ಯಾರೂ ಅಲ್ಲ, ಉಪಪ್ರಧಾನಿಯೂ ಕೇಂದ್ರ ಗೃಹಸಚಿವರೂ ಆಗಿದ್ದ ವಲ್ಲಭಭಾಯ್ ಪಟೇಲ್. ವಿಚಾರಣೆ ಮುಂದುವರಿದಂತೆ ಸಾವರ್ಕರ್ ಈ ದುಷ್ಕೃತ್ಯದಲ್ಲಿ ಶಾಮೀಲಾಗಿದ್ದರೆಂದು ಪಟೇಲರಿಗೂ, ಮೊರಾರ್ಜಿಯವರಿಗೂ ಮನವರಿಕೆಯಾಯಿತು. ಇದರಿಂದ ಮನನೊಂದ ಮೊರಾರ್ಜಿ ಎಪ್ರಿಲ್ 3, 1948ರಂದು ಮುಂಬೈ ವಿಧಾನ ಮಂಡಳಿಯಲ್ಲಿ ಮಾತನಾಡುತ್ತಾ ಸಾವರ್ಕರ್‌ರ ‘ಪ್ರಸಕ್ತ ಅಪಕಾರವು ಗತ ಉಪಕಾರಗಳನ್ನು ಲೆಕ್ಕಕ್ಕಿಂತ ಹೆಚ್ಚೇ ತುಂಬಿಕೊಡುತ್ತದೆ ಎಂದು ಹೇಳಿದರು.’ (ಸಾವರ್ಕರ್ ಮತ್ತು ಹಿಂದುತ್ವ, ಎ.ಜಿ. ನೂರಾನಿ, ಅಧ್ಯಾಯ 1)

ಪಟೇಲರಿಗೆ ಸಾವರ್ಕರ್‌ರ ದೋಷಿತ್ವದ ಕುರಿತು ದೃಢವಿಶ್ವಾಸ ಮೂಡಿರದಿದ್ದಲ್ಲಿ ಆರೋಪಪಟ್ಟಿ ದಾಖಲಿಸಲ್ಪಡುತ್ತಿರಲಿಲ್ಲ. ಫೆಬ್ರವರಿ 27, 1948ರಂದು ಪ್ರಧಾನಿ ನೆಹರೂರಿಗೆ ಬರೆದ ಪತ್ರದಲ್ಲಿ ಆತ ‘ಬಾಪೂಜಿ ಹತ್ಯಾ ಪ್ರಕರಣದಲ್ಲಿ ವಿಚಾರಣೆಯ ಪ್ರಗತಿ ಕುರಿತು ಹೆಚ್ಚುಕಡಿಮೆ ದಿನಂಪ್ರತಿ ತಿಳಿದುಕೊಳ್ಳುತ್ತಿರುವೆ. ಸಾಯಂಕಾಲದ ಹೆಚ್ಚಿನ ಸಮಯವನ್ನು ಸಂಜೇವಿಯೊಂದಿಗೆ ಅಂದಿನ ಪ್ರಗತಿ ಕುರಿತು ಚರ್ಚಿಸಲು ಮತ್ತು ಯಾವುದಾದರೂ ವಿಷಯಗಳು ಉದ್ಭವಿಸಿದಲ್ಲಿ ಸೂಚನೆಗಳನ್ನು ನೀಡಲು ಮೀಸಲಿಡುತ್ತೇನೆ’ ಎಂದು ಬರೆಯುತ್ತಾರೆ. ಪತ್ರದ ಅಂತ್ಯ ಪಟೇಲರ ಸ್ವಭಾವಕ್ಕನುಗುಣವಾಗಿ ಸ್ಪಷ್ಟವಾಗಿದೆ.

‘ಪಿತೂರಿಯನ್ನು ರೂಪಿಸಿ ಅದನ್ನು ಕಾರ್ಯಗತಗೊಳಿಸಿರುವುದು ನೇರವಾಗಿ ಸಾವರ್ಕರ್ ಕೈಕೆಳಗಿದ್ದ ಹಿಂದೂ ಮಹಾಸಭಾದ ಒಂದು ಮತಾಂಧ ತಂಡ....... ಸಹಜವಾಗಿಯೇ ಗಾಂಧಿಯ ಚಿಂತನಾಕ್ರಮ ಮತ್ತು ಕಾರ್ಯನೀತಿಗಳನ್ನು ತೀವ್ರವಾಗಿ ವಿರೋಧಿಸಿದ್ದ ಆರೆಸ್ಸೆಸ್ ಮತ್ತು ಮಹಾಸಭಾದ ಕೆಲವು ಮಂದಿ ಹತ್ಯೆಯನ್ನು ಸ್ವಾಗತಿಸಿದರು. ಆದರೆ ಇದರಿಂದಾಚೆಗೆ, ನಮಗೆ ಲಭಿಸಿರುವ ಪುರಾವೆಗಳ ಆಧಾರದಲ್ಲಿ ಆರೆಸ್ಸೆಸ್ ಅಥವಾ ಹಿಂದೂ ಮಹಾಸಭಾದ ಇತರ ಯಾವುದೇ ಸದಸ್ಯರ ಮೇಲೆ ದೋಷಾರೋಪಣೆ ಹೊರಿಸಲು ಸಾಧ್ಯವಾಗದೆಂದು ನನಗನಿಸುತ್ತದೆ.’

 ಬೆಳಕಿಗೆ ಬಂದ ಪುರಾವೆಗಳ ಹೊರತಾಗಿಯೂ, ರಾಜಕೀಯ ನಿವೃತ್ತಿಯ ವಾಗ್ದಾನಕ್ಕೆ ಸಿದ್ಧನೆಂದು ಗುಲಾಮಿ ಮನೋಭಾವವನ್ನು ಪ್ರದರ್ಶಿಸಿದ ಹೊರತಾಗಿಯೂ ಸಾವರ್ಕರ್‌ರನ್ನು ಪಾರುಮಾಡುವುದಕ್ಕಾಗಿ ಶ್ಯಾಮ್ ಪ್ರಸಾದ್ ಮುಖರ್ಜಿ ತನ್ನ ಪ್ರಭಾವ ಬೀರಲೆತ್ನಿಸಿದರು. ವಿಶೇಷ ನ್ಯಾಯಾಲಯ ರಚನೆಯಾದ ಮೇ 4ರಂದೇ ಪಟೇಲರಿಗೆ ಪತ್ರವೊಂದನ್ನು ಬರೆದು ಒಂದಷ್ಟು ಖಚಿತ ಪುರಾವೆಗಳಿಲ್ಲದ ಪಕ್ಷದಲ್ಲಿ ಈ ವಯಸ್ಸಿನಲ್ಲಿ ಆತನ ಮೇಲೆ ಕೊಲೆ ಆರೋಪವನ್ನು ಹೊರಿಸಬಾರದು ಎಂದರು.(ದರ್ಗಾದಾಸ್ (ಸಂ), Sardar Patel’s Correspondence 1945-50, ನವಜೀವನ ಪ್ರಕಟಣಾಲಯ, ಅಹಮದಾಬಾದ್, 1973, ಸಂಪುಟ 6, ಪುಟ 63)

ತಡಮಾಡದೆ ಮೇ 6, 1948ರಂದು ಉತ್ತರಿಸಿದ ಪಟೇಲರು, ಸಾವರ್ಕರ್‌ರನ್ನು ಸೇರಿಸುವ ಸಮಸ್ಯೆಗೆ ಕೇವಲ ಕಾನೂನಿನ ಮತ್ತು ನ್ಯಾಯಶಾಸ್ತ್ರದ ದೃಷ್ಟಿಕೋನದಿಂದ ಕೈಹಾಕಬೇಕು, ಅದರೊಳಗೆ ರಾಜಕೀಯ ವಿಚಾರಗಳನ್ನು ಎಳೆದು ತರಬಾರದು ಎಂದು ಪ್ರಧಾನ ಸರಕಾರಿ ವಕೀಲರು, ಇತರ ಕಾನೂನು ಸಲಹೆಗಾರರು ಮತ್ತು ತನಿಖಾಧಿಕಾರಿಗಳೆಲ್ಲರಿಗೂ ತಾನು ಸ್ಪಷ್ಟವಾಗಿ ತಿಳಿಸಿರುವೆ ಎಂದು ಬರೆದರು. ಅಷ್ಟೇ ಅಲ್ಲ,

‘‘ನನ್ನ ಸೂಚನೆಗಳು ತೀರ ನಿಖರವಾಗಿದ್ದವಲ್ಲದೆ ಸಂಶಯಾತೀತವೂ ಆಗಿದ್ದವು. ಅವುಗಳನ್ನು ಅನುಸರಿಸಲಾಗುವ ಬಗ್ಗೆ ನನಗೆ ಅನುಮಾನವಿಲ್ಲ. ಅವರುಗಳು ಸಾವರ್ಕರ್‌ರನ್ನು ಸೇರಿಸಬೇಕೆಂಬ ಅಭಿಪ್ರಾಯಕ್ಕೆ ಬಂದರೆ ಕ್ರಮ ಕೈಗೊಳ್ಳುವ ಮುನ್ನ ಆ ದಾಖಲೆಪತ್ರಗಳೆಲ್ಲವನ್ನೂ ನನಗೆ ಸಲ್ಲಿಸಬೇಕು ಎಂದೂ ತಿಳಿಸಿದ್ದೇನೆ’’ ಎಂದರು........... ಪಟೇಲರು ಓರ್ವ ಅತ್ಯಂತ ಸಮರ್ಥ ಕ್ರಿಮಿನಲ್ ಲಾಯರ್. ಕಾನೂನಿನಲ್ಲಿ ನಿಷ್ಣಾತರಾಗಿದ್ದ ಆತ ದಾಖಲೆಪತ್ರಗಳನ್ನು ಜಾಗರೂಕತೆಯಿಂದ ಓದಿದ್ದರು. ಸಾವರ್ಕರ್ ಮೇಲಿನ ಪ್ರಕರಣ ಮಾಫಿಸಾಕ್ಷಿ ದಿಗಂಬರ್ ಬಾಡ್ಗೆಯ ಸಾಕ್ಷ್ಯವನ್ನು ಅವಲಂಬಿಸಿದೆ ಎನ್ನುವುದು ಆತನಿಗೆ ಗೊತ್ತಿತ್ತು. ಬಾಡ್ಗೆ ತಾನು ಪೊಲೀಸರಿಗೆ ತಿಳಿಸಿದುದನ್ನೇ ನ್ಯಾಯಾಲಯದಲ್ಲಿ ಪ್ರಮಾಣ ಮಾಡಿ ಹೇಳಿದ್ದ. ಅದೇನೆಂದರೆ ತಾನು ಗೋಡ್ಸೆ ಮತ್ತು ಆಪ್ಟೆ ಜೊತೆ ‘ಸಾವರ್ಕರ್ ಸದನ’ಕ್ಕೆ ಎರಡು ಬಾರಿ (ಜನವರಿ 14 ಮತ್ತು 17ರಂದು) ಹೋಗಿದ್ದೆ. ಅಂದರೆ ಜನವರಿ 20ರಂದು ಮದನ್‌ಲಾಲ್ ಸಿಡಿಹತ್ತಿಯನ್ನು ಸ್ಫೋಟಿಸಿದ ದಿನಕ್ಕೂ, ಜನವರಿ 30ರಂದು ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ ದಿನಕ್ಕೂ ಸ್ವಲ್ಪವೇ ಸಮಯದ ಮುನ್ನ. ಜನವರಿ 17ರಂದು ಸಾವರ್ಕರ್ ತಮಗೆಲ್ಲರಿಗೂ ವಿದಾಯ ಹೇಳುತ್ತಾ ‘‘ಜಯಶಾಲಿಗಳಾಗಿ ಮರಳಿ’’ ಎಂದುದನ್ನು ಕೇಳಿದೆ. ದಾರಿಯಲ್ಲಿ ‘‘ಗಾಂಧೀಜಿಯ 100 ವರ್ಷಗಳು ಕಳೆದಿವೆ. ಕಾರ್ಯವನ್ನು ಯಶಸ್ವಿಯಾಗಿ ಮಾಡಿಮುಗಿಸುವ ಬಗ್ಗೆ ಅನುಮಾನವಿಲ್ಲ’’ ಎಂದು ಸಾವರ್ಕರ್ ಭವಿಷ್ಯ ನುಡಿದುದನ್ನು ಆಪ್ಟೆ ಬಾಡ್ಗೆಗೆ ತಿಳಿಸಿದ.

ಸಹಜವಾಗಿಯೇ ಅಪರಾಧ ನಿರ್ಣಯಕ್ಕೆ ಬರೀ ಇಷ್ಟು ಸಾಲದೆಂದು ಪಟೇಲರಿಗೆ ತಿಳಿದಿತ್ತು. ಅದಕ್ಕೆ ವಿಧ್ಯುಕ್ತ ದೃಢೀಕರಣದ ಅವಶ್ಯಕತೆಯಿತ್ತು. ನಿಸ್ಸಂದೇಹವಾಗಿಯೂ ಆತನ ಬಳಿ ವಿಧ್ಯುಕ್ತ ದೃಢೀಕರಣ ಇತ್ತು. ಆದರೆ ಕಾನೂನಿನ ದೃಷ್ಟಿಯಲ್ಲಿ ಅದರ ಬಗ್ಗೆ ನ್ಯಾಯಾಲಯದ ಅಭಿಪ್ರಾಯವೇನು ಎಂಬುದರ ಮೇಲೆ ಎಲ್ಲವೂ ಹೊಂದಿಕೊಂಡಿತ್ತು....... ಬಾಡ್ಗೆ ತನ್ನ ಸಾಕ್ಷ್ಯದಲ್ಲಿ ಸತ್ಯ ನುಡಿದಿದ್ದಾನೆೆ, ಆತ ಪಾಟೀಸವಾಲಿನಿಂದ ವಿಚಲಿತನಾಗಿಲ್ಲವೆಂದು ನ್ಯಾಯಾಧೀಶರು ಸಹ ಪ್ರಮಾಣೀಕರಿಸಿದರು. ಮಾಫಿಸಾಕ್ಷಿಯಾಗಿ ಪರಿವರ್ತನೆಗೊಳ್ಳುವ ಸಹಾಪರಾಧಿಯೊಬ್ಬ ನುಡಿಯುವ ಸಾಕ್ಷಕ್ಕೆ ದೃಢೀಕರಣದ ಅಗತ್ಯವಿದೆ ಎಂಬುದು ಒಂದು ಕಟ್ಟುನಿಟ್ಟಾದ ಕಾನೂನಿನ ನಿಯಮವಲ್ಲ. ಅದಕ್ಕಿಂತ ಹೆಚ್ಚಾಗಿ ಅದೊಂದು ವಿವೇಕದ ನಿಯಮ........ ಅದಕ್ಕೆ ಆಧಾರವಾಗಿರುವುದು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಬಳಸಲಾಗುವ ಒಂದು ನಿಯಮ. ಇದರ ಪ್ರಕಾರ ಸಿವಿಲ್ ಪ್ರಕರಣಗಳಲ್ಲಿ ಸಂಭಾವ್ಯತೆಗಳನ್ನು ತುಲನೆ ಮಾಡಿ ಅದರ ಆಧಾರದ ಮೇಲೆ ತೀರ್ಪುಗಳನ್ನು ನೀಡಬೇಕು ಎಂದಿದ್ದರೆ ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಿತ್ವವನ್ನು ಅತಿರೇಕವಲ್ಲದ ಅನುಮಾನಕ್ಕೆ ಅತೀತವಾಗಿ (beyond reasonable doubt) ಸಾಬೀತುಪಡಿಸಬೇಕು ಎಂದಿದೆ. ಹಿಂದೆ ನಿರ್ಣಯವಾಗಿರುವ ತೀರ್ಪುಗಳನ್ನು ಆಧರಿಸಿದ ವಿಧಿಸಂಚಯ (case laws) ರುಜುವಾತುಪಡಿಸಿರುವಂತೆ ಪ್ರಕೃತ ವಿವರಗಳನ್ನು ಸ್ವತಂತ್ರವಾಗಿ ದೃಢೀಕರಿಸುವ ಅವಶ್ಯಕತೆ ಇದೆಯಾದರೂ ಪ್ರತಿಯೊಂದು ವಿವರವನ್ನೂ ದೃಢೀಕರಿಸುವ ಅಗತ್ಯವಿಲ್ಲ.......... ಆದರೂ ನ್ಯಾ. ಆತ್ಮ ಚರಣರು ಫೆಬ್ರವರಿ 10, 1949ರಂದು ನೀಡಿದ ತೀರ್ಪು ಸಾವರ್ಕರ್‌ರನ್ನು ದೋಷಮುಕ್ತಗೊಳಿಸಿತು. ಮಾನ್ಯ ನ್ಯಾಯಾಧೀಶರು ಮಾಫಿಸಾಕ್ಷಿ ಬಾಡ್ಗೆ ಸತ್ಯ ಹ�

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News