×
Ad

ಕೇರಳದ ಜೈಲಿನಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಅತ್ಯಾಚಾರ, ಕೊಲೆ ಆರೋಪಿ ಉಡುಪಿಯಲ್ಲಿ ಬಂಧನ

Update: 2022-10-18 21:55 IST
ರಾಜೇಶ 

ಉಡುಪಿ: ಕೇರಳ ರಾಜ್ಯದಲ್ಲಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಿಂದ ತಪ್ಪಿಸಿಕೊಂಡು ಬ್ರಹ್ಮಾವರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ರಾಜ್ಯದ ತಿರುವಂತಪುರಂ ಜಿಲ್ಲೆಯ ರಾಜೇಶ (39) ಬಂಧಿತ ಆರೊಪಿ. ಈತ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂದಿತನಾಗಿದ್ದು, ರಾಜೇಶ್ 2012ರಲ್ಲಿ ತಿರುವಂತಪುರಂ ಗ್ರಾಮಾಂತರ ಜಿಲ್ಲೆಯ ವಾಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದನು. ಈ ಬಗ್ಗೆ ನ್ಯಾಯಾಲಯವು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ 2013ರಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು, ನಂತರ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿತ್ತು.

ತಿರುವಂತಪುರಂ ಕೇಂದ್ರ ಕಾರಾಗೃಹದಲ್ಲಿ ಇದ್ದ ಈತನನ್ನು  ನಂತರ ನೆಟ್ಟು ಕತಾರಿ ಬಯಲು ಜೈಲಿಗೆ ವರ್ಗಾಯಿಸಲಾಗಿತ್ತು.

2020ರ ಡಿ.23 ರಂದು ಈತ ನೆಟ್ಟು ಕತಾರಿ ಬಯಲು ಜೈಲಿ ನಿಂದ ಪರಾರಿಯಾಗಿದ್ದನು. ಈ ಬಗ್ಗೆ ನೇಯಾರ್ ಡ್ಯಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿತ್ತು. ಜೈಲಿನಿಂದ ಪರಾರಿಯಾಗಿದ್ದ ಆರೋಪಿ ರಾಜೇಶ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಸದ್ಯ ಈತ  ಉಡುಪಿಯಲ್ಲಿ ವಾಸವಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದ ತಂಡ ಆರೋಪಿಯನ್ನು ಬ್ರಹ್ಮಾವರ ತಾಲ್ಲೂಕಿನ ಬಿಲ್ಲಾಡಿ ಗ್ರಾಮದ ಕಬ್ಬಿನ ಹಿತ್ಲು ಎಂಬಲ್ಲಿ  ವಶಕ್ಕೆ ಪಡೆದು ಕೇರಳ ಪೊಲೀಸರಿಗೆ ಮಾಹಿತಿ ನೀಡಿತ್ತು. ಕೇರಳ ಪೊಲೀಸರು ಇಂದು  ಆರೋಪಿ ರಾಜೇಶನನ್ನು ವಶಕ್ಕೆ ಪಡೆದು ಕುಂದಾಪುರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.  ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು  ಕೇರಳಕ್ಕೆ ಕರೆದುಕೊಂಡು ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News