ಹೈದರಾಬಾದ್:ಬಲವಂತದಿಂದ ಮಸೀದಿಗೆ ನುಗ್ಗಿ ಹಿಂದು ಧಾರ್ಮಿಕ ವಿಧಿಗಳನ್ನು ನಡೆಸಿದ ಗುಂಪು
ಹೊಸದಿಲ್ಲಿ,ಅ.18: ಇಲ್ಲಿಯ ಮಲ್ಕಂ ಚೆರುವು(Malkam Cheruvu) ಪ್ರದೇಶದಲ್ಲಿಯ ಮಸೀದಿಯ ಆವರಣಕ್ಕೆ ಹಾನಿಯನ್ನುಂಟು ಮಾಡಿ ಬಲವಂತದಿಂದ ಒಳಕ್ಕೆ ನುಗ್ಗಿದ ಅಪರಿಚಿತ ವ್ಯಕ್ತಿಗಳ ಗುಂಪೊಂದು ಅಲ್ಲಿ ಹಿಂದು ಧಾರ್ಮಿಕ ವಿಧಿಗಳನ್ನು ನಡೆಸಿದ್ದು,ಇದು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ ಎಂದು ವರದಿಗಳು ತಿಳಿಸಿವೆ. ಅಕ್ಟೋಬರ್(October) 16 ರಂದು ತಡರಾತ್ರಿ ಈ ಘಟನೆ ನಡೆದಿದೆ.
ಕಟ್ಟಾ ಮೈಸಮ್ಮ ದೇವಸ್ಥಾನದ ಎದುರಿನ ಕುತ್ಬ್ ಶಾಹಿ ಮಸೀದಿ(Qutb Shahi Mosque)ಯು ಪರಂಬೋಕು ಅಥವಾ ಸಾರ್ವಜನಿಕ ಸ್ಥಳದಲ್ಲಿದೆ. ಮಾಧ್ಯಮಗಳ ವರದಿಯಂತೆ ಮಸೀದಿಯು 400 ವರ್ಷಗಳಷ್ಟು ಪುರಾತನವಾಗಿದೆ.
ಮಸೀದಿ ಪ್ರದೇಶವನ್ನು ಬಲವಂತದಿಂದ ಪ್ರವೇಶಿಸಿದವರು ರಾಯದುರ್ಗಂ ಗ್ರಾಮಸ್ಥರಾಗಿದ್ದರು ಎಂದು ಪೊಲೀಸರು ತಿಳಿಸಿದರು. ಗುಂಪು ಧಾರ್ಮಿಕ ವಿಧಿಯ ಅಂಗವಾಗಿ ಆಡೊಂದನ್ನು ಬಲಿ ನೀಡಿದ್ದಲ್ಲದೆ,ಅಲ್ಲಿ ಬಲವಂತದಿಂದ ವಿಗ್ರಹವೊಂದನ್ನು ಇರಿಸಿತ್ತು.
ರಸ್ತೆ ಅಗಲೀಕರಣ ಯೋಜನೆಯಾಗಿ ಮೂಲ ಕಟ್ಟಾ ಮೈಸಮ್ಮ ದೇವಸ್ಥಾನವನ್ನು ನೆಲಸಮಗೊಳಿಸಲು ಆಡಳಿತವು ಉದ್ದೇಶಿಸಿತ್ತು. ಆದರೆ ಈ ವರ್ಷದ ಪೂರ್ವಾರ್ಧದಲ್ಲಿ ಬಿಜೆಪಿಗೆ ಸೇರಿದ ಗುತ್ತಿಗೆದಾರನೋರ್ವನ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದ ಬಳಿಕ ದೇವಸ್ಥಾನದ ಮರುನಿರ್ಮಾಣಕ್ಕಾಗಿ ಬೇರೆ ಜಾಗವನ್ನು ಹಂಚಿಕೆ ಮಾಡಲಾಗಿತ್ತು. ಇದು ಮಸೀದಿಯಿರುವ ಪರಂಬೋಕು ಜಮೀನಿನ ಭಾಗವಾಗಿದೆ.
ಪರ್ಯಾಯ ಭೂಮಿಯನ್ನು ಗುರುತಿಸಿಲ್ಲ ಮತ್ತು ನಿರ್ಮಾಣ ಕಾರ್ಯಕ್ಕಾಗಿ ಹಸ್ತಾಂತರಿಸಿಲ್ಲ ಎಂದು ಕಟ್ಟಾ ಮೈಸಮ್ಮನ ಭಕ್ತರು ಆಕ್ರೋಶಗೊಂಡಿದ್ದು,ಇದು ಮಸೀದಿಗೆ ಬಲವಂತದಿಂದ ನುಗ್ಗಿ ಧಾರ್ಮಿಕ ವಿಧಿಗಳ ಆಚರಣೆಗೆ ಕಾರಣವಾಗಿತ್ತು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಪೊಲೀಸರ ಉಪಸ್ಥಿತಿಯಲ್ಲಿಯೇ ಗುಂಪು ಈ ಕೃತ್ಯವನ್ನು ನಡೆಸಿತ್ತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳಲಾಗಿರುವ ಕೆಲವು ವೀಡಿಯೊಗಳು ಆರೋಪಿಸಿವೆ. ಪೊಲೀಸರು ಮಸೀದಿ ಜಾಗದಲ್ಲಿ ಅತಿಕ್ರಮ ಪ್ರವೇಶಕ್ಕಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.