ಗುಜರಾತ್‌ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ 8 ನಗರಗಳಲ್ಲಿ ಪ್ರತಿ 4 ಕಿ.ಮೀ.ಗೆ ಸರಕಾರಿ ಶಾಲೆ ನಿರ್ಮಾಣ: ಸಿಸೋಡಿಯಾ
ಅಹ್ಮದಾಬಾದ್, ಅ. 18: ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ (ಆಪ್)ಅಧಿಕಾರಕ್ಕೆ ಬಂದರೆ ಒಂದು ವರ್ಷದ ಒಳಗೆ 8 ನಗರಗಳಲ್ಲಿ ಪ್ರತಿ ನಾಲ್ಕು ಕಿ.ಮೀ.ಗೆ ಸರಕಾರಿ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಮಂಗಳವಾರ ಹೇಳಿದ್ದಾರೆ.
ದಿಲ್ಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಸಿಬಿಐಯಿಂದ ಸೋಮವಾರ 9 ಗಂಟೆಗೂ ಅಧಿಕ ಕಾಲ ವಿಚಾರಣೆಗೆ ಒಳಗಾದ ಸಿಸೋಡಿಯಾ, ತಾನು ಎಲ್ಲದಕ್ಕೂ ಸಿದ್ದ. ಜೈಲಿಗೆ ಹೋಗಲು ಕೂಡ ಸಿದ್ಧ. ಆದರೆ, ಗುಜರಾತ್‌ನಲ್ಲಿ ಶಾಲೆಗಳನ್ನು ನಿರ್ಮಿಸುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಗುಜರಾತ್‌ನ ಜನರು ತಮ್ಮ ಮಕ್ಕಳಿಗಾಗಿ ಶಾಲೆಗಳನ್ನು ನಿರ್ಮಿಸಲು ನಿರ್ಧರಿಸಿದ್ದಾರೆ ಹಾಗೂ ಅವರು ಶಾಲೆಗಳನ್ನು ನಿರ್ಮಿಸುವ ಪಕ್ಷವನ್ನು ಆಯ್ಕೆ ಮಾಡಲಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಪ್‌ನ ಸಮೀಕ್ಷೆ ಪ್ರಕಾರ ಗುಜರಾತ್‌ನಲ್ಲಿ 48,000 ಸರಕಾರಿ ಶಾಲೆಗಳಿವೆ. ಅದರಲ್ಲಿ 32,000 ಸರಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ ಎಂದು ಸಿಸೋಡಿಯಾ ಪ್ರತಿಪಾದಿಸಿದರು.
ಆಪ್ ಅಧಿಕಾರಕ್ಕೆ ಬಂದರೆ, ಅಹ್ಮದಾಬಾದ್, ಸೂರತ್, ವಡೋದರಾ, ಜಾಮ್‌ನಗರ್, ರಾಜ್‌ಕೋಟ್, ಭಾವನಗರ್, ಗಾಂಧಿನಗರ ಹಾಗೂ ಜುನಾಗಡ -ಹೀಗೆ 8 ನಗರಗಳಲ್ಲಿ ಪ್ರತಿ ನಾಲ್ಕು ಕಿ.ಮೀ.ಗೆ ಸರಕಾರಿ ಶಾಲೆಯನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಒಂದು ವರ್ಷದ ಒಳಗೆ ಪ್ರತಿ ನಾಲ್ಕು ಕಿ.ಮೀ.ಗೆ ಭವ್ಯವಾದ ಸರಕಾರಿ ಶಾಲೆಗಳನ್ನು ನಿರ್ಮಿಸಲಾಗುವುದು. ಈ 8 ಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಚೆನ್ನಾಗಿರಲಿವೆ ಎಂದು ಸಿಸೋಡಿಯಾ ಹೇಳಿದರು.
‘‘ನಾವು ಗುಜರಾತ್‌ನ ಬಜೆಟ್ ಅನ್ನು ಕೂಡ ಅಧ್ಯಯನ ನಡೆಸಿದ್ದೇವೆ. ಬಿಜೆಪಿ ಸರಕಾರದ 27 ವರ್ಷಗಳ ಆಡಳಿತದಲ್ಲಿ ಶಾಲೆಗೆ ಸಂಬಂಧಿಸಿ ಯಾವುದೇ ಕೆಲಸ ನಡೆದಿಲ್ಲ ಎಂಬುದನ್ನು ಜನರಿಗೆ ತಿಳಿಸಲು ನಾನು ಬಯಸುತ್ತೇನೆ’’ ಎಂದು ಸಿಸೋಡಿಯಾ ಹೇಳಿದ್ದಾರೆ.